Mysore
21
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಆಂದೋಲನ ಓದುಗರ ಪತ್ರ : 30 ಮಂಗಳವಾರ 2022

ಸಂಶೋಧನಾ ಕೇಂದ್ರ ಸ್ಥಾಪನೆ ಉತ್ತಮ ನಿರ್ಧಾರ

ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರ ಪ್ರಾರಂಭಿಸಲು ಬಜೆಟ್ ನಲ್ಲಿ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ. ವೈದ್ಯ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಈ ನಿರ್ಧಾರ ಶ್ಲಾಘನೀಯ. ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಪೂರ್ಣ ಪ್ರಮಾಣದಲ್ಲಿ ಅನುದಾನ ಒದಗಿಸಿದರೆ, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಸಂಶೋಧನಾ ಕೇಂದ್ರವು ಕಾರ್ಯಾರಂಭ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ವೈದ್ಯ ಶಿಕ್ಷಣ ಇಲಾಖೆ, ಹಣಕಾಸು ಇಲಾಖೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಂಡರೆ ಮೈಸೂರು ಮೆಡಿಕಲ್ ಕಾಲೇಜು ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಮತ್ತೊಂದು ಮೆಟ್ಟಿಲು ಏರಲು ಸಾಧ್ಯವಿದೆ.
-ನಂದಕುಮಾರ್, ಸರಸ್ವತಿ ಪುರಂ, ಮೈಸೂರು.


ಅನುಕರಣೀಯ ಶ್ರಮದಾನ

ಗುಂಡ್ಲುಪೇಟೆ ತಾಲೂಕಿನ ಅಸ್ಮಿತೆಯಂತಿದ್ದ ನಮ್ಮ ಹೆಮ್ಮೆಯ ಗುಂಡ್ಲುಹೊಳೆಯು ಹಲವು ದಶಕಗಳ ನಂತರ ಈಗ ಮೈದುಂಬಿ ಹರಿಯುತ್ತಿದೆ. ಇದರಿಂದಾಗಿ ನಮ್ಮ ತಾಲೂಕಿನ ದೊಡ್ಡಕೆರೆಯೂ ತುಂಬಿ (ಅಮಾನಿಕೆರೆ) ಗುಂಡ್ಲುಪೇಟೆ ಪಟ್ಟಣಕ್ಕೆ ಹೊಂದಿಕೊಂಡಂತೆ ಇರುವ ಚಿಕ್ಕಕೆರೆಗೆ ಆ ನೀರು ಹರಿದು ಬರುತ್ತಿದೆ. ಆದರೆ ಹೂಳು ತುಂಬಿದ್ದರಿಂದ ನೀರು ಸರಗವಾಗಿ ಹರಿದು ಚಿಕ್ಕಕೆರೆಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಅರಿತ ಗುಂಡ್ಲು ಪರಿಸರ ಬಳಗದ ಗೆಳೆಯರು ಭಾನುವಾರದ ದಿನ ಶ್ರಮದಾನದ ಮೂಲಕ ಸುಮಾರು ೩೦ ಅಡಿಗಳಷ್ಟು ಉದ್ದದ ಕಾಲುವೆಯನ್ನು ಸ್ವಚ್ಛಗೊಳಿಸಿದ್ದಾರೆ. ದಶಕಗಳಿಂದ ನೀರು ತುಂಬದೆ ಚಿಕ್ಕಕೆರೆ ಬರಿದಾಗಿದ್ದರಿಂದ ಕೆರೆಯ ಅಂಗಳ ಮತ್ತು ಕೆರೆಯ ಏರಿ ಸ್ವಚ್ಛಗೊಳಿಸಿದ್ದಾರೆ. ಬಳಗದ ಕಾರ್ಯ ಅನುಕರಣೀಯ.

-ಅಪುರಾ, ಗುಂಡ್ಲುಪೇಟೆ.


ರೈಲುಗಳು ನಿಂತು ಹೊರಡಲಿ!

ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಮತ್ತು ವಂದೇ ಭಾರತ್ ರೈಲುಗಳು ಮಂಡ್ಯದಲ್ಲಿ ಎರಡು ನಿಮಿಷ ನಿಂತು ಹೊರಡುವ ವ್ಯವಸ್ಥೆ ಆಗಬೇಕಿದೆ. ಇದರಿಂದ ಸಾವಿರಾರು ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಈಗ ಶತಾಬ್ಧಿ ರೈಲಿನಲ್ಲಿ ಪ್ರಯಾಣ ಮಾಡುವವರು ಬೆಂಗಳೂರಿಗೆ ತೆರಳಬೇಕು ಇಲ್ಲವೇ ಮೈಸೂರಿಗೆ ತೆರಳಬೇಕು. ರೈಲು ಮಂಡ್ಯದ ಮೂಲಕ ಚಲಿಸಿದರೂ ನಿಲುಗಡೆ ಇಲ್ಲದೇ ಸೌಲಭ್ಯ ದೊರೆಯುತ್ತಿಲ್ಲ. ತ್ವರಿತವಾಗಿ ಮಂಡ್ಯದಲ್ಲಿ ಈ ಎರಡೂ ರೈಲುಗಳು ಎರಡು ನಿಮಿಷ ನಿಂತು ಹೊರಡುವ ವ್ಯವಸ್ಥೆ ಮಾಡಬೇಕಿದೆ.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು.


ಕರ್ನಾಟಕ ರಾಜ್ಯೋತ್ಸವ

ಕೆಲವು ದಿನ ಪತ್ರಿಕೆಗಳು ಸೇರಿದಂತೆ, ಟಿವಿ ಚಾನಲ್ ರವರು ‘೬೭ನೇ ಕನ್ನಡ ರಾಜ್ಯೋತ್ಸವ’ವನ್ನು ಆಚರಿಸಲಾಯಿತು ಎಂದು ತಪ್ಪಾಗಿ ಅರ್ಥೈಸುತ್ತಾರೆ. ಆದರೆ ಇದು ‘ಕರ್ನಾಟಕ ರಾಜ್ಯೋತ್ಸವ’ ಎಂದಾಗ ಬೇಕು. ೧೯೫೬ ರಲ್ಲಿ, ಕರ್ನಾಟಕ ಅಸ್ತಿತ್ವಕ್ಕೆ ಬಂತು, ಹಾಗಾಗಿ ಇದು ೬೭ನೇ ಕರ್ನಾಟಕ ರಾಜ್ಯೋತ್ಸವ ಎಂದಾಗಬೇಕು.
-ಬೂಕನಕೆರೆ ವಿಜೇಂದ್ರ, ಮೈಸೂರು.


ಮರಿಗಳನ್ನು ಉಳಿಸಿ

ಮೃತಪಟ್ಟ ಹುಲಿಯ ಎರಡು ಮರಿಗಳು ಜೀವಂತವಾಗಿರುವುದನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿರುವುದು ಸಂತಸದ ಸಂಗತಿ. ಈ ಮರಿಗಳನ್ನು ಹುಡುಕಿ ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಡುವ ಅಥವಾ ಅವುಗಳಿಗೆ ಅಪಾಯವಾಗದಂತೆ ರಕ್ಷಣೆ ಒದಗಿಸುವ ಕೆಲಸ ಆಗಬೇಕಿದೆ. ಹುಲಿಗಳ ಸಂಖ್ಯೆ ನಶಿಸುತ್ತಿರುವ ಹೊತ್ತಿನಲ್ಲಿ ಈ ಮರಿಗಳನ್ನು ರಕ್ಷಿಸುವ ಅಗತ್ಯವಿದೆ. ಅರಣ್ಯ ಇಲಾಖೆ ಸಿಬ್ಬಂದಿ ನಡೆಸುತ್ತಿರುವ ಹುಲಿ ಮರಿಗಳ ಶೋಧ ಕಾರ್ಯ ಯಶಸ್ವಿಯಾಗಲಿ. ಮರಿಗಳು ಜೀವಂತವಾಗಿ, ಸುರಕ್ಷಿತವಾಗಿರಲಿ.

-ಮೈನುದ್ದೀನ್, ಎನ್.ಆರ್. ಮೊಹಲ್ಲಾ, ಮೈಸೂರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ