Mysore
19
few clouds

Social Media

ಸೋಮವಾರ, 12 ಜನವರಿ 2026
Light
Dark

ಗ್ರಾಮ ಕುಡಿಯುವ ನೀರು ಯೋಜನೆಗೆ ಶೀಘ್ರವೇ ಚಾಲನೆ : ವಿ ಸೋಮಣ್ಣ

ಹನೂರು : ಕ್ಷೇತ್ರ ವ್ಯಾಪ್ತಿಯಲ್ಲಿನ 92 ಗ್ರಾಮಗಳಿಗೆ ಮೊದಲನೇ ಹಂತದ ಬಹು ಗ್ರಾಮ ಕುಡಿಯುವ ನೀರು ಯೋಜನೆ ಉದ್ಘಾಟನೆ ಸೇರಿದಂತೆ ವಿವಿಧ ಹೊಸ ಕಾರ್ಯಕ್ರಮಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ವಿ ಸೋಮಣ್ಣ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಡಿಸೆಂಬರ್ 12ರಂದು ಮುಖ್ಯಮಂತ್ರಿಗಳು ಹನೂರು ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲಾ ತಾಲೂಕಿನ 332 ಕೆರೆಗಳಿಗೆ 1497 ಕೋಟಿ ವೆಚ್ಚದಲ್ಲಿ ಡಿಪಿಆರ್ ಸಿದ್ದಪಡಿಸಿದ್ದು ಮಹತ್ವಕಾಂಕ್ಷೆಯ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ.ಇದರಿಂದ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿಯೂ ಅಂತರ್ಜಲ ವೃದ್ಧಿಸಲಿದ್ದು ರೈತರಿಗೆ ಅನುಕೂಲವಾಗಲಿದೆ, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿಸ್ತೀರ್ಣ ಸುಮಾರು ಒಂದು ತುದಿಯಿಂದ ಇನ್ನೊಂದು ತುದಿಯವರೆಗೆ 180 ಕಿಲೋಮೀಟರ್ ಅಂತರವಿದೆ. ಈ ಭಾಗದಲ್ಲಿನ ಜನತೆ ಮುಗ್ಧರು ಇವರಿಗೆ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವುದೇ ನನ್ನ ಗುರಿ, ಮುಖ್ಯಮಂತ್ರಿಗಳು ಕಾರ್ಯಕ್ರಮದ ಉಸ್ತುವಾರಿಯನ್ನು ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್ ರವರಿಗೆ ಜವಾಬ್ದಾರಿ ವಹಿಸಿದ್ದೇನೆ ಇವರ ಮಾರ್ಗದರ್ಶನದಲ್ಲಿ ಬಿಜೆಪಿ ಮುಖಂಡರುಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ವಾಸ್ತವ್ಯ : ಮುಖ್ಯಮಂತ್ರಿಗಳ ಕಾರ್ಯಕ್ರಮ ಮುಗಿದ ನಂತರ ಪ್ರತಿ ತಾಲೂಕಿನಲ್ಲಿ ಮೂರು ದಿನಗಳ ಕಾಲ ವಾಸ್ತವ್ಯ ಇದ್ದು ಆ ಭಾಗದ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ಬಿಜೆಪಿ ಕಾರ್ಯಕರ್ತರು ಯಾವುದೇ ಕಾರಣಕ್ಕೂ ದೃತಿಗೆಡಬಾರದು ನಿಮ್ಮ ಜೊತೆ ಸದಾ ನಾನಿದ್ದೇನೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಸ್ಥಳ ಪರಿಶೀಲನೆ : ಪಟ್ಟಣದ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಜರಗಲಿದ್ದು ಸರ್ಕಾರದ ಫಲಾನುಭವಿಗಳು ಹಾಗೂ ಕಾರ್ಯಕರ್ತರು ಸೇರಿ ಸುಮಾರು 25 ಸಾವಿರ ಜನ ಸೇರುವ ನಿರೀಕ್ಷೆ ಇದೆ. ಬರುವಂತಹ ಫಲಾನುಭವಿಗಳಿಗೆ ಹಾಗೂ ಕಾರ್ಯಕರ್ತರಿಗೆ ಸರ್ಕಾರದ ವತಿಯಿಂದಲೇ ಬಸ್, ಹಾಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಕಲ್ಪಿಸಲಾಗಿದೆ ಕಾರ್ಯಕ್ರಮದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಕ್ರಮವಹಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಕೊಳ್ಳೇಗಾಲ ಶಾಸಕ ಎನ್ ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಸುಂದರ್, ಉಪಾಧ್ಯಕ್ಷ ಡಾ. ದತ್ತೇಶ್ ಹಿಂದುಳಿದ ವರ್ಗಗಳ ಕಾರ್ಯಕಾರಿಣಿ ಸಮಿತಿ ಸದಸ್ಯ ಜನಧ್ವನಿ ಬಿ ವೆಂಕಟೇಶ್, ಬಿಜೆಪಿ ಮುಖಂಡರುಗಳಾದ ಡಾ. ಪ್ರೀತಮ್ ನಾಗಪ್ಪ, ರಾಮಚಂದ್ರ ಮಂಡಲ ಅಧ್ಯಕ್ಷ ಸಿದ್ದಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!