Mysore
23
mist

Social Media

ಶನಿವಾರ, 10 ಜನವರಿ 2026
Light
Dark

ಯಳಂದೂರು: ಪೊಲೀಸ್ ಜೀಪ್‌ನಿಂದ ಹಾರಿ ವ್ಯಕ್ತಿ ಸಾವು

ಕೊಲೆ ಎಂದು ಆರೋಪಿಸಿ ಪೋಷಕರು, ಗ್ರಾಮಸ್ಥರಿಂದ ಪೊಲೀಸ್ ಠಾಣೆಗೆ ಮುತ್ತಿಗೆ

ಯಳಂದೂರು: ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಜೀಪ್‌ನಲ್ಲಿ ಕರೆದೊಯ್ಯತ್ತಿದ್ದಾಗ ಹಾರಿ ಸಾವನಪ್ಪಿರುವ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದ್ದು ಇದು ಸಾವಲ್ಲ, ಕೊಲೆ ಎಂದು ಈತನ ಪೋಷಕರು ಆರೋಪಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಜರುಗಿದೆ.

ಕುಂತೂರು ಮೋಳೆ ಗ್ರಾಮದ ನಿಂಗರಾಜು(೨೪) ಮೃತಪಟ್ಟ ವ್ಯಕ್ತಿ.
ಸಮೀಪದ ಕುಂತೂರು ಮೋಳೆ ಗ್ರಾಮದ ಉಪ್ಪಾರ ಬಡಾವಣೆಯ ನಂಜುಂಡಶೆಟ್ಟಿ ಎಂಬವರ ಮಗ ನಿಂಗರಾಜು ಇದೇ ಗ್ರಾಮದ ಇದೇ ಸಮುದಾಯದ ಯುವತಿಯನ್ನು ಪ್ರೀತಿಸುತ್ತಿದ್ದರು. ನ.೨೩ ರಿಂದ ಇವರು ಗ್ರಾಮದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ತಾಲ್ಲೂಕಿನ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ನಿಂಗರಾಜು ಎಂಬಾತನೇ ನನ್ನ ಮಗಳನ್ನು ಕರೆದೊಯ್ದಿದ್ದಾನೆ ಎಂದು ಅನುಮಾನವಿದೆ ಎಂದು ಯುವತಿಯ ತಂದೆ ಮಾದೇಶ್ ದೂರು ನೀಡಿದ್ದರು.
ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ನಿಂಗರಾಜುನನ್ನು ನ.೨೯ ರಂದು ಪತ್ತೆ ಹಚ್ಚಿದ್ದಾರೆ. ನಂತರ ಇವರ ಜೀಪ್‌ನಲ್ಲಿ ಯಳಂದೂರು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಇಲ್ಲಿ ವಿಚಾರಣೆ ನಡೆಸಿ ಮಾಂಬಳ್ಳಿ ಪೊಲೀಸ್ ಠಾಣೆಗೆ ಪೊಲೀಸ್ ಜೀಪ್‌ನಲ್ಲಿ ಕರೆದೊತ್ತುತ್ತಿದ್ದ ವೇಳೆ ಈತ ಯರಿಯೂರು ಗ್ರಾಮದ ಬಳಿ ಜೀಪ್‌ನಿಂದ ನೆಗೆದಿದ್ದು ಈತನ ತಲೆ ಸೇರಿದಂತೆ ದೇಹದ ಇತರ ಭಾಗಗಳಿಗೆ ಪೆಟ್ಟಾಗಿದೆ.

ಕೂಡಲೇ ಪೊಲೀಸರು ಜೀಪ್‌ನಲ್ಲಿ ಯಳಂದೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಇಷ್ಟೊತ್ತಿಗಾಗಲೇ ನಿಂಗರಾಜು ಮೃತಪಟ್ಟಿರುವುದು ದೃಢಪಟ್ಟಿದೆ.

ಪೊಲೀಸ್ ಠಾಣೆಗೆ ಮುತ್ತಿಗೆ: ನಿಂಗರಾಜು ಜೀಪ್‌ನಿಂದ ಹಾರಿ ಮೃತಪಟ್ಟಿಲ್ಲ. ಈತನಿಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಕರೆತಂದು ಹಿಗ್ಗಾಮಗ್ಗ ಥಳಿಸಲಾಗಿದೆ. ಚಿತ್ರಹಿಂಸೆ ನೀಡಿದ್ದು ಅಲ್ಲೇ ಈತ ಮೃತಪಟ್ಟಿದ್ದಾನೆ. ನಂತರ ಮಾಂಬಳ್ಳಿ ಪೊಲೀಸ್ ಠಾಣೆಗೆ ಈತನನ್ನು ಜೀಪ್‌ನಲ್ಲಿ ಕುಳ್ಳಿರಿಸಿ ಇವರೇ ಬೇಕೆಂತಲೇ ಜೀಪ್‌ನಿಂದ ತಳ್ಳಿದ್ದಾರೆ ಎಂದು ಗ್ರಾಮಸ್ಥರು ಹಾಗೂ ಉಪ್ಪಾರ ಮುಖಂಡರು ಆರೋಪಿಸಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.

ವಿಚಾರಣೆ ವೇಳೆಯಲ್ಲಿ ಒಬ್ಬ ವ್ಯಕ್ತಿಯ ಪ್ರಾಣ ಹೋಗಿರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡುವಂತಿದೆ. ಇದರ ಬಗ್ಗೆ ತನಿಖೆಯಾಗಬೇಕು. ಈ ಸಾವು ಹಲವು ಅನುಮಾನಗಳಿಗೆ ಆಸ್ಪದ ನೀಡುವಂತಿದೆ. ಹಾಗಾಗಿ ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು, ಪರಿಹಾರ ನಿಡಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಈ ಬಗ್ಗೆ ತನಿಖೆ ನಡೆಸಿ, ಪೊಲೀಸರಿಂದ ತಪ್ಪಾಗಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ವಹಿಸುವ ಭರವಸೆ ನೀಡಿದರು.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!