ಚಾಮರಾಜನಗರ: ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಟಿಪ್ಪು ಸುಲ್ತಾನ್ ಅವರು ಹಿಂದೂ ವಿರೋಧಿ ಹಾಗೂ ಧರ್ವಾಂಧ ಆಗಿರಲಿಲ್ಲ ಎಂದು ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ಗಾಳಿಪುರ ಬಡಾವಣೆಯಲ್ಲಿ ಟಿಪ್ಪು ವೆಲ್‌ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಹಜರತ್ ಟಿಪ್ಪು ಸುಲ್ತಾನ್ ಅವರ ಸ್ಮರಣೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಟಿಪ್ಪು ಹಿಂದೂ ವಿರೋಧಿಯಾಗಿದ್ದರೆ ದೇವಸ್ಥಾನಗಳಿಗೆ ಕೊಡುಗೆ ನೀಡುತ್ತಿರಲಿಲ್ಲ ಎಂದರು.
ಟಿಪ್ಪು ಸುಲ್ತಾನ್ ಉತ್ತಮ ಆಡಳಿತಗಾರನಾಗಿ ಅನೇಕ ಸುಧಾರಣೆ ಮಾಡಿದ್ದರು. ಹಿಂದೂ, ಮುಸ್ಲಿಂ ಎನ್ನದೆ ಸಮಾನತೆ ಕೊಟ್ಟಿದ್ದಾರೆ. ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಟಿಪ್ಪು ಇತಿಹಾಸವನ್ನು ತಿರುಚುತ್ತಿದ್ದಾರೆ ಎಂದರು.
ಮಾಜಿ ಶಾಸಕ ವಾಟಾಳ್ ನಾಗರಾಜ್ ಮಾತನಾಡಿ, ನಾಡಿಗಾಗಿ ತನ್ನ ಇಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆ ಇಟ್ಟಿದ್ದ ಟಿಪ್ಪು ದೇಶ ಕಂಡ ಎತ್ತರದ ವ್ಯಕ್ತಿತ್ವ. ಅವರ ಬಗ್ಗೆ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮಾತನಾಡಿದರು. ಮೈದಾನದಲ್ಲಿ ಟಿಪ್ಪು ಲಾಂಛನವಿರುವ ಬಾವುಟ ಹಾರಿಸಲಾಯಿತು. ಮುಖಂಡರಾದ ಸೈುಂದ್ ರಫಿ, ನಾಯಾಜ್, ಅಸ್ಲಾಂ ಷರೀಫ್, ಜಾಕೀರ್ ಪಾಷ, ಅಕ್ರಂ, ತೇಜವುಲ್ಲಾ ಖಾನ್, ನೂರ್ ವುಲ್ಲಾಖಾನ್, ನವೀದ್ ಖಾನ್ ಇತರರು ಹಾಜರಿದ್ದರು.
ಟಿಪ್ಪು ಹಿಂದೂ ವಿರೋಧಿ ಆಗಿರಲಿಲ್ಲ : ಶಾಸಕ ಪುಟ್ಟರಂಗಶೆಟ್ಟಿ





