ಭೀಮಾ ಕೊರೆಗಾಂವ್ ವಿಜಯೋತ್ಸವ ಪ್ರಯುಕ್ತ
ಚಾಮರಾಜನಗರ: ಭೀಮಾ ಕೊರೆಗಾಂವ್ ವಿಜಯೋತ್ಸವ ಅಂಗವಾಗಿ ಬಹುಜನ ವಾಲೆಂಟಿಯರ್ ಫೋರ್ಸ್ (ಬಿವಿಎಫ್) ಜಿಲ್ಲಾ ಘಟಕ ವತಿಯಿಂದ ಊರೂರಿಗೆ ಭೀಮಸಂದೇಶ ಯಾತ್ರೆಯನ್ನು ಡಿ.೨೩ ರಿಂದ ಜ.೧ ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಬಿವಿಎಫ್ ಜಿಲ್ಲಾಧ್ಯಕ್ಷ ಎಸ್.ಬಿ.ಚಂದ್ರಕಾಂತ್ ತಿಳಿಸಿದರು.
ಡಿ.೨೩ ಶುಕ್ರವಾರ ರಂದು ಬೆಳಿಗ್ಗೆ ೮ ಗಂಟೆಗೆ ನಗರದ ರಾಮಸಮುದ್ರ ಬಡಾವಣೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಗಣ್ಯರು ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಾರಾಷ್ಟ್ರದ ಚೈತ್ಯ ಭೂಮಿಯಿಂದ ಅಂಬೇಡ್ಕರ್ ಜ್ಯೋತಿ ಆಗಮಿಸಲಿದೆ. ತಾಲ್ಲೂಕಿನ ೧೦ ಗ್ರಾಮಗಳಲ್ಲಿ ಸಂಚರಿಸುವ ಯಾತ್ರೆಗೆ ಆಯಾಯ ಗ್ರಾಮಗಳ ಬಹುಜನರು ಭವ್ಯ ಸ್ವಾಗತದೊಂದಿಗೆ ಬರಮಾಡಿಕೊಳ್ಳುವ ಮೂಲಕ ಯಾತ್ರೆಯನ್ನು ಯಶ್ವಸಿಗೊಳಿಸಬೇಕು ಎಂದು ಮನವಿ ಮಾಡಿದರು.
ಮಹಾರಾಷ್ಟçದ ಶೋಷಿತ ಸಮುದಾಯದ ಮಹರ್ ಸೈನಿಕರು ಪೇಶ್ವೆಗಳ ವಿರುದ್ದ ಹೋರಾಟ ಮಾಡಿ ಗೆದ್ದು ಬೀಗಿದ ಸಾಹಸಗಾಥೆಯನ್ನು ಮತು ಡಾ.ಬಿ.ಆರ್.ಅಂಬೇಡ್ಕರ್ ಅವರು ಬದುಕಿರುವ ತನಕ ಪ್ರತಿ ವರ್ಷ ಕೋರೆಗಾಂವ್ ಸ್ಥಳಕ್ಕೆ ತೆರಳಿ ವಿಜಯೋತ್ಸವ ಆಚರಿಸುತ್ತಿದ್ದ ಕುರಿತ ವಿಚಾರವನ್ನು ಪ್ರತಿ ಗ್ರಾಮದಲ್ಲಿ ೩೦ ನಿಮಿಷಗಳು ತಿಳಿಸಲಾಗುವುದು ಎಂದರು.
ಸಮಾರೋಪ ಸಮಾರಂಭ : ಡಿ.೩೦ ರಂದು ನಗರದ ಪ್ರಮುಖ ಬೀದಿಗಳಲ್ಲಿ ಯಾತ್ರೆ ಸಂಚರಿಸಲಿದ್ದು, ಜ.೧ ರಂದು ಭಾನುವಾರ ನಗರದ ಸರ್ಕಾರಿ ಪೇಟೆ ಪ್ರೈಮರಿ ಶಾಲಾವರಣದಲ್ಲಿ ಊರೂರಿಗೆ ಭೀಮ ಸಂದೇಶ ಯಾತ್ರೆಯ ಸಮಾರೋಪ ಸಮಾರಂಭವು ಸಂಜೆ ೪ ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ಗೋಷ್ಠಿಯಲ್ಲಿ ಜಿಲ್ಲಾ ಸಂಯೋಜಕರಾದ ರವಿಮೌರ್ಯ, ಆಶ್ರೀತ್, ತಾಲೂಕು ಅಧ್ಯಕ್ಷ ಮನೋಜ್ ನಾಗಬೌದ್ದ, ಸದಸ್ಯರಾದ ರಾಜು, ಸಿದ್ದರಾಜು ಹೊಸಳ್ಳಿ, ಅಭಿ ಹಾಜರಿದ್ದರು.





