Mysore
20
mist

Social Media

ಶುಕ್ರವಾರ, 10 ಜನವರಿ 2025
Light
Dark

ಸಿದ್ದಾಪುರದಲ್ಲಿ ಕಾಡಾನೆ ಕಾರ್ಯಾಚರಣೆ ಯಶಸ್ವಿ: ರೈತರಿಗೆ ಉಪಟಳ ನೀಡುತ್ತಿದ್ದ ಪುಂಡಾನೆ ಸೆರೆ

ಸಿದ್ದಾಪುರ: ವ್ಯಾಪಕ ಕೃಷಿ ಹಾನಿಗೆ ಕಾರಣವಾಗಿ ಗ್ರಾಮೀಣರ ಬದುಕನ್ನು ಹದಗೆಡಿಸಿದ್ದ ಪುಂಡಾನೆಯೊಂದನ್ನು ಕರಡಿಗೋಡಿನ ಭುವನಹಳ್ಳಿ ಕಾಫಿ ತೋಟದಲ್ಲಿ ಅರಣ್ಯ ಇಲಾಖಾ ತಂಡ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಕಳೆದ ಎರಡು ದಿನಗಳ ಕಾಲ ಅರಣ್ಯ ಇಲಾಖೆಯ ತಂಡ ನಡೆಸಿದ ವ್ಯಾಪಕ ಕಾರ್ಯಾಚರಣೆ ಇಂದು ಬೆಳಗ್ಗೆ 10.30ರ ಸುಮಾರಿಗೆ ಪುಂಡಾನೆಯ ಸೆರೆಯೊಂದಿಗೆ ಮುಕ್ತಾಯವಾಗಿದ್ದು, ಸೆರೆಯಾಗಿರುವ ಕಾಡಾನೆ ಅಂದಾಜು 22 ವರ್ಷದ್ದೆಂದು ಅಂದಾಜಿಸಲಾಗಿದೆ.

ತೀವ್ರ ಕಾರ್ಯಾಚರಣೆ- ಕರಡಿಗೋಡು ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಇರುವುದನ್ನು ಅರಣ್ಯ ಇಲಾಖಾ ತಂಡ ಗುರುತಿಸಿ, ಎರಡು ದಿನಗಳ ಹಿಂದೆಯೇ ಅವುಗಳ ಜಾಡು ಹಿಡಿದಿತ್ತು. ಮಂಗಳವಾರ ಇನ್ನೇನು ಕಾಡಾನೆ ಸೆರೆಯಾಯಿತು ಎನ್ನುವಷ್ಟರಲ್ಲೆ ಕಾಡಾನೆಗಳ ಹಿಂಡಿನ ಕೆಲ ಆನೆಗಳು ಅರಣ್ಯ ಸಿಬ್ಬಂದಿಗಳ ಮೇಲೆ ತಿರುಗಿ ಬಿದ್ದು, ಯೋಜನೆ ವಿಫಲವಾಗಿತ್ತು.

ಬುಧವಾರ ಬೆಳಗ್ಗಿನಿಂದಲೆ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖಾ ತಂಡ ಕರಡಿಗೋಡಿನ ಭುವನಳ್ಳಿ ಕಾಫಿ ತೋಟದಲ್ಲಿ ಕಾಡಾನೆಗಳು ಇರುವುದನ್ನು ಪತ್ತೆ ಹಚ್ಚಿ, ತನ್ನ ಸೆರೆ ಹಿಡಿಯುವ ಕಾರ್ಯ ಯೋಜನೆಯ ಫಲಪ್ರದಗೊಳಿಸಲು ಎಚ್ಚರಿಕೆಯ ಹೆಜ್ಜೆಯನ್ನಿರಿಸಿತು. ಕಾಡಾನೆಗಳ ಹಿಂಡಿನಲ್ಲಿದ್ದ, ಕರಡಿಗೋಡು ವ್ಯಾಪ್ತಿಯಲ್ಲಿ ದಾಂಧಲೆ ನಡೆಸುತ್ತಿದ್ದ ಪುಂಡಾನೆಯನ್ನು ಗುರುತಿಸಿ ಅದಕ್ಕೆ ಶೂಟರ್ ಅಕ್ರಂ ಅವರು ಅರಿವಳಿಕೆಯನ್ನು ಹೊಂದಿದ ಗುಂಡನ್ನು ಹೊಡೆದಿದ್ದರು.

ಕೆಲ ನಿಮಿಷಗಳ ಬಳಿಕ ಅರಿವಳಿಕೆಯ ಪ್ರಭಾವಕ್ಕೆ ಪುಂಡಾನೆ ಸಿಲುಕಿದ್ದನ್ನು ಖಾತರಿ ಪಡಿಸಿಕೊಂಡ ಅರಣ್ಯ ಇಲಾಖಾ ತಂಡ, ಕಾರ್ಯಾಚರಣೆಗೆ ದುಬಾರೆ ಮತ್ತು ಮತ್ತಿಗೋಡಿನಿಂದ ಕರೆಸಿಕೊಳ್ಳಲಾಗಿದ್ದ ಪ್ರಶಾಂತ, ಸುಗ್ರೀವ, ಧನಂಜಯ, ಅಭಿಮನ್ಯು ಮತ್ತು ಭೀಮನ ಸಹಕಾರದಿಂದ ಪುಂಡಾನೆಯನ್ನು ಹಗ್ಗದಿಂದ ಬಂಧಿಸಿದ್ದಲ್ಲದೆ, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪುಂಡಾನೆಯನ್ನು ಅಲ್ಲೇ ಸಮೀಪದ ಚಿಕ್ಕನಲ್ಲಿ ತೋಟದವರೆಗೆ ಕರೆ ತಂದಿದ್ದರು.

ಲಾರಿಯನ್ನೇರಿದ ಪುಂಡಾನೆ- ಚಿಕ್ಕನಲ್ಲಿ ತೋಟದ ಹಾದಿಯಲ್ಲಿ ಪುಂಡಾನೆಯನ್ನು ಬಲವಾದ ಹಗ್ಗಗಳಿಂದ ಕಟ್ಟಿ, ಕ್ರೈನ್ ಸಹಕಾರದಿಂದ ಲಾರಿಯನ್ನೇರಿಸಿ, ದುಬಾರೆ ಸಾಕಾನೆ ಶಿಬಿರಕ್ಕೆ ಕರೆದೊಯ್ಯಲಾಯಿತು.

ಎರಡು ದಿನ ಬಳಿಕ ಅಮ್ಮತ್ತಿಯಲ್ಲಿ ಕಾರ್ಯಾಚರಣೆ- ಎಸಿಎಫ್ ನೆಹರು ಮಾಧ್ಯಮಗಳೊಂದಿಗೆ ಮಾತನಾಡಿ, ಸರ್ಕಾರದ ಅನುಮತಿಯಂತೆ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿದೆ. ಎರಡು ದಿನಗಳ ನಂತರ ಅಮ್ಮತ್ತಿ ಭಾಗದಲ್ಲಿರುವ ಮತ್ತೊಂದು ಪುಂಡಾನೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತದೆಂದು ತಿಳಿಸಿದರು.

ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿಯರವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ತಾಲ್ಲೂಕು ಡಿ.ಸಿ.ಎಫ್. ಚಕ್ರಪಾಣಿ, ಎಸಿಎಫ್ ನೆಹರು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ, ಉಪವಲಯ ಅರಣ್ಯಾಧಿಕಾರಿ ಸಂಜಿತ್ ಪೂವಯ್ಯ, ಕುಶಾಲನಗರ ವಲಯ ಎಸಿಎಫ್ ಗೋಪಾಲ್, ಆರ್‍ಎಫ್ ಶಿವರಾಂ, ಶೂಟರ್ ಅಕ್ರಂ, ವನ್ಯಜೀವಿ ವೈದ್ಯಾಧಿಕಾರಿ ಡಾ. ರಮೇಶ್ ಮತ್ತು ಡಾ. ಚಿಟ್ಟಿಯಪ್ಪ, ಮಡಿಕೇರಿ ಮತ್ತು ಸೋಮವಾರಪೇಟೆ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಸುಮಾರು ಐವತ್ತಕ್ಕೂ ಹೆಚ್ಚಿನ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ನಿಟ್ಟುಸಿರು ಬಿಟ್ಟ ಗ್ರಾಮಸ್ಥರು- ಕಳೆದ ಹಲ ಸಮಯಗಳಿಂದ ಕರಡಿಗೋಡು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಪುಂಡಾನೆಗಳ ಹಾವಳಿಯಿಂದ ವ್ಯಾಪಕ ಕೃಷಿ ಹಾನಿಯಾಗಿದ್ದು, ಬೆಳೆಗಾರರು ಮತ್ತು ಕೃಷಿಕರು ತೋಟಗಳಿಗೆ ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಪುಂಡಾನೆಯ ಸೆರೆಯಿಂದ ಈ ವಿಭಾಗದ ಗ್ರಾಮಸ್ಥರು ಒಂದಷ್ಟು ನಿಟ್ಟುಸಿರು ಬಿಡುವಂತಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ