Mysore
28
haze

Social Media

ಗುರುವಾರ, 01 ಜನವರಿ 2026
Light
Dark

ಗೃಹ ಕಾರ್ಯದರ್ಶಿಗೆ ಒಡನಾಡಿ ದೂರು

ಒಡನಾಡಿಯ ಮಡಿಲು ಪುರ್ನವಸತಿ ಕೇಂದ್ರಕ್ಕೆ ಪೊಲೀಸರ ಅಕ್ರಮ ಪ್ರವೇಶ

ಮೈಸೂರು: ಮಕ್ಕಳು ಸುರಕ್ಷಿತವಾಗಿರುವ ಜಾಗದಲ್ಲಿ ಭಯದ ವಾತಾವರಣ ಸೃಷ್ಟಿಸಿರುವ ಚಿತ್ರದುರ್ಗ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ ಗೃಹ ಇಲಾಖೆ ಕಾರ್ಯದರ್ಶಿಗಳು, ನಗರ ಪೊಲೀಸ ಆಯುಕ್ತರು, ಮಕ್ಕಳ ಕಲ್ಯಾಣ ಸಮಿತಿ ಮತ್ತು ವಿಜಯನಗರ ಪೊಲೀಸ್ ಠಾಣೆಗೆ ಒಡನಾಡಿ ಸಂಸ್ಥೆಯಿಂದ ದೂರು ನೀಡಲಾಗಿದೆ.

ನ.30ರಂದು ಒಡನಾಡಿ ಸೇವಾ ಸಂಸ್ಥೆಯ ಮಡಿಲು ಪುರ್ನವಸತಿ ಕೇಂದ್ರಕ್ಕೆ ಕಾನೂನು ಬಾಹಿರವಾಗಿ ಮಫ್ತಿಯಲ್ಲಿ ನುಗ್ಗಿರುವ 10 ಮಂದಿ ಚಿತ್ರದುರ್ಗದ ಪೊಲೀಸರು ಸಂಸ್ಥೆಯೊಳಗೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸಂಸ್ಥೆಯ ನಿರ್ದೇಶಕರು ಅವರನ್ನು ತಡೆದು, ಕಾನೂನು ಬದ್ಧವಾಗಿ ಶೋಧ ನಡೆಸಿ, ಯಾವುದೇ ನೋಟಿಸ್ ಇಲ್ಲದೇ ಹೀಗೆ ಬಂದು ಹುಡುಕಾಟ ನಡೆಸುವುದು ಸರಿಯಲ್ಲ. ನೀವು ಇಲ್ಲಿಗೆ ಬರಬೇಕಾದರೆ ಮಕ್ಕಳ ಕಲ್ಯಾಣ ಸಮಿತಿ ಮತ್ತು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳೊಂದಿಗೆ ಇಲ್ಲಿ ಬರಬೇಕು. ನಿಮಗೆ ಕಾನೂನಿನ ಅರಿವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಸರಿಯಾಗಿ ಉತ್ತರ ನೀಡದ ಪೊಲೀಸರು, ನಾವು ಮಕ್ಕಳ ಕಲ್ಯಾಣ ಸಮಿತಿ ಎಂದು ಭಾವಿಸಿ ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ. ನೀವು ಇಲ್ಲಿಗೆ ಬಂದಿರುವುದು ಎರಡನೇ ಬಾರಿ ಹೀಗಿರುವಾಗ ಹೇಗೆ ಮಕ್ಕಳ ಕಲ್ಯಾಣ ಸಮಿತಿ ಎಂದು ತಿಳಿದುಕೊಂಡಿರಿ ಎಂದು ಕೇಳಿದ್ದಾರೆ. ಇದಕ್ಕೆ ಸರಿಯಾಗಿ ಉತ್ತರ ನೀಡದ ಪೊಲೀಸರು, ತಪ್ಪಾಯಿತು ಎಂದು ಕ್ಷಮೆ ಕೇಳಿ ಹೋಗಿದ್ದಾರೆ.

ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಪೊಲೀಸರು ಕಾನೂನು ಬಾಹಿರವಾಗಿ ಸಂಸ್ಥೆಗೆ ಬಂದು ಮಕ್ಕಳು ಸುರಕ್ಷಿತವಾಗಿರುವ ಜಾಗದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಯ ಕಾರ್ಯದರ್ಶಿಗಳು ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ಮೇಲ್ ಮೂಲಕ, ನಗರ ಪೊಲೀಸ್ ಆಯುಕ್ತರು ಮತ್ತು ವಿಜಯನಗರ ಪೊಲೀಸ್ ಠಾಣೆ ಟಪಾಲು ಮೂಲಕ ದೂರು ನೀಡಲಾಗಿದೆ.

ಒಡನಾಡಿ ಸಂಸ್ಥೆಯಿಂದ ನನಗೆ ಇನ್ನೂ ಯಾವ ದೂರು ಬಂದಿಲ್ಲ. ಬಂದ ನಂತರ ಇದರ ಬಗ್ಗೆ ಪ್ರತಿಕ್ರಿಯಿಸುತ್ತೇನೆ. -ರಮೇಶ್ ಬಾನೋತ್, ನಗರ ಪೊಲೀಸ್ ಆಯುಕ್ತ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!