Mysore
25
scattered clouds

Social Media

ಮಂಗಳವಾರ, 13 ಜನವರಿ 2026
Light
Dark

ಆಂದೋಲನ ಓದುಗರ ಪತ್ರ : 20 ಮಂಗಳವಾರ 2022

ಓದಲು ಪೂರಕ ವಾತಾವರಣ ನಿರ್ಮಿಸಿ, ಒತ್ತಡ ಬೇಡ

ಪೋಷಕರಲ್ಲಿ ನನ್ನದೊಂದು ವಿನಂತಿ. ನಾನು ಬೆಂಗಳೂರಿನ ಐಟಿಐ ಸಿಬಿಎಸ್ ಪಬ್ಲಿಕ್ ಶಾಲೆಯಲ್ಲಿ ೯ನೇ ತರಗತಿ ಓದುತ್ತಿದ್ದೇನೆ. ಪರೀಕ್ಷೆಯ ಸಮಯ ಹತ್ತಿರವಾದರೆ ಎಲ್ಲ ಪೋಷಕರಿಗೂ ತಮ್ಮ ಮಕ್ಕಳು ಚೆನ್ನಾಗಿ ಓದಿ ಹೆಚ್ಚಿನ ಅಂಕ ತೆಗೆದುಕೊಳ್ಳಬೇಕು ಎಂಬ ಬಯಕೆ ಉಂಟಾಗುತ್ತದೆ. ಆದ್ದರಿಂದ ಓದುವಂತೆ ಮಕ್ಕಳ ಮೇಲೆ ಒತ್ತಡವನ್ನು ಹಾಕುತ್ತಾರೆ. ಈ ವೇಳೆ ದೂರದರ್ಶನ ಹಾಗೂ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುವ ಮಕ್ಕಳ ನೆನಪಿನ ಶಕ್ತಿಯನ್ನು ಹೆಚ್ಚಿಸುವ ಔಷಧಿ, ಮಾತ್ರೆಗಳನ್ನು ಬಲವಂತವಾಗಿ ಮಕ್ಕಳಿಗೆ ಸೇವಿಸಲು ಹೇಳುತ್ತಾರೆ. ಇವುಗಳಿಂದ ಆರೋಗ್ಯದಲ್ಲಿ ಅನೇಕ ಏರುಪೇರಾಗಬಹುದು. ಅವುಗಳಿಂದ ಮಕ್ಕಳಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆಯ ವಾತಾವರಣ ಸೃಷ್ಟಿಯಾಗಿ ಓದಲು ಕಷ್ಟವಾಗುತ್ತದೆ. ಆದ್ದರಿಂದ ಪೋಷಕರು  ನೆನಪಿನ ಶಕ್ತಿ ಹೆಚ್ಚಿಸುವ ಔಷಧಿ ಮಾತ್ರೆ ಹಾಗೂ ಜ್ಯೋತಿಷ ಶಾಸ್ತ್ರ, ಯಂತ್ರ, ಮಂತ್ರ ಹಾಗೂ ಗ್ರಹಗತಿ ಎಂಬ ವಿಷಯಗಳನ್ನು ಮಕ್ಕಳಿಗೆ ಬಲವಂತವಾಗಿ ಹೇರದೆ ಅವರಿಗೆ ಪೋಷಕಾಂಶಯುಕ್ತ ಆಹಾರವನ್ನು ನೀಡುವ ಮೂಲಕ ಆಟ, ಪಾಠ, ನಿದ್ರೆಗೆ ಸಮಯ ಮೀಸಲಿಡಬೇಕು. ಮಕ್ಕಳ ಫಲಿತಾಂಶಕ್ಕೆ ಪೋಷಕರಿಂದ ಉತ್ತಮ ಉತ್ತೇಜನ, ಪ್ರೀತಿಯ ಮಾತು ಅಗತ್ಯವಾಗಿರುತ್ತದೆ. ಶಿಸ್ತುಬದ್ಧ ಜೀವನವನ್ನು ಮಕ್ಕಳಿಗೆ ತಿಳಿಸಿ. ಜೊತೆಗೆ ಒತ್ತಡವಿಲ್ಲದೆ ಮಕ್ಕಳು ಪಠ್ಯಕ್ರಮಗಳ ಬಗ್ಗೆ ಆಸಕ್ತಿ ತೋರಿಸಲು ಅವಕಾಶ ಮಾಡಿಕೊಟ್ಟರೆ  ಉತ್ತಮ ಅಂಕ ಪಡೆಯಲು ಸಹಾಯವಾಗುತ್ತದೆ.

ಎಂ.ಎಸ್.ಇಂಚರ ದತ್ತ, ೯ನೇ ತರಗತಿ ವಿದ್ಯಾರ್ಥಿ, ಬೆಂಗಳೂರು. 


ಕಬಿನಿ ಹಿನ್ನೀರಿನಲ್ಲಿ ಕುಡುಕರ ಹಾವಳಿ ತಪ್ಪಿಸಿ

ಎಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯ ಹಿನ್ನೀರು ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದು, ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿದೆ. ಪ್ರತಿನಿತ್ಯ ಇಲ್ಲಿಗೆ ಸಫಾರಿಗೆಂದು ಬರುವವರು ಹಾಗೂ ಇಲ್ಲಿನ ವಾತಾವರಣದ ಹಿತವನ್ನು ಸವಿಯುವ ಸಲುವಾಗಿ ಸಾಕಷ್ಟು ಜನರು ಆಗಮಿಸುತ್ತಾರೆ. ಅಲ್ಲದೆ ಇಲ್ಲಿನ ಸುಂದರ ಪರಸರ ವಲಸೆ ಹಕ್ಕಿಗಳಿಗೂ ಪೂರಕ ವಾತಾವರಣ ನಿರ್ಮಿಸಿದ್ದು, ನೂರಾರು ಬಗೆಯ ವಲಸೆ ಹಕ್ಕಿಗಳು ಕಬಿನಿ ಹಿನ್ನೀರಿಗೆ ಆಗಮಿಸುತ್ತವೆ. ಅದೇ ರೀತಿ ಈ ಬಾರಿಯೂ ಕಬಿನಿ ಹಿನ್ನೀರಿಗೆ ವಿದೇಶಿ ಹಕ್ಕಿಗಳಾದ ಬಾರ್ ಹೆಡೆಡ್ ಗೂಸ್ ಎಂಬ ಹೆಬ್ಬಾತುಗಳ ಆಗಮನವಾಗಿದ್ದು, ಪಕ್ಷಿ ಪ್ರಿಯರಲ್ಲಿ ಸಂತಸ ತಂದಿದೆ. ಆದರೆ ಈ ಸುಂದರ ಹಿನ್ನೀರಿನ ವಾತಾವರಣದಲ್ಲಿ ಇತ್ತೀಚೆಗೆ ಮದ್ಯವ್ಯಸನಿಗಳ ಹಾವಳಿ ಹೆಚ್ಚಾಗಿದ್ದು, ಮೋಜು ಮಸ್ತಿಯ ಮದ್ಯದ ಕೂಟದಿಂದಾಗಿ ಕಬಿನಿ ಹಿನ್ನೀರಿನ ಮೈದಾನದಲ್ಲಿ ಮದ್ಯದ ಬಾಟಲಿಗಳನ್ನು ಎಲ್ಲೆಂದರಲ್ಲಿ ಬಿಸಾಡಿ, ಪ್ಲಾಸ್ಟಿಕ್ ತ್ಯಾಜ್ಯಗಳನ್ನೂ ಹರಡಿ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದಾರೆ. ಅಲ್ಲದೇ ಇಂತಹ ಕಲುಷಿತ ವಾತಾವರಣವು ಇಲ್ಲಿನ ಪಕ್ಷಿಗಳಿಗೆ ಹಾನಿಯುಂಟು ಮಾಡಬಹುದಾಗಿದೆ. ಜೊತೆಗೆ ಕುಟುಂಬ ಸಮೇತ ಹಿನ್ನೀರಿನ ಸೌಂದರ್ಯ ಸವಿಯಲು ಬರುವ ಕುಟುಂಬದವರಿಗೆ ಕಿರಿಕಿರಿಯಾಗುತ್ತಿದ್ದು, ಆದ್ದರಿಂದ ದಯವಿಟ್ಟು, ಪ್ರತಿದಿನ ಸಂಜೆ ಪೊಲೀಸ್ ಇಲಾಖೆಯೂ ಇಲ್ಲಿಗೆ ಸಿಬ್ಬಂದಿಗಳನ್ನು ನಿಯೋಜಿಸಿ ಮದ್ಯವ್ಯಸನಿಗಳನ್ನು ನಿಯಂತ್ರಿಸುವ ಮೂಲಕ ಇಲ್ಲಿನ ಸುಂದರ ಪ್ರಕೃತಿ ತಾಣದ ರಕ್ಷಣೆಗೆ ಸಹಕರಿಸಬೇಕು ಎಂಬುದು ನನ್ನ ಮನವಿಯಾಗಿದೆ.

ಎಂ.ವಿ.ಪ್ರಕಾಶ್, ಮಚ್ಚರೆ, ಎಚ್.ಡಿ.ಕೋಟೆ ತಾ.


ಬಾಲ್ ಬ್ಯಾಡ್ಮಿಂಟನ್ ಆಟಗಾರರಿಗೆ ಬೇಕು ಪ್ರೋತ್ಸಾಹ

ಬಾಲ್ ಬ್ಯಾಡ್ಮಿಂಟನ್ ಎಂಬುದು ಜನಪ್ರಿಯತೆಯನ್ನೇ ಗಳಿಸದ ಒಂದು ಆಟ. ಈಗಲೂ ಈ ಆಟದ ಬಗ್ಗೆ ಸಾಕಷ್ಟು ಜನರಿಗೆ ತಿಳಿದೆ ಇಲ್ಲ. ದಶಕದ ಹಿಂದೆ ಎಚ್.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಗ್ರಾಮದ ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಗೆಲುವು ಸಾಧಿಸಿ ಸದ್ದು ಮಾಡಿದರು. ಬಳಿಕ ಅದೇ ವರ್ಷ ೨೦೧೧ರಲ್ಲಿ ಕೋಲಾರದಲ್ಲಿ ನಡೆದ ರಾಜ್ಯಮಟ್ಟದ ಸಬ್ ಜೂನಿಯರ‍್ಸ್ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವ ಹಿಸಿ ಪ್ರಥಮ ಸ್ಥಾನವನ್ನು ಪಡೆದು ಎಚ್.ಡಿ.ಕೋಟೆ ತಾಲ್ಲೂಕಿಗೆ ಹೆಮ್ಮೆಯನ್ನು ತಂದಿದ್ದರು. ಅದೇ ಮಾದರಿಯಲ್ಲಿ ಈಗ ತಾಲ್ಲೂಕಿನ ಬೀಚನಹಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಬಾಲಕಿಯರು ಹೋಬಳಿ ಮಟ್ಟದಿಂದ ಸತತ ಗೆಲುವುಗಳನ್ನು ಸಾಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದು, ಇದೀಗ ತಂಡದ ೫ ಆಟಗಾರರು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ಮತ್ತೊಮ್ಮೆ ತಾಲ್ಲೂಕು ಸಂಭ್ರಮಿಸುವ ವಿಚಾರವಾ ಗಿದೆ. ಅಂತರಸಂತೆ ಹಾಗೂ ಬೀಚನಹಳ್ಳಿಯ ಶಾಲೆಯ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಸರಿಯಾದ ಸೌಲಭ್ಯವಿಲ್ಲದಿದ್ದರೂ ರಾಜ್ಯ ಮಟ್ಟದಲ್ಲಿ ಉತ್ತಮ ಹೆಸರು ಗಳಿಸಿದ್ದು, ತಾಲ್ಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ. ಆದರೆ ಇಲ್ಲಿ ಈ ಆಟಕ್ಕಾಗಲೀ ಅಥವಾ ಕ್ರೀಡಾಪಟುಗಳಿಗಾಗಲಿ ಸರಿಯಾದ ಪ್ರೋತ್ಸಾಹ ಮಾತ್ರ ಸಿಗುತ್ತಿಲ್ಲ. ಬೀಚನಹಳ್ಳಿ ಮಕ್ಕಳ ಸಾಧನೆಯನ್ನು ಕೆಲವರು ಮಾತ್ರ ಗುರುತಿಸಿ ಪ್ರೋತ್ಸಾಹಿ ಸುತ್ತಿದ್ದಾರೆ. ಆದರೆ ಇದು ತಾಲ್ಲೂಕೇ ಹೆಮ್ಮೆಪಡುವ ವಿಚಾರವಾದ್ದರಿಂದ ಈ ಕ್ರೀಡಾಪಟುಗಳಿಗೆ ಎಲ್ಲರೂ ಉತ್ತಮ ಪ್ರೋತ್ಸಾಹ ನೀಡಬೇಕು.

-ಎಸ್.ಮಹೇಶ್, ಬಾಲ್ ಬ್ಯಾಡ್ಮಿಂಟನ್ ಆಟಗಾರ, ಅಂತರಸಂತೆ .


ಪೂರ್ಣಗೊಳ್ಳುತ್ತಿರುವ ಅಶೋಕ ಪುರಂ ರೈಲು ನಿಲ್ದಾಣ ಕಾಮಗಾರಿ

ಮೈಸೂರಿನ ಅಶೋಕ ಪುರಂ ರೈಲು ನಿಲ್ದಾಣದ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುತ್ತಿರುವ ವಿಚಾರ ಪ್ರಯಾಣಿಕರಿಗೆ ಸಂತಸವನ್ನುಂಟು ಮಾಡಿದೆ. ಸದ್ಯ ಅಲ್ಲಿರುವ ಮೂರು ಪ್ಲಾಟ್ ಫಾರಂ ಜೊತೆಗೆ ಮತ್ತೆರಡು ಪ್ಲಾಟ್‌ಫಾರಂಗಳನ್ನು ಹೊಸದಾಗಿ ನಿರ್ಮಾಣ ಮಾಡುತ್ತಿರುವುದು ಬೆಂಗಳೂರಿನಿಂದ ಮೈಸೂರಿಗೆ ಮತ್ತಷ್ಟು ಹೆಚ್ಚುವರಿ ರೈಲುಗಳ ಸಂಚಾರವನ್ನು ಆರಂಭಿಸಲು ಅನುಕೂಲವಾಗಿದ್ದು, ಇದರಿಂದ ಹೆಚ್ಚಿನ ಜನರು ರೈಲು  ಸೇವೆಯನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ. ಮುಂದಿನ ೫೦ ವರ್ಷಗಳ ಪ್ರಯಾಣಿಕರ ಓಡಾಟವನ್ನು ಗಮನದಲ್ಲಿಟ್ಟುಕೊಂಡು ಅಶೋಕಪುರಂ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಪಡಿಸಲಾಗುವುದು ಮತ್ತು ಪ್ರಯಾಣಿಕರಿಗೆ ಅನುಕೂಲವಾಗಲು ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತದೆ ಎಂದು ಕಾಮಗಾರಿ ಪರಿಶೀಲಿಸುವ ವೇಳೆ ಸಂಸದ ಪ್ರತಾಪ್ ಸಿಂಹ ಅವರು ಹೇಳಿರುವುದು ಸ್ವಾಗತಾರ್ಹವಾಗಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಂಡು ಜನರ ಉಪಯೋಗಕ್ಕೆ ಸಿಗಲಿ ಎಂಬುದೇ ಎಲ್ಲರ ಆಶಯವಾಗಿದೆ.

ಬೆಸಗರಹಳ್ಳಿ ರವಿ ಪ್ರಸಾದ್, ಕೆ.ಸಿ.ನಗರ, ಮೈಸೂರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!