ದೊಡ್ಡರಸಿನಕೆರೆ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣ
ಭಾರತೀನಗರ: ಇಲ್ಲಿಗೆ ಸಮೀಪದ ದೊಡ್ಡರಸಿನಕೆರೆ ಗ್ರಾಮದಲ್ಲಿ ನಡೆದಿದ್ದ ರೌಡಿಶೀಟರ್ ಅರುಣಾ ಅಲಿಯಾಸ್ ಕಪ್ಪೆ(೨೨) ಹತ್ಯೆ ಪ್ರಕರಣದ ೭ ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೊಡ್ಡರಸಿನಕೆರೆ ಗ್ರಾಮದ ದೊಡ್ಡಯ್ಯ, ದೇವರಾಜು, ಅಭಿ ಅಲಿಯಾಸ್ ಗಾಂಜಾ, ಪುಟ್ಟಸ್ವಾಮಿ ಅಲಿಯಾಸ್ ಬೆಲ್ಲ, ಅರವಿಂದ್, ಚಂದು ಅಲಿಯಾಸ್ ಚಂದ್ರು, ರಾಘವೇಂದ್ರ ಎಂಬವರು ಅರುಣ್‌ನನ್ನು ಹತ್ಯೆಗೈದು ತಲೆ ಮರೆಸಿಕೊಂಡಿದ್ದ
೭ ಮಂದಿ ಆರೋಪಿಗಳನ್ನು ೩ ದಿನಗಳ ಹಿಂದೆ ಕೆ.ಎಂ.ದೊಡ್ಡಿ ಪೊಲೀಸರು ಬಂಧಿಸಿದ್ದರು.

ಬಂಧಿಸಿದ ನಂತರ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ನಂತರ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು.
ರೌಡಿ ಶೀಟರ್ ಅರುಣನ ಅತ್ಯೆ ನಡೆದಿದ್ದ ಸ್ಥಳ ಹಾಗೂ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳ ಸಮ್ಮುಖದಲ್ಲಿ ಮಹಜರು ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವಿಕೋಪಕ್ಕೆ ತಿರುಗಿದ ಜಗಳ: ಹಳೆದ್ವೇಷದ ಹಿನ್ನೆಲೆಯಲ್ಲಿ ಅರುಣ ಹಾಗೂ ದೊಡ್ಡಯ್ಯ, ದೇವರಾಜು ಎಂಬವರ ನಡುವೆ ಕಳೆದ ಭಾನುವಾರ ಸಂಜೆ ಗ್ರಾಮದಲ್ಲಿ ಜಗಳ ನಡೆದಿತ್ತು. ಜಗಳ ವಿಕೋಪಕ್ಕೆ ತಿರುಗಿದ ಕಾರಣ ಅರುಣನ ಮುಖ ಮತ್ತು ಇತರ ಕಡೆಗಳಿಗೆ ದೇವರಾಜು ಮತ್ತು ದೊಡ್ಡಯ್ಯ ಹಲ್ಲೆ ನಡೆಸಿದ್ದರು. ಹಲ್ಲೆಯಿಂದಾಗಿ ಅರುಣನ ಮುಖದಲ್ಲಿ ಗಾಯಗಳಾಗಿದ್ದವು. ಮೂಗಿನಿಂದ ರಕ್ತ ಸೋರುತ್ತಿತ್ತು. ನಂತರ ಆತ ಕೆ.ಎಂ.ದೊಡ್ಡಿ ಆಸ್ಪತ್ರೆಗೆ ಬೈಕ್‌ನಲ್ಲಿ ಹೋಗುತ್ತಿದ್ದವನನ್ನು ಹಿಂಬಾಲಿಸಿದ ೭ ಮಂದಿಯೂ ಎತ್ತಿನ ಗಾಡಿಯ ಚಕ್ರಕ್ಕೆ ಸಿಲುಕಿಸುವ ಕೊಂಡಿಯಿಂದ ಅರುಣನ ಮೇಲೆ ಹಲ್ಲೆ ನಡೆಸಿದ್ದರು.
ತೀವ್ರವಾಗಿ ಗಾಯಗೊಂಡು ಅಸ್ವಸ್ಥನಾಗಿ ಕುಸಿದುಬಿದ್ದಿದ್ದ. ತಕ್ಷಣ ಸಾರ್ವಜನಿಕರು ಈತನನ್ನು ಭಾರತೀಗರದ ಜಿ. ವಾದೇಗೌಡ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅರುಣ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.





