Mysore
24
overcast clouds

Social Media

ಗುರುವಾರ, 01 ಜನವರಿ 2026
Light
Dark

ಕಬ್ಬಿಗೆ ಹೆಚ್ಚುವರಿಯಾಗಿ 50 ರೂ. ನೀಡುವ ಸರ್ಕಾರದ ಆದೇಶಕ್ಕೆ ರೈತರ ತಿರಸ್ಕಾರ

ಧರಣಿ ಮುಂದುವರಿಸಲು ನಿರ್ಧಾರ

ಬೆಂಗಳೂರು: ಕಬ್ಬು ಉಪ ಉತ್ಪನ್ನಗಳಿಂದ ಟನ್ ಗೆ 126 ರೂ. ಲಾಭ ಬರುತ್ತಿದ್ದು, ಅದರಲ್ಲಿ ಮೊದಲನೇ ಕಂತಾಗಿ ರೈತರಿಗೆ ಸೂಕ್ತ ಹಾಗೂ ಲಾಭದಾಯಕ ಬೆಲೆ (ಎಫ್ ಆರ್ ಪಿ) ಗೆ ಹೆಚ್ಚುವರಿಯಾಗಿ 50 ರೂ ನೀಡುವಂತೆ ಕಾರ್ಖಾನೆಗಳಿಗೆ
ನಿರ್ದೇಶಿಸುವುದಾಗಿ ಸಕ್ಕರೆ ಸಚಿವ ಶಂಕರ ಮುನೇನಕೊಪ್ಪ ತಿಳಿಸಿದರು.
ವಿಕಾಸಸೌಧದ ಸಭಾಂಗಣದಲ್ಲಿ ಸೋಮವಾರ ನಡೆದ
ಕಬ್ಬು ನಿಯಂತ್ರಣ ಮಂಡಳಿ ಸಭೆಯಲ್ಲಿ ಈ ಮಾಹಿತಿ ನೀಡಿದರು.
ಆದರೆ ಸಚಿವರ ಈ ನಿರ್ಧಾರವನ್ನು ರಾಜ್ಯ ಕಬ್ಬು ಬೆಳಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿರಸ್ಕಾರ ಮಾಡಿ ಚಳವಳಿ ಮುಂದುವರಿಸುತ್ತೇವೆ ಎಂದು ತಿಳಿಸಿದರು.
ನಂತರ ಸಚಿವರು ನಾಳೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳೋಣ ಎಂದು ತಿಳಿಸಿದರು.

ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಉತ್ಪಾದನೆಗೆ ಪ್ರೋತ್ಸಾಹಧನ, ಕಡಿಮೆ ಬಡ್ಡಿಗೆ ಸಾಲ, ಎಥೆನಾಲ್ ಖಚಿತ ಖರೀದಿ
ಭರವಸೆ, ತೆರಿಗೆ ವಿನಾಯಿತಿ, ವಿದ್ಯುತ್ ಖರೀದಿ ಭರವಸೆ, ಕಡಿಮೆ ಬಡ್ಡಿ ಧನ ಸಹಾಯ, ಸಕ್ಕರೆ ರಪ್ತು ಪ್ರೋತ್ಸಾಹದ ಇನ್ನಿತರ ಸವಲತ್ತುಗಳನ್ನು ಸರ್ಕಾರದಿಂದ ಪಡೆಯುವುದರಿಂದ ಸರ್ಕಾರದ ಆದೇಶಗಳನ್ನು ಪಾಲಿಸಬೇಕು.
ಸಕ್ಕರೆ ಕಾರ್ಖಾನೆಗಳು ಕಟಾವ್ ಕೂಲಿ ಸಾಗಾಣಿಕೆ ವೆಚ್ಚವನ್ನು 250 ರಿಂದ 300 ಏರಿಕೆ ಮಾಡಿದ್ದಾರೆ. ಈ ವೆಚ್ಚವನ್ನು ಕಡಿಮೆ ಮಾಡಿದರೆ ಟನ್ ಗೆ ರೈತರಿಗೆ 150 -200 ಉಳಿಯಬಹುದು ಈ ದಿಕ್ಕಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿ ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ಉತ್ತರ ಪ್ರದೇಶ, ಪಂಜಾಬ್, ಹರಿಯಾಣ , ತಮಿಳುನಾಡು ತೆಲಂಗಾಣ ರಾಜ್ಯಗಳಲ್ಲೂ ಹೆಚ್ಚುವರಿ ರಾಜ್ಯ ಸಲಹಾ ಬೆಲೆ ನಿಗದಿ ಮಾಡಿದ್ದಾರೆ. ಅದನ್ನು ಗಮನಿಸಿ ಹೆಚ್ಚುವರಿ ಬೆಲೆ ನಿಗದಿಮಾಡಲಿ. ಸಕ್ಕರೆ ಇಳುವರಿಯಲ್ಲಿ ಮೋಸ ತಪ್ಪಿಸಿದರೆ ರೈತರಿಗೆ ಒಂದು ಇಳುವರಿಗೆ 300 ಹೆಚ್ಚಳವಾಗುತ್ತದೆ. ಎಲ್ಲವನ್ನು ಸರ್ಕಾರ ಗಮನಿಸಿ ತೀರ್ಮಾನ ಮಾಡಿ ಎಂದು ಸಚಿವರಿಗೆ ತಿಳಿಸಿದರು.
ಫ್ರೀಡಂ ಪಾರ್ಕಿನಲ್ಲಿ ಅಹೋರಾತ್ರಿ ಧರಣಿ ಮುಂದುವರಿಯುತ್ತದೆ ಎಂದು ಶಾಂತಕುಮಾರ್ ತಿಳಿಸಿದರು.
ಸಭೆಯಲ್ಲಿ ಕಬ್ಬು ಖರೀದಿ ಮಂಡಳಿ ಸದಸ್ಯರು, ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಆಯುಕ್ತ ಶಿವಾನಂದ ಕೆಲ್ಕರಿ ಮತ್ತಿತರರು ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!