Mysore
24
few clouds

Social Media

ಸೋಮವಾರ, 26 ಜನವರಿ 2026
Light
Dark

ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಿಎಂ ಬೊಮ್ಮಾಯಿ

ದೇಗುಲದಲ್ಲೇ ಮೊದಲ ಬಾರಿ ಸಿಎಂ ನೇತೃತ್ವದಲ್ಲಿ ಸಭೆ: ಹಲವು ಪ್ರಮುಖ ನಿರ್ಣಯ

ಹನೂರು: ಮಲೆ ಮಹದೇಶ್ವರ ದೇಗುಲ ಅಭಿವೃದ್ಧಿಗೆ ಅಗತ್ಯವಿರುವ ವ್ಯವಸ್ಥೆಗಳನ್ನು ಒದಗಿಸಲು ಮಾಸ್ಟರ್ ಪ್ಲಾನ್ ರಚಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ತಮ್ಮ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಮಲೆ ಮಹದೇಶ್ವರದಲ್ಲಿ ಮಹದೇಶ್ವರ ಪ್ರಾಧಿಕಾರದ ಸಭೆಯ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಾಧಿಕಾರಕ್ಕೆ ಸೇರಿದ ೧೫೯ ಎಕರೆ ಇದ್ದು, ಇನ್ನೂ ೭೦ ಎಕರೆ ಬಳಕೆಯಾಗಿಲ್ಲ. ೮೦ ಎಕರೆಯಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಶೆಡ್‌ಗಳನ್ನು ತೆಗೆದು ಏನು ಮಾಡಲು ಸಾಧ್ಯವಿದೆ ಎಂದು ಪರಿಶೀಲಿಸಲಾಗುತ್ತದೆ. ಮೂಲ ದೇವಸ್ಥಾನದ ೭೦ ಎಕರೆಗೆ ಮಾಸ್ಟರ್ ಪ್ಲಾನ್ ರಚಿಸಿ ಯೋಜನಾಬದ್ದವಾಗಿ ಅನುಷ್ಠಾನ ಗೊಳಿಸಬೇಕು. ಬಡಜನರು ಇಲ್ಲಿಗೆ ಹೆಚ್ಚು ಬರುವುದರಿಂದ ಡಾರ್ಮಿಟರಿಗಳನ್ನು ನಿರ್ಮಿಸಬೇಕು. ಸುಮಾರು ೫ ಸಾವಿರ ಜನ ಒಂದೇ ಬಾರಿಗೆ ಉಳಿದುಕೊಳ್ಳುವ ವ್ಯವಸ್ಥೆಯಾಗಬೇಕು ಎಂದು ಸೂಚಿಸಲಾಗಿದೆ ಎಂದರು.

ಮುಂದಿನ ತಿಂಗಳು ಮೂರ್ತಿ ಅನಾವರಣ:ಮಲೆ ಮಹಾದೇಶ್ವರನ ಮೂರ್ತಿ ಪೂರ್ಣಗೊಂಡಿದ್ದು ಅದನ್ನು ಮುಂದಿನ ತಿಂಗಳು ಅನಾವರಣವಾಗಲಿದೆ. ಹಲವಾರು ಕಾರ್ಯಕ್ರಮಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ತಿಳಿಸಿದೆ ಎಂದರು.

ಸಂಪರ್ಕ ರಸ್ತೆ ನಿರ್ಮಾಣಕ್ಕೆ ೧೦೦ ಕೋಟಿ ರೂ.:

ಮಲೆಮಹದೇಶ್ವರ ಕ್ಷೇತ್ರದಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿ ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಈ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆ ಬಹಳ ಪ್ರಮುಖವಾಗಿದ್ದು, ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಈ ಪ್ರದೇಶಕ್ಕೆ ಸಂಪರ್ಕ ರಸ್ತೆ ನಿರ್ಮಿಸಲು ೧೦೦ ಕೋಟಿ ರೂ.ಗಳನ್ನು ಮಲೆಮಹದೇಶ್ವರ ಬೆಟ್ಟ ಹಾಗೂ ಕ್ಷೇತ್ರದ ಎರಡೂ ಬದಿಗಳಿಗೆ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖೆಗೆ ಹಣವನ್ನು ನೀಡಲಾಗುವುದು ಎಂದರು.

ಹುಲಿ ಯೋಜನೆ ತೀರ್ಮಾನವಾಗಿಲ್ಲ

ಮಲೈಮಹದೇಶ್ವರ ಹುಲಿ ಯೋಜನೆಯ ಪ್ರಸ್ತಾಪ ವನ್ಯಜೀವಿ ಮಂಡಳಿಯ ಮುಂದಿದ್ದು, ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ. ಈ ಯೋಜನೆಯ ಅನುಷ್ಠಾನದ ಸಂದರ್ಭದಲ್ಲಿ ಇಲ್ಲಿನ ಜನವಸತಿಗೆ ಯಾವುದೇ ರೀತಿ ತೊಂದರೆಯಾಗುವ ಬಗ್ಗೆ ಕೆಲವು ಸಂದೇಹಗಳು ವ್ಯಕ್ತವಾಗಿದ್ದು, ತೀರ್ಮಾನ ಕೈಗೊಳ್ಳುತ್ತೇವೆ ಎಂದು ಬೊಮ್ಮಾಯಿ ತಿಳಿಸಿದರು.
ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ, ಶಾಸಕರಾದ ನರೇಂದ್ರ, ಎನ್.ಮಹೇಶ್ , ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮತ್ತಿತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!