ಚಾಮರಾಜನಗರ: ಪೊಲೀಸ್ ಜೀಪಿನಿಂದ ಜಿಗಿದು ಯುವಕ ಸಾವು ಪ್ರಕರಣ ಸಂಬಂಧ ಸಿಪಿಐ ಶಿವಮಾದಯ್ಯ ಪರ ನಡೆದ ಪ್ರತಿಭಟನೆ ಹಿಂದೆ ಸ್ಥಳೀಯ ಶಾಸಕರ ಕೈವಾಡವಿದೆ ಎಂದು ಜಿಪಂ ಮಾಜಿ ಸದಸ್ಯ ಕಮಲ್‌ನಾಗರಾಜ್ ದೂರಿದರು.
ಕುಂತೂರುಮೋಳೆ ಗ್ರಾಮದ ಯುವಕ ನಿಂಗರಾಜು ಎಂಬಾತನನ್ನು ಪೊಲೀಸ್ ಜೀಪಿನಲ್ಲಿ ವಿಚಾರಣೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆತ ಜೀಪಿನಿಂದ ಹಾರಿ ಮೃತಪಟ್ಟಿರುವ ಘಟನೆ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸ್ಥಳೀಯ ಶಾಸಕರು ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿಲ್ಲ. ಅಲ್ಲದೆ, ಸಿಪಿಐ ಶಿವಮಾದಯ್ಯ ಪರ ನಡೆದ ಪ್ರತಿಭಟನೆಯ ನೇತೃತ್ವವನ್ನು ಶಾಸಕರ ಸಂಬಂಧಿಸಿ ವಹಿಸಿದ್ದು ಈ ಘಟನೆ ಹಿಂದೆ ಶಾಸಕರ ಕೈವಾಡವಿರುವುದು ಕಂಡುಬರುತ್ತದೆ ಎಂದು ಆರೋಪಿಸಿದರು.
ಉಪ್ಪಾರ ಮುಖಂಡ ಬಾಗಳಿ ರೇವಣ್ಣ ಮಾತನಾಡಿ, ಕ್ಷೇತ್ರದಲ್ಲಿ ದಲಿತರು ಹಾಗೂ ಉಪ್ಪಾರ ಜನಾಂಗ ಸೋದರರಂತೆ ಜೀವನ ನಡೆಸುತ್ತಿದ್ದು ಕೆಲ ಕಿಡಿಗೇಡಿಗಳಿಂದ ಪ್ರಕರಣದಲ್ಲಿ ಜಾತಿ ಬೆರೆಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕುಟುಂಬಕ್ಕೆ ಆಧಾರವಾಗಿದ್ದ ಯುವಕ ಮೃತಪಟ್ಟಿದ್ದರಿಂದ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ. ಕೂಡಲೇ ಸರ್ಕಾರದ ವತಿಯಿಂದ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ಕೊಡಿಸಬೇಕು. ಅಲ್ಲದೇ ಪ್ರಕರಣ ಸಂಬಂಧ ಉನ್ನತ ತನಿಖೆ ನಡೆಸಬೇಕು. ಶಾಸಕರು ಕುಟುಂಬಕ್ಕೆ ಸಾಂತ್ವನ ಹೇಳಲು ಬಾರದಿರುವುದು ಖಂಡನೀಯ ಎಂದರು.
ಮುಖಂಡರಾದ ಮಣಿ, ಶಿವಣ್ಣ, ಸಿದ್ದರಾಜು, ಶಿವಶಂಕರ್, ರವಿಕುಮಾರ್ ಹಾಜರಿದ್ದರು.