Mysore
27
broken clouds

Social Media

ಗುರುವಾರ, 08 ಜನವರಿ 2026
Light
Dark

ಡಿ.4ಕ್ಕೆ ‘ಸಲೀಂ ಅಲಿ – ಪಕ್ಷಿಲೋಕದ ಬೆರಗು’ ನಾಟಕ

ಕಲಾಮಂದಿರದ ಕಿರು ರಂಗಮಂದಿರದಲ್ಲಿ ಪ್ರದರ್ಶನ

ಮೈಸೂರು: ‘ಅರಿವು ರಂಗ’ ವತಿಯಿಂದ ‘ಸಲೀಂ ಅಲಿ-ಪಕ್ಷಿಲೋಕದ ಬೆರಗು’ ನಾಟಕ ಪ್ರದರ್ಶನವನ್ನು ಡಿ.೪ರಂದು ಸಂಜೆ ೬.೩೦ಕ್ಕೆ ನಗರದ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ಭಾರತದ ಹೆಸರಾಂತ ಪಕ್ಷಿತಜ್ಞ, ಪದ್ಮಭೂಷಣ ಡಾ.ಸಲೀಂ ಅಲಿ ಅವರ ಜೀವನಾಧಾರಿತ ನಾಟಕ ಇದಾಗಿದ್ದು, ಡಾ.ಎಂ.ಸಿ.ಮನೋಹರ ನಾಟಕ ರಚಿಸಿದ್ದಾರೆ. ಬರ್ಟಿ ಒಲಿವೇರಾ ನಿರ್ದೇಶನದ ಈ ನಾಟಕಕ್ಕೆ ಸಾಯಿಶಿವ್ ಸಂಗೀತ, ಯತೀಶ್ ಎನ್.ಕೊಳ್ಳೇಗಾಲ ರಂಗವಿನ್ಯಾಸ-ಬೆಳಕು, ಕಾಜು ರಂಗ ಪರಿಕರ, ರಜನಿ ವಸ್ತ್ರವಿನ್ಯಾಸ, ಎಂ.ಸಿ.ಗಿರಿಧರ ಸಂಗೀತ ನಿರ್ವಹಣೆ, ರಂಗನಾಥ್ ಪ್ರಸಾದನ ವಾಡಿದ್ದಾರೆ. ಎಚ್.ತೇಜಸ್, ಡಾ.ಎಂ.ಸಿ.ಮನೋಹರ, ಡಾ.ಆರ್.ಚಲಪತಿ, ಬರ್ಟಿ ಒಲಿವೆರಾ, ಸರಳಾ ನಟರಾಜ್, ಬಿ.ಸೀಮಂತಿನಿ, ನಾಗರಾಜ್ ಮೈಸೂರು, ಪ್ರಸಾದ್ ಬಾಬು ನಟಿಸಿದ್ದಾರೆ.

ಸಲೀಂ ಅಲಿ ಅವರ ಕುರಿತು ಭಾರತದಲ್ಲಿ ಇದೇ ಮೊದಲ ಬಾರಿಗೆ, ಅದರಲ್ಲೂ ಕನ್ನಡದಲ್ಲಿ ಪೂರ್ಣ ಪ್ರಮಾಣದ ನಾಟಕ ಪ್ರದರ್ಶಿತವಾಗುತ್ತಿರುವುದು ವಿಶೇಷ.

ನಾಟಕ ಸಾರಾಂಶ: ಸಲೀಂ ಅಲಿ ಚಿಕ್ಕವರಿದ್ದಾಗ ಅವರ ಚಿಕ್ಕಪ್ಪ ಏರ್‌ಗನ್‌ವೊಂದನ್ನು ಕೊಡುಗೆಯಾಗಿ ನೀಡುತ್ತಾರೆ. ಆ ಗನ್‌ನಿಂದ ಹಕ್ಕಿಯೊಂದನ್ನು ಹೊಡೆದು ಉರುಳಿಸುವ ಸಲೀಂ ಅಲಿ, ಆ ಹಕ್ಕಿ ಯಾವುದೆಂದು ತಿಳಿಯುವ ಕುತೂಹಲದಿಂದ ಬಾಂಬೆಯ ‘ನ್ಯಾಚುರಲ್ ಹಿಸ್ಟರಿ ಸೊಸೈಟಿ’ಗೆ ಭೇಟಿ ಕೊಡುತ್ತಾರೆ. ಆ ವೇಳೆ ಸೊಸೈಟಿ ಗೌರವ ಕಾರ್ಯದರ್ಶಿಯಾಗಿದ್ದ ಡಬ್ಲ್ಯೂ.ಎಸ್.ಮಿಲ್ಲಾರ್ಡನ್ ಅವರು, ಬಾಲಕ ಸಲೀಂ ಅಲಿಗೆ ಭಾರತೀಯ ಪಕ್ಷಿ ವೈವಿಧ್ಯತೆಯನ್ನು ಪರಿಚಯಿಸುತ್ತಾರೆ. ಈ ಒಂದೇ ಘಟನೆ ಅವರನ್ನು ಜೀವಮಾನವಿಡೀ ಪಕ್ಷಿಲೋಕದತ್ತ ಕರೆದೊಯ್ದು ಬಿಡುತ್ತದೆ.

ನಂತರ ಅಧ್ಯಯನ, ಸಂಶೋಧನೆ, ಕ್ಷೇತ್ರ ಪ್ರವಾಸ, ಲೇಖನ-ಪುಸ್ತಕ ಬರಹ ಇನ್ನಿತರ ಚಟುವಟಿಕೆಗಳ ಮೂಲಕ ಭಾರತದಲ್ಲಿ ಪಕ್ಷಿಲೋಕದ ಅಧ್ಯಯನವನ್ನು ಜನಪ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಈ ನಡುವೆ ಗೆಳೆತನ, ನಿರುದ್ಯೋಗ, ವೃತ್ತಿ, ಕುಟುಂಬ ಸೇರಿದಂತೆ ಜೀವನದಲ್ಲಿ ಹಲವಾರು ಸಿಹಿ-ಕಹಿ ಘಟನೆಗಳನ್ನು ಅವರು ಎದುರಿಸಬೇಕಾಗುತ್ತದೆ. ಒಟ್ಟಾರೆ ಈ ನಾಟಕದಲ್ಲಿ ಸಲೀಂ ಅಲಿ ಅವರ ಬಾಲ್ಯ, ಯೌವ್ವನ, ಅಂತಿಮ ದಿನಗಳು ಸೇರಿದಂತೆ ಅವರ ಜೀವನ ಮತ್ತು ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ. ವಿವರಗಳಿಗೆ ಮೊ. 9880643458 ಸಂಪರ್ಕಿಸಬಹುದು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!