ಚಾಮರಾಜನಗರ: ದಸಂಸಗಳ ಐಕ್ಯ ಹೋರಾಟ ಚಾಲನಾ ಸಮಿತಿಯಿಂದ ಡಿ.6 ರಂದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ದಲಿತರ ಸಾಂಸ್ಕೃತಿಕ ಪ್ರತಿರೋಧ ಎಂಬ ಹೆಸರಿನಲ್ಲಿ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಸಮಿತಿ ಸದಸ್ಯ ಕೆ.ಎಂ.ನಾಗರಾಜು ತಿಳಿಸಿದರು.
ಅಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಮಾವೇಶ ನಡೆಯಲಿದೆ. ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಯಿಂದ ತಲಾ 50 ಜನರಂತೆ 6 ಸಾವಿರ ಗ್ರಾಪಂಗಳಿಂದ ಸುಮಾರು 2-3 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ರ್ಕಾರದ ದುರಾಡಳಿತ ಮತ್ತು ಸಂವಿಧಾನ ವಿರೋಧ ಚಟುವಟಿಕೆಗಳನ್ನು ತಿಳಿಸಲು ಸಮಾವೇಶವನ್ನು ಆಯೋಜಿಸಿ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಆ ಮೂಲಕ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಕೆಲಸ ಮಾಡಲಾಗುತ್ತದೆ. ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕು ಎಂದು ಮನವಿ ಮಾಡಿದರು.
ಸಮಿತಿಯ ಮುಖಂಡ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯಿಂದ 5-6 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶಕ್ಕೆ ತೆರಳಲು150 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ದಸಂಸ ಮುಖಂಡರಾದ ಯರಿಯೂರು ರಾಜಣ್ಣ, ದೊಡ್ಡಿಂದುವಾಡಿ ಸಿದ್ದರಾಜು, ಸಿ.ಎಂ.ಶಿವಣ್ಣ, ಶಂಕರ್, ಕುಮಾರ್ ಹಾಜರಿದ್ದರು.