Mysore
28
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ವೀರನಹೊಸಹಳ್ಳಿಯಲ್ಲಿ ಆಪರೇಶನ್‌ ಟೈಗರ್‌

ಜಾನುವಾರು ಭಕ್ಷಕ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭ

ಮೈಸೂರು: ಜಿಲ್ಲೆಯ ಹುಣಸೂರು ತಾಲ್ಲೂಕು ಹನಗೋಡು ಹೋಬಳಿ ಸುತ್ತಮುತ್ತ 10ಕ್ಕೂ ಹೆಚ್ಚು ಜಾನುವಾರುಗಳನ್ನು ಕೊಂದಿರುವ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಗುರುವಾರ ಕಾರ್ಯಾಚರಣೆ ಆರಂಭಿಸಿದೆ.
ಗ್ರಾಮಸ್ಥರು ನೀಡಿದ ದೂರುಗಳ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಗುರುವಾರ ಮುಂಜಾನೆ ಐದು ಗಂಟೆಯಿಂದಲೇ ಕಾರ್ಯಾಚರಣೆ ಆರಂಭಿಸಿದೆ. ಮತ್ತಿಗೋಡು ಆನೆ ಶಿಬಿರದ ಭೀಮ ಆನೆ ಸಹಾಯದಿಂದ ಬಿಆರ್ ಕಾವಲು, ಶೆಟ್ಟಿಹಳ್ಳಿ ಅರಣ್ಯ ಮತ್ತು ತೋಟಗಳ ಸುತ್ತಮುತ್ತ ಶೋಧ ಕಾರ್ಯಾಚರಣೆ ಪ್ರಾರಂಭವಾಗಿದೆ.
ಕಾರ್ಯಾಚರಣೆಯ ನಡುವೆಯೇ ಹುಲಿಯು ಹೆಮ್ಮಿಗೆ ಹಾಡಿಯ ತಾಯಮ್ಮ ಅವರಿಗೆ ಸೇರಿದ ಹಸುವನ್ನು ಎಳೆದುಕೊಂಡು ಹೋಗಿ ತಿಂದಿರುವ ಘಟನೆಯೂ ನಡೆದಿದೆ. ಈ ಭಾಗದಲ್ಲಿ ಬೆಳಗ್ಗೆ 10 ಗಂಟೆವರೆಗೂ ಹುಲಿಗಾಗಿ ಹುಡುಕಾಟ ನಡೆಸಿದರೂ ಹುಲಿ ಪತ್ತೆಯಾಗಿಲ್ಲ.
ಕೆಲ ದಿನಗಳ ಹಿಂದೆ ಹನಗೋಡು, ಅಬ್ಬೂರು, ಸಿಂಡೆನಹಳ್ಳಿ, ಹೆಮ್ಮಿಗೆ ಗ್ರಾಮಗಳಲ್ಲಿ ಈ ಹುಲಿ ಹತ್ತಕ್ಕೂ ಹೆಚ್ಚು ಹಸುಗಳನ್ನು ಕೊಂದು ಹಾಕಿದೆ. ಹುಲಿಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಈ ಸ್ಥಳದಲ್ಲಿ ಬೋನು ಇಟ್ಟಿದ್ದರೂ ಪ್ರಯೋಜನವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಈಗ ಸೆರೆ ಕಾರ್ಯಾಚರಣೆ ಆರಂಭಿಸಲಾಗಿದೆ.
ಹುಲಿ ಕಾಣಿಸಿಕೊಂಡಿರುವ ವಿವಿಧೆಡೆ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, 11 ಮಂದಿ ಅರಣ್ಯ ಸಿಬ್ಬಂದಿ ಮರದ ಮೇಲಿನಿಂದ ಹುಲಿಯ ಚಲನವಲನದ ಮೇಲೆ ನಿಗಾ ಇಡಲು ಆರಂಭಿಸಿದ್ದಾರೆ.
ವಿಶೇಷ ಕಾರ್ಯಪಡೆಯ ನಾಲ್ಕು ಆನೆಗಳನ್ನೂ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗುತ್ತಿದೆ. ಆನೆ ಕಾರ್ಯಪಡೆಯ ಎಂಟು ಮಂದಿ ಸಿಬ್ಬಂದಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಹುಲಿ ಸೆರೆ ಕಾರ್ಯಾಚರಣೆಗೆ ಸಹಕರಿಸುತ್ತಿದ್ದಾರೆ. ಡಿಸಿಎಫ್ ಡಾ.ಹರ್ಷವರ್ದನ್ ಮಾರ್ಗದರ್ಶನದಲ್ಲಿ ಎಸಿಎಫ್ ಧನಂಜಯ್, ಆರ್ ಎಫ್ ಒ ರತನ್ ಹಾಗೂ ಸಿಬ್ಬಂದಿ ವರ್ಗ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಡಿಸಿಎಫ್ ಡಾ ಹರ್ಷವರ್ಧನ್ ಮಾತನಾಡಿ ಹುಲಿಯಿಂದ ಜಾನುವಾರುಗಳನ್ನು ಕಳೆದುಕೊಂಡವರಿಗೆ ಹೆಚ್ಚಿನ ಪರಿಹಾರ ನೀಡಲು ಉನ್ನತ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಹುಲಿ ಓಡಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಪಗ್ ಗುರುತುಗಳೂ ಪತ್ತೆಯಾಗಿವೆ. ಅಕ್ಕಪಕ್ಕದ ಎಸ್ಟೇಟ್‌ ಗಳಲ್ಲಿ ಕ್ಯಾಮೆರಾ ಅಳವಡಿಸಿದ್ದು, ಹುಲಿಗೆ ಆಮಿಷವೊಡ್ಡಲು ಮೇಕೆಯೊಂದಿಗೆ ಪಂಜರವನ್ನೂ ಇರಿಸಿದ್ದೇವೆ ಎಂದು ಹುಣಸೂರು ವಲಯದ ವಲಯರಣ್ಯಾಧಿಕಾರಿ ರತನ್ ತಿಳಿಸಿದ್ದಾರೆ

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ