Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಗೋಪಾಲಸ್ವಾಮಿಗೆ ಯಾವತ್ತೂ ಒಂದೇಟು ಹೊಡೆಯುವ ಅಗತ್ಯ ಬಂದಿರಲಿಲ್ಲ…

ಮೈಸೂರು: ಆತ ಎಷ್ಟು ವಿಧೇಯ ಆಗಿದ್ದ ಎಂದರೆ, ಯಾವತ್ತೂ ಒಂದೇಟು ಹೊಡೆಯುವ ಅಗತ್ಯ ಬಂದಿರಲಿಲ್ಲ, ಗದರಿದ ಪ್ರಸಂಗವೂ ಇಲ್ಲ. ಹುಲಿ, ಆನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಆತ ಯಾವತ್ತೂ ಮುಂದಿರುತ್ತಿದ್ದ. ನಾವು ಹೇಳುವುದನ್ನು ಸನ್ನೆ ಮೂಲಕವೇ ಅರ್ಥ ಮಾಡಿಕೊಂಡು ಇತರ ಆನೆಗಳನ್ನು ಜತೆಗೆ ಕರೆದೊಯ್ಯುತ್ತಿದ್ದ ಎಂದು ಕಣ್ಣೀರಾಗುತ್ತಾರೆ ಕಾವಾಡಿ ಮಂಜ.

ಅಭಿಮನ್ಯು ಆನೆಯ ಉತ್ತರಾಧಿಕಾರಿಯಾಗಿ ಮುಂದೊಂದು ದಿನ ದಸರಾ ಮೆರವಣಿಗೆಯಲ್ಲಿ ಅಂಬಾರಿ ಹೊರಬೇಕಿದ್ದ ಗೋಪಾಲಸ್ವಾಮಿ ಆನೆ ಈಗ ನೆನಪು ಮಾತ್ರ. ಕಾಡಾನೆಯೊಂದಿಗಿನ ಕಾದಾಟದಲ್ಲಿ ದಾರುಣ ಸಾವು ಕಂಡ ಈ ಆನೆಯ ಗುಣ ವಿಶೇಷಗಳು ಒಂದೆರಡಲ್ಲ. ಗಾತ್ರದಲ್ಲಿ ದೈತ್ಯನಾದರೂ ತನ್ನ ಸೌಮ್ಯ ಮತ್ತು ಸ್ನೇಹಪೂರ್ಣ ನಡವಳಿಕೆಯಿಂದ ಮಾವುತರು ಕಾವಾಡಿಗರು ಮತ್ತು ಅಧಿಕಾರಿ ವರ್ಗದ ಪ್ರೀತಿಗೆ ಪಾತ್ರವಾಗಿದ್ದ ಆನೆಯಿದು.


ಪುಂಡಾನೆಯ ಜತೆಗಿನ ಕಾದಾಟದಲ್ಲಿ ಗೋಪಾಲಸ್ವಾಮಿಯ ಸಾವಿಗೆ ಈ ಸೌಮ್ಯ ಸ್ವಭಾವವೇ ಕಾರಣವಾಗಿರಬಹುದು ಎನ್ನುವ ಮಾತುಗಳು ಈಗ ಕೇಳಿ ಬರುತ್ತಿವೆ. ಆನೆಯ ಮಾವುತ ಮಂಜು ಮತ್ತು ಕಾವಾಡಿ ಮಂಜ ಗೋಪಾಲಸ್ವಾಮಿಯ ಸಾವಿನ ದು:ಖದಿಂದ ಇನ್ನೂ ಹೊರಗೆ ಬಂದಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮಾವುತ ಮಂಜು ಅಂಬಾರಿ ಆನೆಯಾಗಿ ಗೋಪಾಲಸ್ವಾಮಿಯನ್ನು ಮುನ್ನಡೆಸಬೇಕಿತ್ತು.
“ ಆತ ಒಂದು ಆನೆ ಮಾತ್ರವಲ್ಲ, ನಮ್ಮ ಮನೆಯ ಸದಸ್ಯನಂತೆ ಇದ್ದ. ನಮ್ಮ ಜತೆ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದ. ವಾಲಿಬಾಲ್‌ ಆಟವಾಡುತ್ತಿದ್ದ. ಮಕ್ಕಳ ಜತೆ ತುಂಟಾಟವಾಡುತ್ತಿದ್ದʼʼ ಎಂದು ಗೋಪಾಲಸ್ವಾಮಿಯನ್ನು ನೆನಪಿಸಿಕೊಂಡು ಈಗಲೂ ದು:ಖಿಸುತ್ತಾರೆ ಮಾವುತ ಮಂಜು.

ಇತ್ತೀಚೆಗೆ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಗೋಪಾಲಸ್ವಾಮಿಯನ್ನು ಮುಂದಿನ ಅಂಬಾರಿ ಆನೆ ಎಂದೇ ಪರಿಗಣಿಸಿ ವಿಶೇಷ ತರಬೇತಿ ನೀಡಲಾಗಿತ್ತು. ಮೈಸೂರಿನಲ್ಲಿ ದಸರಾ ಪೂರ್ವ ಕವಾಯತಿನಲ್ಲಿ ಗೋಪಾಲಸ್ವಾಮಿಗೆ ಮರದ ಅಂಬಾರಿ ಹೊರಿಸಿ ಕ್ಷಮತೆಯನ್ನು ಪರೀಕ್ಷಿಸಲಾಗಿತ್ತು.

ಶ್ರೀರಂಗಪಟ್ಟಣದ ದಸರಾ ಮಹೋತ್ಸವದಲ್ಲೂ ಈ ಆನೆಯನ್ನು ಬಳಸಿಕೊಳ್ಳಲಾಗಿತ್ತು. ಇದೆಲ್ಲವನ್ನೂ ಯಶಸ್ವಿಯಾಗಿ ಪೂರೈಸಿದ್ದ ಗೋಪಾಲಸ್ವಾಮಿ ಇನ್ನು ಮೂರು ವರ್ಷಗಳಲ್ಲಿ ಅಭಿಮನ್ಯುವಿನ ಉತ್ತರಾಧಿಕಾರಿಯಾಗಿ ಅಂಬಾರಿ ಹೊರಬೇಕಿತ್ತು. ಇದಕ್ಕೆ ಬೇಕಾದ ಎಲ್ಲ ಅರ್ಹತೆಗಳೂ ಗೋಪಾಲಸ್ವಾಮಿಗಿತ್ತು.

ದಸರಾ ಸಂದರ್ಭದಲ್ಲಿ ಅರ್ಜುನ ಬಿಟ್ಟರೆ ಅತಿ ಹೆಚ್ಚು ತೂಕದ ಆನೆಯಾಗಿ ಗುರುತಿಸಿಕೊಂಡಿದ್ದು ಗೋಪಾಲಸ್ವಾಮಿ. ಅಂಬಾರಿ ಆನೆಯಾಗಿದ್ದ ಅಭಿಮನ್ಯು 5000 ಕಿಲೋ ತೂಗಿದರೆ ಬರೋಬ್ಬರಿ 320 ಕಿಲೋ ಹೆಚ್ಚಿಸಿಕೊಂಡಿದ್ದ ಗೋಪಾಲಸ್ವಾಮಿ 5460 ಕಿಲೋ ತೂಕ ದಾಖಲಿಸಿ ಗಮನ ಸೆಳೆದಿದ್ದ.

ಸುಮಾರು ಮೂರು ಮೀಟರ್ ಎತ್ತರವಿದ್ದ ಗೋಪಾಲಸ್ವಾಮಿಗೆ ದಸರಾ ಗಜಪಡೆಯಲ್ಲಿ ಅತಿ ಎತ್ತರದ ಆನೆಯೆಂಬ ಹೆಗ್ಗಳಿಕೆಯೂ ಇತ್ತು. 41 ವರ್ಷದ ಗೋಪಾಲಸ್ವಾಮಿ ಅಂಬಾರಿ ಹೊರುವ ಅವಕಾಶ ಪಡೆದಿದ್ದರೆ ಸತತ 16 ವರ್ಷಗಳ ಕಾಲ ಜಂಬೂಸವಾರಿಗೆ ನಾಯಕನಾಗುವ ಅವಕಾಶವಿತ್ತು. ಆದರೆ ಹುಣಸೂರು ತಾಲ್ಲೂಕಿನ ಮತ್ತಿಗೋಡು ಆನೆ ಶಿಬಿರದಲ್ಲಿದ್ದ ಗೋಪಾಲಸ್ವಾಮಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ಅಕಾಲಿಕ ಸಾವು ಕಂಡಿದ್ದಾನೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ