ಜಿಲ್ಲಾಧಿಕಾರಿಗಳೂ ಆದ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ವಿ.ರಾಜೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ
ಮೈಸೂರು: ಹಲವು ತಿಂಗಳಿಂದ ಬಡಾವಣೆ ರಚನೆ, ಕಟ್ಟಡಗಳ ನಿರ್ಮಾಣದ ನಕ್ಷೆ ಅನುಮೋದನೆಗಾಗಿ ಕಾದು ಕುಳಿತಿದ್ದ ಕಡತಗಳಿಗೆ ಒಪ್ಪಿಗೆ ಕೊಡಲಾಯಿತು.
ಜಿಲ್ಲಾಧಿಕಾರಿಗಳೂ ಆದ ಮುಡಾ ಅಧ್ಯಕ್ಷ ಡಾ.ಕೆ.ವಿ.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಳಿಗ್ಗೆ ೧೧.೧೫ರಿಂದ ಸಂಜೆ ೪.೩೦ರವರೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಹಲವು ತಿಂಗಳಿಂದ ನಗರ ಯೋಜಕ ಶಾಖೆಯಲ್ಲಿ ಧೂಳು ತಿನ್ನುತ್ತಿದ್ದ ಕಡತಗಳಿಗೆ ಮುಕ್ತಿ ನೀಡಲಾಯಿತು. ಒಂದೊಂದು ಕಡತಗಳ ವಿಷಯಗಳನ್ನು ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಓದುತ್ತಿದ್ದಂತೆ ಅದರ ಬಗ್ಗೆ ಚರ್ಚಿಸಿ ಒಪ್ಪಿಗೆ ನೀಡಲಾಯಿತು. ಆರು ತಿಂಗಳಿಂದ ಸಭೆ ನಡೆಯದ ಕಾರಣ ಮಂಡಿಸಲಾಗಿದ್ದ ೩೪೩ ವಿಷಯಗಳಲ್ಲಿ ೨೪೩ ವಿಷಯಗಳಿಗೆ ಒಪ್ಪಿಗೆ ಕೊಡಲಾಯಿತು.
ತಾತ್ಕಾಲಿಕ ವಸತಿ ವಿನ್ಯಾಸ, ಖಾಸಗಿ ಬಡಾವಣೆಗಳಿಗೆ ಅನುಮೋದನೆ, ಭೂ ಬದಲಾವಣೆ, ಏಕ ನಕ್ಷೆ ಅನುಮೋದನೆ, ನಿವೇಶನಗಳ ಬಿಡುಗಡೆ, ತುಂಡು ಭೂಮಿ ಮಂಜೂರಾತಿ, ಏಕ ಮನೆಗಳನ್ನು ನಿರ್ಮಾಣ ಮಾಡುವ ಪ್ಲಾನ್‌ಸೇರಿದಂತೆ ಇನ್ನಿತರ ವಿಚಾರಗಳಿಗೆ ಸಮ್ಮತಿಸಲಾಯಿತು. ಮೈಸೂರು ನಗರದ ಅಭಿವೃದ್ಧಿ ವಿಚಾರ, ಹೊಸ ಬಡಾವಣೆಗಳ ಪ್ರಸ್ತಾಪ, ಕ್ರಿಯಾಯೋಜನೆಗಳಿಗೆ ಒಪ್ಪಿಗೆ ನೀಡುವ ವಿಚಾರದ ಪ್ರಸ್ತಾಪವಾಗಲಿಲ್ಲ.
ಶಾಸಕರಾದ ತನ್ವೀರ್‌ಸೇಠ್, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಬಿ.ಹರ್ಷವರ್ಧನ, ವಿಧಾನಪರಿಷತ್ ಸದಸ್ಯರಾದ ಎಚ್.ವಿಶ್ವನಾಥ್, ಮರಿತಿಬ್ಬೇಗೌಡ, ಮಧು ಮಾದೇಗೌಡ, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ದಿನೇಶ್ ಗೂಳೀಗೌಡ, ನಾಮ ನಿರ್ದೇಶಿತ ಸದಸ್ಯರಾದ ಎಸ್‌ಬಿಎಂ ಮಂಜು, ಕೆ.ಮಾದೇಶ್, ಲಿಂಗಣ್ಣ, ಎಂ.ಎನ್.ನವೀನ್ ಕುಮಾರ್, ಎಸ್.ಲಕ್ಷ್ಮೀದೇವಿ, ಅಧೀಕ್ಷಕ ಅಭಿಯಂತರ ಚನ್ನಕೇಶವ ಇನ್ನಿತರ ಸದಸ್ಯರು ಹಾಜರಿದ್ದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ವಿ.ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ಶಾಸಕರಾದ ಎಚ್.ವಿಶ್ವನಾಥ್,ತನ್ವೀರ್‌ಸೇಠ್,ಎಸ್.ಎ.ರಾಮದಾಸ್,ಎಲ್.ನಾಗೇಂದ್ರ, ಬಿ.ಹರ್ಷವರ್ಧನ, ಮರಿತಿಬ್ಬೇಗೌಡ, ಮಧುಮಾದೇಗೌಡ,ಡಾ.ಡಿ.ತಿಮ್ಮಯ್ಯ,ಸಿ.ಎನ್.ಮಂಜೇಗೌಡ, ದಿನೇಶ್ ಗೂಳೀಗೌಡ ಹಾಜರಿದ್ದರು





