Mysore
20
clear sky

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಮೈಸೂರು-ಊಟಿ ರಸ್ತೆ ತಂಗುದಾಣದ ಅವಳಿ ಗೋಪುರ ರಾತ್ರೋರಾತ್ರಿ ಮಾಯ…

ತಂಗುದಾಣ ವಿವಾದಿತ ಕೇಂದ್ರ ಆಗಬಾರದೆಂದು ತೆರವು: ಶಾಸಕ ರಾಮದಾಸ್ ಸ್ಪಷ್ಟನೆ

ಮೈಸೂರು: ಸಾಂಸ್ಕೃತಿಕ ನಗರದಲ್ಲಿ ವಿವಾದದ ಕಿಡಿ ಹೊತ್ತಿಸಿದ್ದ ಊಟಿ ರಸ್ತೆ ಜೆ ಎಸ್ ಎಸ್ ಕಾಲೇಜು ಬಸ್ ನಿಲ್ದಾಣದ ವಿವಾದಿತ ಗೋಪುರ ರಾತ್ರೋರಾತ್ರಿ ತೆರವಾಗಿದೆ.

ಇದು ವಿವಾದಿತ ಕೇಂದ್ರವಾಗಬಾರದು ಅನ್ನೋ ಕಾರಣಕ್ಕೆ ತೆರವುಗೊಳಿಸಲಾಗಿದೆ.

ಎಲ್ಲ 12 ಬಸ್ ನಿಲ್ದಾಣದ ಶೆಲ್ಟರ್ ಇದೇ ಮಾದರಿಯಲ್ಲಿ ನಿರ್ಮಿಸಲಾಗುವುದು ಶಾಸಕ ರಾಮದಾಸ್ ಸ್ಪಷ್ಟನೆ ನೀಡಿದ್ದಾರೆ.

ಅರಮನೆ ಮಾದರಿ ನಿರ್ಮಾಣ ನನ್ನ ಉದ್ದೇಶವಾಗಿತ್ತು. ಅನವಶ್ಯಕವಾಗಿ ಧರ್ಮದ ಲೇಪನ ನೀಡಿದ್ದು ನನಗೆ ನೋವಾಗಿದೆ. ಹಿರಿಯರ ಸಲಹೆಗಾರರ ಜೊತೆ ಚರ್ಚಿಸಿ ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯಾರೂ ಅನ್ಯಥಾ ಭಾವಿಸಬಾರದು ಶಾಸಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಂಗುದಾಣದ ಮಧ್ಯದ ಒಂದು ಗೋಪುರ ಮಾತ್ರ ಉಳಿಸಿಕೊಂಡು ಎರಡು ಗೋಪುರಗಳ ಕುರುಹು ಇಲ್ಲದಂತೆ ಮಾಡಲಾಗಿದೆ. ಗುಂಬಜ್ ಮಾದರಿ ಬಸ್ ತಂಗುದಾಣ ನಿರ್ಮಾಣವಾಗಿದೆ ಎಂಬ ವಿವಾದ ಹೊತ್ತ ಈ ನಿಲ್ದಾಣದ ಮರು ವಿನ್ಯಾಸಕ್ಕೆ ಸಂಸದ ಪ್ರತಾಪ್ ಸಿಂಹ ಪಟ್ಟು ಹಿಡಿದಿದ್ದರು. ಇದು ಗುಂಬಜ್ ಮಾದರಿ ಅಲ್ಲ ಎಂದು ಶಾಸಕ ರಾಮದಾಸ್ ಹಾಗೂ ಪ್ರಗತಿಪರರು ಪ್ರತಾಪ ಸಿಂಹಗೆ ಎದಿರೇಟು ನೀಡಿದ್ದರು. ಗೋಪುರವನ್ನ ತೆರವುಗೊಳಿಸಲು ಅವಕಾಶ ನೀಡುವುದಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಎಚ್ಚರಿಕೆ ನೀಡಿದ್ದರು.

ಈ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಂಗುದಾಣವನ್ನು ಅನುಮತಿ ಇಲ್ಲದೆ ಕಟ್ಟಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆಗೆ ನೋಟೀಸ್ ನೀಡಿತ್ತು.ಇವೆಲ್ಲವುಗಳ ಮಧ್ಯೆ ರಾತ್ರೋ ರಾತ್ರಿ ತಂಗುದಾಣದ ಮೇಲಿದ್ದ ಎರಡು ಗೋಪುರಗಳು ಪುರಾವೆ ಇಲ್ಲದಂತೆ ಮಾಯವಾಗಿದೆ.

ವಿವಾದ ಬೇಡವೆಂದು ಕೆಡವಿದ್ದೇನೆ: ರಾಮದಾಸ್, ನುಡಿದಂತೆ ನಡೆದುಕೊಂಡಿದ್ದೇನೆ: ಪ್ರತಾಪ್ ಟ್ವೀಟ್ .
ಮೈಸೂರು: ಶಾಸಕ ರಾಮದಾಸ್‌ ಮತ್ತು ಸಂಸದ ಪ್ರತಾಪ ಸಿಂಹ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದ್ದ ಊಟಿ ರಸ್ತೆಯ ಜೆಎಸ್ಎಸ್ ಕಾಲೇಜಿನ ಬಳಿ ನಿರ್ಮಿಸಿದ್ದ ತಂಗುದಾಣದ ಮೇಲಿನ ಮೂರು ಗುಂಬಜ್ಗಳಲ್ಲಿ ಎರಡನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ.
ಶಾಸಕ ಎಸ್.ಎ.ರಾಮದಾಸ್ ಈ ವಿಷಯವನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ. ‘ಮೈಸೂರು ಪಾರಂಪರಿಕ ನಗರಿಯಾಗಿದ್ದು, ವಿಶ್ವವಿಖ್ಯಾತ ಮೈಸೂರು ಅರಮನೆಯ ಮಾದರಿಯಲ್ಲಿ ಪಾರಂಪರಿಕ ಬಸ್ ತಂಗುದಾಣ ನಿರ್ಮಾಣ ನನ್ನ ಉದ್ದೇಶವಾಗಿತ್ತು. ಆದರೆ ಅದಕ್ಕೆ ಅನವಶ್ಯಕ ಧರ್ಮದ ಲೇಪನ ನೀಡಿ ಅದನ್ನು ವಿವಾದದ ಸ್ಥಳವಾಗಿ ಪರಿವರ್ತನೆ ಮಾಡುವ ಪ್ರಯತ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಆದ್ದರಿಂದ ಹಿರಿಯರು, ಸಲಹೆಗಾರರ ಜೊತೆಯಲ್ಲಿ ನನ್ನ ಅಳಲು ತೋಡಿಕೊಂಡು ಮುಂದೆ ಎಂದೂ ಇದೊಂದು ವಿವಾದ ಕೇಂದ್ರ ಎಂಬ ಕಪ್ಪು ಚುಕ್ಕೆಯನ್ನು ಕೆಲವರು ಇಡಬಾರದೆಂದು, ನಿಲ್ದಾಣದ ಮೇಲಿನ ಎರಡು ಗುಂಬಜ್ಗಳನ್ನು ತೆಗೆಯಲಾಗಿದೆ. ಮಧ್ಯದ ಗುಂಬಜ್ ಅನ್ನು ಮಾತ್ರವೇ ಯಥಾಸ್ಥಿತಿಯಲ್ಲಿ ಬಿಡಲಾಗಿದೆ. ಮುಂದೆ ಇದೇ ಮಾದರಿಯಲ್ಲಿ ನಿರ್ಮಾಣ ಮಾಡಲು ಒಪ್ಪಿಗೆ ಪಡೆಯಲಾಗಿದೆ. ಇದನ್ನು ಯಾರೂ ಅನ್ಯಥಾ ಭಾವಿಸಬಾರದು’ ಎಂದು ಮಾಹಿತಿ ನೀಡಿದ್ದಾರೆ.

‘ಬಸ್ ನಿಲ್ದಾಣವನ್ನು ಮಸೀದಿಯ ಮಾದರಿಯಲ್ಲಿ ನಿರ್ಮಿಸಲಾಗುತ್ತಿದೆ. ಅದನ್ನು ನಾಲ್ಕು ದಿನಗಳಲ್ಲಿ ತೆರವುಗೊಳಿಸಬೇಕು. ಇಲ್ಲದಿದ್ದರೆ ನಾನೇ ತೆರವುಗೊಳಿಸುತ್ತೇನೆ’ ಎಂದು ಇತ್ತೀಚಿಗೆ ರಂಗಾಯಣದಲ್ಲಿ ನಡೆದಿದ್ದ ‘ಟಿಪ್ಪು ನಿಜಕನಸುಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಿಜೆಪಿಯ ಸಂಸದ ಪ್ರತಾಪ ಸಿಂಹ ಎಚ್ಚರಿಕೆ ನೀಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ಪರ ವಿರೋಧ ಚರ್ಚೆಗಳು ನಡೆದಿದ್ದವು. ಶಾಸಕ- ಸಂಸದರ ನಡುವಿನ ಮುಸುಕಿನ ಗುದ್ದಾಟವೂ ಬಹಿರಂಗಗೊಂಡಿತ್ತು. ಈ ಬಗ್ಗೆ ಶಾಸಕ ರಾಮದಾಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ದೂರು ನೀಡಿದ್ದರು.
ಈ ನಡುವೆ ನಿಲ್ದಾಣವನ್ನು ಅನುಮತಿ ಪಡೆಯದೇ ನಿರ್ಮಿಸಲಾಗಿದ್ದು, ಏಳು ದಿನಗಳ ಒಳಗೆ ತೆರವುಗೊಳಿಸಬೇಕು, ಮೂರು ದಿನಗಳ ಒಳಗೆ ವಿವರಣೆ ನೀಡಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೈಸೂರು ಮಹಾನಗರ ಪಾಲಿಕೆ ಹಾಗೂ ನಿಲ್ದಾಣ ನಿರ್ಮಿಸಿದ ಕೆಆರ್ಐಡಿಎಲ್ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿತ್ತು.


ಈ ನಡುವೆ, ಆರಂಭದಲ್ಲಿ ಬಂಗಾರದ ಬಣ್ಣ ಬಳಿಯಲಾಗಿದ್ದ ಗುಂಬಜ್ಗಳಿಗೆ ನಂತರ ಕಡುಗೆಂಪು ಬಣ್ಣವನ್ನು ಬಳಿಯಲಾಗಿತ್ತು. ಜೆಎಸ್ಎಸ್ ಕಾಲೇಜು ಬಸ್ ನಿಲ್ದಾಣ ಎಂಬ ಫಲಕ ಹಾಕಿ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸುತ್ತೂರು ಶ್ರೀಗಳ ಫೋಟೊ ಹಾಕಲಾಗಿತ್ತು.
‘ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ. ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿ ಹಾಗೂ ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಅವರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ’ ಎಂದು ಸಂಸದ ಪ್ರತಾಪ ಸಿಂಹ ಟ್ವೀಟ್‌ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ