Mysore
27
haze

Social Media

ಗುರುವಾರ, 01 ಜನವರಿ 2026
Light
Dark

ವರುಣ ನಾಲೆ ಮೇಲ್ಸೇತುವೆಯಲ್ಲಿ ನೀರು ಸೋರಿಕೆ

ಮೈಸೂರು-ನಂಜನಗೂಡು ಗೆಜ್ಜಗಳ್ಳಿ ಬಳಿಯ ನಾಲೆಯಲ್ಲಿ ನೀರು ಪೋಲು: ಅಧಿಕಾರಿಗಳ ನಿರ್ಲಕ್ಷ್ಯ
ಮೈಸೂರು: ಮೈಸೂರು-ನಂಜನಗೂಡು ರಸ್ತೆಯ ಗೆಜ್ಜಗಳ್ಳಿ ಬಳಿಯ ವರುಣ ನಾಲೆ ಮೇಲ್ಸೇತುವೆಯಲ್ಲಿ(ಅಕ್ವಡೆಟ್) ನೀರು ಸೋರಿಕೆಯಾಗುತ್ತಿದ್ದು, ಇದರಿಂದ ಅನಗತ್ಯವಾಗಿ ನೀರು ಪೋಲಾಗುತ್ತಿದೆ.
ಪ್ರತಿವರ್ಷ ನೀರು ಬಿಟ್ಟ ಸಮಯದಲ್ಲಿ ಹೀಗೆ ಸೋರಿಕೆಯಾಗುವುದು ಮಾಮೂಲಿಯಂತಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇದನ್ನು ಸರಿಪಡಿಸದೆ ಕಂಡೂ ಕಾಣದಂತೆ ಇದ್ದಾರೆ. ಅಧಿಕಾರಿಗಳ ಈ ವರ್ತನೆಯ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟು ೧೨೬ ಕಿ.ಮೀ. ಉದ್ದದ ನಾಲೆ ಕೆಆರ್‌ಎಸ್‌ನಿಂದ ಆರಂಭವಾಗಿ ಬೆಂಗಳೂರು-ಮೈಸೂರು ರಸ್ತೆಯ ಸಿದ್ದಲಿಂಗಪುರ ಹಾಗೂ ಮೈಸೂರು-ನಂಜನಗೂಡು ರಸ್ತೆಯ ಗೆಜ್ಜಗಳ್ಳಿ ಮಾರ್ಗವಾಗಿದ್ದು, ೧.೮ ಕಿ.ಮೀ. ನಾಲೆಯೂ ಮೇಲ್ಸೇತುವೇ ಮಾದರಿಯಲ್ಲಿದೆ. ಸದ್ಯ ಮೈಸೂರು-ನಂಜನಗೂಡು ರಸ್ತೆಯ ಗೆಜ್ಜಗಳ್ಳಿ ಬಳಿಯ ನಾಲೆಯ ಜಾಯಿಂಟ್‌ನಿಂದ ಜೂನ್‌ನಲ್ಲಿ ಸೋರಲಾರಂಭಿಸಿರುವ ನೀರು ಇನ್ನು ಸೋರಿಕೆಯಾಗುತ್ತಲೆ ಇದೆ.
ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಈ ನೀರಾವರಿ ಯೋಜನೆ ಮಾಡಲಾಯಿತು. ನಂತರ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾದಾಗ ನಾಲೆ ಮೇಲ್ಸೇತುವೆಯನ್ನು ಮಾಡಲಾಯಿತು. ಈ ವೇಳೆ ಎಚ್.ಕೆ.ಪಾಟೀಲರು ನೀರಾವರಿ ಮಂತ್ರಿಯಾಗಿದ್ದರು. ಈ ನಾಲೆ ಮೇಲ್ಸೇತುವೆಯಾಗಿ ಸುಮಾರು ೨೦ ವರ್ಷಗಳೇ ಕಳೆದಿದ್ದು, ನಿರಂತರವಾಗಿ ನೀರು ಹರಿಯುವ ಕಾರಣ ನಾಲೆಯ ಜಾಯಿಂಟ್‌ಗಳಿಗೆ ಅಳವಡಿಸಿರುವ ಕೊಂಡಿಗಳು ಹಾಳಾಗಿವೆ. ಹೀಗೆ ಬಹುತೇಕ ಕಡೆಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು, ಗೆಜ್ಜಗಳ್ಳಿ ಬಳಿಯ ಮೇಲ್ಸೇತುವೆಯಲ್ಲಿ ಭಾರೀ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಆದರೆ, ಇದನ್ನು ಸರಿಪಡಿಸುವ ಕೆಲಸ ಸರಿಯಾಗಿ ಆಗಿಲ್ಲ.
ನೀರು ಬಿಟ್ಟಾಗೆಲ್ಲ ಸೋರಿಕೆ: ನಾನು ಸುಮಾರು ಎರಡು ವರ್ಷಗಳಿಂದ ನೋಡುತ್ತಿದ್ದೇನೆ. ನೀರು ಬಿಟ್ಟಾಗೆಲ್ಲ ನೀರು ಸೋರಿಕೆಯಾಗುತ್ತಿದೆ. ಜಲ ಜೀವನ್ ಮಿಷನ್ ಯೋಜನೆ ಜಾರಿಗೆ ತಂದು ನೀರಿನ ಮಿತ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಸರ್ಕಾರಗಳಿಗೆ ಹೀಗೆ ನೀರು ಪೋಲಾಗುವುದು ಕಾಣುವುದಿಲ್ಲವೇ? ಶೀಘ್ರ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಹವ್ಯಾಸಿ ಹವಮಾನ ಪರಿವೀಕ್ಷಕ ರವಿಕೀರ್ತಿ.


ವಾಹನಗಳು ಸಂಚಾರ ಮಾಡುವ ಕಾರಣ ಒತ್ತಡದಿಂದ ಸ್ವಲ್ಪ ಶೇಕ್ ಆಗುತ್ತದೆ. ಹೀಗಾಗಿ ಅಲ್ಲಿನ ಜಾಯಿಂಟ್‌ಗೆ ಅಳವಡಿಸಿರುವ ಕೊಂಡಿಯ ರಬ್ಬರ್ ಸಡಿಲವಾಗಿ ಈ ಜಾಗದಲ್ಲಿ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ನೀರು ಸೋರಿಕೆಯಾಗುತ್ತಿದೆ. ಕಳೆದ ವರ್ಷವೂ ದುರಸ್ತಿ ಮಾಡಲಾಗಿತ್ತು. ಡಿಸೆಂಬರ್‌ಗೆ ನೀರು ನಿಲ್ಲಿಸಿದ ನಂತರ ಇದನ್ನು ಸರಿಪಡಿಸಲಾಗುವುದು.
-ಎಂ.ಎಸ್.ಜಸ್ವಂತ್, ಎಇಇ, ವರುಣ ವಿಭಾಗ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!