ಸಂದರ್ಶನ : ‘ಬ್ಲೂ ಫೀವರ್ ಹೊಸದೇನಲ್ಲ ಭಯ ಬೇಡ’
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್.ಚಿದಂಬರ ಸಲಹೆ
ಗಿರೀಶ್ ಹುಣಸೂರು
ಮೈಸೂರು: ಚಳಿಗಾಲದ ತೀವ್ರತೆ ಹೆಚ್ಚುತ್ತಿರುವ ಜೊತೆಗೆ ಅಕಾಲಿಕ ಮಳೆ ಬೀಳುತ್ತಾ, ವಾತಾವರಣದಲ್ಲಿ ಏರುಪೇರಾಗಿ ಶೀತಗಾಳಿ ಬೀಸುತ್ತಿರುವುದರಿಂದ ಜ್ವರ, ಕೆಮ್ಮು, ನೆಗಡಿ, ಗಂಟಲು ಕೆರೆತ ಹಾಗೂ ತಲೆನೋವಿನಂತಹ ಸಾಂಕ್ರಾಮಿಕ ರೋಗಗಳು ಜನರನ್ನು ಕಾಡಲಾರಂಭಿಸಿದ್ದು, ಅಸಡ್ಡೆ ತೋರಿ ಕಾಯಿಲೆ ಬಂದ ಮೇಲೆ ಆಸ್ಪತ್ರೆಗಳಿಗೆ ಎಡತಾಕುವ ಬದಲಿಗೆ ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕಾದ ಅಗತ್ತ ಎನ್ನುತ್ತಾರೆ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಸ್.ಚಿದಂಬರ ಅವರು. ‘ಆಂದೋಲನ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಚಳಿಗಾಲದಲ್ಲಿ ಆವರಿಸುವ ರೋಗಗಳ ಬಗ್ಗೆ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.
ಆಂದೋಲನ: ವಾತಾವರಣದಲ್ಲಿನ ಏರುಪೇರಿನಿಂದ ಸಾಂಕ್ರಾಮಿಕ ರೋಗ ಹರಡುತ್ತಿದೆಯಲ್ಲ?
ಡಾ.ಎಸ್.ಚಿದಂಬರ: ಡಿಸೆಂಬರ್-ಜನವರಿ ತಿಂಗಳು ಚಳಿಗಾಲವಾಗಿರುವುದರಿಂದ ಸಾಮಾನ್ಯವಾಗಿ ಕೆಮ್ಮು, ಜ್ವರ, ನೆಗಡಿ, ಗಂಟಲು ಕೆರೆತ ಹಾಗೂ ತಲೆನೋವು ಕಾಣಿಸಿಕೊಳ್ಳುವುದು ಸಹಜ. ವಾತಾವರಣದಲ್ಲಿನ ವೈಫರಿತ್ಯದಿಂದಾಗಿ ಹೀಗಾಗಿದೆ ಎಂದು ಅಸಡ್ಡೆ ತೋರಿದರೆ, ಒಬ್ಬರಿಂದ ಮನೆ ಮಂದಿಗೆಲ್ಲ ಕಾಯಿಲೆ ಹರಡಲಿದೆ. ಹೀಗಾಗಿ ಜ್ವರ-ಕೆಮ್ಮಿನ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಸಮೀಪದ ವೈದ್ಯರ ಬಳಿ ತೆರಳಿ ಅವರ ಸಲಹೆಯಂತೆ ಚಿಕಿತ್ಸೆ ಪಡೆಯುವುದು ಒಳಿತು.
ಆಂದೋಲನ: ವೈರಲ್ ಫೀವರ್ ಲಕ್ಷಣಗಳೇನು?
ಡಾ.ಎಸ್.ಚಿದಂಬರ: ಜ್ವರ, ಕೆಮ್ಮು, ನೆಗಡಿ, ಗಂಟಲು ಕೆರೆತ, ತಲೆನೋವಿನಂತಹ ಸಾಂಕ್ರಾಮಿಕ ರೋಗಗಳು ಮನೆಯಲ್ಲಿ ಒಬ್ಬರಿಗೆ ಬಂದರೆ ಮನೆ ಮಂದಿಗೆಲ್ಲ ಹರಡುತ್ತದೆ. ಇವುಗಳಿಗೆ ಕನಿಷ್ಠ ಪ್ರಮಾಣದ ಚಿಕಿತ್ಸೆ ಸಾಕು. ವೈರಸ್ ಸೋಂಕು ಮತ್ತು ಫ್ಲೂ ಜ್ವರದ ಲಕ್ಷಣಗಳು ಕಂಡುಬಂದಾಗ ಅದನ್ನು ಕಡೆಗಣಿಸುವಂತೆಯೇ ಇಲ್ಲ. ವೈರಲ್ ಫೀವರ್ ಚಿಕಿತ್ಸೆ ಇಲ್ಲದಿದ್ದರೂ ಒಂದೆರಡು ದಿನಗಳಲ್ಲಿ ಗುಣಮುಖವಾಗಲಿದೆ. ಹಾಗೆಂದು ನಿರ್ಲಕ್ಷ್ಯವಹಿಸಿದರೆ ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
ಆಂದೋಲನ: ಮಲೇರಿಯಾ, ಡೆಂಘೀ, ಚಿಕುನ್ ಗುನ್ಯಾ ರೋಗಗಳ ಹರಡುವಿಕೆ ಹೇಗಿದೆ?
ಡಾ.ಎಸ್.ಚಿದಂಬರ: ಹಳೇ ಮೈಸೂರು ಭಾಗದ ಜಿಲ್ಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಡೆಂಘೀ, ಮಲೇರಿಯಾ, ಚಿಕುನ್ ಗುನ್ಯಾದಂತಹ ಕಾಯಿಲೆ ಉಲ್ಭಣವಾದ ಪ್ರಕರಣಗಳು ಕಡಿಮೆಯಾದರೂ ಕೋವಿಡ್‌ನ ಸಮೂಹ ಸನ್ನಿಯಿಂದ ನಡುಗಿ ಹೋಗಿರುವ ಜನ, ಸಾಮಾನ್ಯ ಜ್ವರ, ಕೆಮ್ಮು ಬಂದ ಕೂಡಲೇ ಹೆದರುತ್ತಿದ್ದಾರೆ. ಜನ ಭಯ ಬಿಟ್ಟು ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಒಳಿತು.
ಆಂದೋಲನ: ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ಹೇಗೆ?
ಡಾ.ಎಸ್.ಚಿದಂಬರ: ಶಾಲೆಗಳಲ್ಲಿ ಮಕ್ಕಳಿಗೆ ಈ ಸಾಂಕ್ರಾಮಿಕ ಕಾಯಿಲೆ ಹರಡದಂತೆ ಕ್ರಮವಹಿಸಬೇಕು. ಕೋವಿಡ್ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿದಂತೆ ಆಗಾಗ್ಗೆ ೨೦ ರಿಂದ ೩೦ ಸೆಕೆಂಡ್‌ಗಳ ಕಾಲ ಸೋಪಿನಿಂದ ಕೈ ಉಜ್ಜಿ ತೊಳೆಯಬೇಕು. ಮುಖಗವಸು ಬಳಸಬೇಕು. ಪ್ರತ್ಯೇಕ ನ್ಯಾಪ್‌ಕಿನ್ ಬಳಸಬೇಕು. ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಚಳಿಯ ಜತೆಗೆ ವಾತಾವರಣದಲ್ಲಿ ಶೀತಗಾಳಿ ಬೀಸುತ್ತಿರುವುದರಿಂದ ತಲೆಯ ಮೇಲೆ ಮಂಜು ಬಿದ್ದರೆ ತಲೆನೋವು ಬರುತ್ತದೆ. ಹೀಗಾಗಿ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವವರು ಕಿವಿ ಮತ್ತು ತಲೆಯನ್ನು ಉಣ್ಣೆಯ ವಸ್ತ್ರಗಳಿಂದ ಮುಚ್ಚಿಕೊಳ್ಳಬೇಕು. ವಯೋ ವೃದ್ಧರು ಹಾಗೂ ಚಿಕ್ಕ ಮಕ್ಕಳನ್ನು ಚಳಿ-ಗಾಳಿಗೆ ಮೈಯೊಡ್ಡದಂತೆ ಹೊರಗೆ ಬಿಡದೆ ಬೆಚ್ಚಗಿರಿಸಬೇಕು. ಸಾಧ್ಯವಾದಷ್ಟು ಬಿಸಿಯಾಗಿಯೇ ಊಟ ಮಾಡಬೇಕು. ರೆಫ್ರಿಜರೇಟರ್‌ನಲ್ಲಿರಿಸಿದ ವಸ್ತುಗಳನ್ನು ಬಳಸದಿರುವುದು ಒಳಿತು.
ಆಂದೋಲನ: ಬ್ಲೂ ಫೀವರ್ ಎಂಬ ಸಮೂಹ ಸನ್ನಿಯಿಂದ ಜನರು ಭಯ-ಭೀತರಾಗಿದ್ದಾರಲ್ಲ?
ಡಾ.ಎಸ್.ಚಿದಂಬರ: ಬ್ಲೂ ಫೀವರ್ ಎಂಬುದು ಹೊಸದಾಗೇನು ಬಂದಿಲ್ಲ. ಅಲ್ಲೊಂದು-ಇಲ್ಲೊಂದು ಪ್ರಕರಣಗಳು ವರದಿಯಾಗುತ್ತಿದ್ದು, ಹಿಂದೆಯೂ ಇತ್ತು. ಈಗಲೂ ಇದೆ. ಬ್ಲೂ ಫೀವರ್ ಬಂದಾಗ ದೇಹ ನೀಲಿ ಬಣ್ಣಕ್ಕೆ ತಿರುಗಿ ಮಾರಣಾಂತಿಕವಾಗಿ ಪರಿಣಮಿಸುತ್ತದೆ ಎಂಬ ಗುಲ್ಲೆದ್ದಿದೆ. ಹಾಗೇನು ಇಲ್ಲ. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನ ಬೆಳೆದಂತೆಲ್ಲ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಾಧುನಿಕ ಪರಿಕರಗಳ ಆವಿಷ್ಕಾರವಾಗಿರುವುದರಿಂದ ಇಂತಹ ರೋಗಗಳು ಬಹುಬೇಗ ಪತ್ತೆಯಾಗುತ್ತಿವೆ. ಬ್ಲೂ ಫೀವರ್ ಅನ್ನು ಸರ್ಕಾರ ನೋಟಿಫೈ ಮಾಡಿಲ್ಲ. ರೋಗ ಲಕ್ಷಣ ಕಂಡುಬಂದಾಗ ನಿರ್ಲಕ್ಷ್ಯವಹಿಸದೆ ತಜ್ಞ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಸೂಕ್ತ. ಇದರಿಂದ ಆಸ್ಪತ್ರೆ, ಕ್ಲಿನಿಕ್‌ಗಳ ಮೇಲಿನ ಒತ್ತಡ ತಪ್ಪಿಸಬಹುದು.