Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ವಿದ್ಯಾರ್ಥಿನಿಯರು ವಿವೇಕ, ವಿವೇಚನೆ ಮತ್ತು ಪ್ರಜ್ಞೆಯನ್ನು ಮೀರದಂತೆ ಎಚ್ಚರಿಕೆ ವಹಿಸಿ : ಒಡನಾಡಿ ಸೇವಾ ಸಂಸ್ಥೆಯ ಸಂಸ್ಥಾಪಕ ಸ್ಟ್ಯಾನ್ಲಿ

ತರಗತಿ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿ ಪದಾಧಿಕಾರಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸ್ಟ್ಯಾನ್ಲಿ

ಮೈಸೂರು: ವಿದ್ಯಾರ್ಥಿನಿಯರು ವಿವೇಕ, ವಿವೇಚನೆ ಮತ್ತು ಪ್ರಜ್ಞೆಯನ್ನು ಮೀರದಂತೆ ಎಚ್ಚರಿಕೆ ವಹಿಸಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಒಡನಾಡಿ ಸೇವಾ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಸ್ಟ್ಯಾನ್ಲಿ ಕಿವಿಮಾತು ಹೇಳಿದರು.

ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವತಿಯಿಂದ ಕಾಲೇಜಿನ ಕಲಾ ಮಂಟಪದಲ್ಲಿ ಶುಕ್ರವಾರ ಆಯೋಜಿಸಿದ್ದ ತರಗತಿ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿ ಪದಾಧಿಕಾರಿಗಳ ಪ್ರಮಾಣ ವಚನ ಹಾಗೂ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿವೇಕ, ವಿವೇಚನೆ, ಪ್ರಜ್ಞೆ ಹೆಚ್ಚಿರಬೇಕು. ಒಳ್ಳೆಯದು ಯಾವುದು, ಕೆಟ್ಟದು ಯಾವುದು ಎಂಬುದನ್ನು ಗುರುತಿಸುವ ಬುದ್ಧಿ ಇರಬೇಕು. ಆದರೆ, ಕಾಲೇಜಿಗೆ ಬರುವ ವಿದ್ಯಾರ್ಥಿನಿಯರಲ್ಲಿ ಅದು ಕಡಿಮೆ ಕಾಣುತ್ತಿದೆ. ನಮ್ಮ ವಿವೇಕ, ವಿವೇಚನೆ ಮತ್ತು ಪ್ರಜ್ಞೆಯನ್ನು ಮೀರಬಾರದು. ಇದನ್ನು ಮೀರಿ ನಡೆದಾಗ ಅನಾಹುತುಗಳು ಸಂಭವಿಸುತ್ತವೆ ಎಂದು ತಿಳಿಸಿದರು.

ನ್ಯಾಯಬದ್ಧ ಚಳವಳಿಗಳು ಮಕಾಡೆ ಮಲಗಿವೆ: ಸಾಕಷ್ಟು ಪ್ರಮಾಣದಲ್ಲಿ ನಾರಿಶಕ್ತಿ ಇರುವಾಗಲೂ ನ್ಯಾಯಬದ್ಧ ಚಳವಳಿಗಳು ಮಕಾಡೆ ಮಲಗಿವೆ. ಅನೇಕರು ಬೇಡದ ಕಡೆ, ಬೇಡದವರ ಕಡೆ ಗುರುತಿಸಿಕೊಳ್ಳುತ್ತಿದ್ದಾರೆ. ಈ ಸಮಾಜಕ್ಕೆ ಏನಾಗಿದೆ?, ದಿನನಿತ್ಯ ಹೆಣ್ಣಿನ ಮೇಲೆ ದೌರ್ಜನ್ಯವಾಗುತ್ತಿರುವ ವರದಿಗಳನ್ನು ನೋಡುತ್ತಿದ್ದರೂ ಪ್ರಬಲವಾದ ಉತ್ತರ ಬರುತ್ತಿಲ್ಲ ಎಂಬುದು ಬೇಸರವಾಗುತ್ತದೆ. ಮಾನವ ಕಳ್ಳಸಾಗಣೆ, ಸಾಮಾಜಿಕ ಶೋಷಣೆಗಳನ್ನು ನಮ್ಮದಲ್ಲ ಎಂದು ಉದಾಸೀನ ಮಾಡಬಾರದು. ಸಮಾಜಮುಖಿಯಾಗಿ ಸ್ಪಂದನೆ ಇರಲಿ ಎಂದು ಸಲಹೆ ನೀಡಿದರು.

ನಾವು ಸುಮಾರು ೧೩ ಸಾವಿರ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಿದ್ದೇವೆ. ಸಂಬಂಧಗಳಿಗಿಂತ ಬದುಕು ದೊಡ್ಡದು. ಹಾಗಾಗಿ, ಬದುಕನ್ನು ಚಂದವಾಗಿ ಇಟ್ಟುಕೊಂಡರೆ ಸಂಬಂಧಗಳು ಇರುತ್ತವೆ. ಹಾಗಾಗಿ, ಯಾರ ಮುಂದೆಯೂ ನ್ಯಾಯಕ್ಕಾಗಿ ಅಂಗಲಾಚುವ ಸ್ಥಿತಿ ತಂದುಕೊಳ್ಳದೆ, ಒಳ್ಳೆಯ ಜಾಗಗಳಲ್ಲಿ, ಸ್ಥಾನಗಳಲ್ಲಿ ನಿಮ್ಮನ್ನು ಕಾಣಲು ಬಯಸುತ್ತೇನೆ. ನಿಮ್ಮ ನಡೆ ಮತ್ತು ನುಡಿಗಳ ಮೇಲೆ ಎಚ್ಚರವಿರಲಿ, ಹತೋಟಿಯಿರಲಿ ಎಂದು ಹೇಳಿದರು.

ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಪರಶು ಮಾತನಾಡಿ, ಸಮಾಜವನ್ನು, ನೊಂದವರನ್ನು ಸಮಾಧಾನದಿಂದ, ಅಂತಃಕರಣದಿಂದ ನೋಡದೆ ಇದ್ದರೆ ಯಾವ ಪದವಿಯನ್ನು ಪಡೆದೂ ಪ್ರಯೋಜನವಿಲ್ಲ. ನಮ್ಮ ವಿಶ್ವವಿದ್ಯಾಲಯದ ಜ್ಞಾನ ಜನರ ನಡುವೆ ಹೋಗಬೇಕು. ಪಾಲಕರು, ಗುರು-ಹಿರಿಯರು ಹೇಳಿಕೊಟ್ಟ ಸಂಸ್ಕಾರದಿಂದ ನಡೆಯಬೇಕು. ಎಂತಹ ಕಠೋರ ಸಮಸ್ಯೆಗಳು ಬಂದರೂ ನಾವು ಮಾನವೀಯತೆಯನ್ನು ಕಲಿಯಬೇಕು, ಅದರಂತೆ ನಡೆಯಬೇಕು. ನೊಂದವರನ್ನು ಕಾರುಣ್ಯದಿಂದ ಕಾಣಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತರಗತಿ ಪ್ರತಿನಿಧಿಗಳಿಂದ ಮತ್ತು ಕಾಲೇಜು ವಿದ್ಯಾರ್ಥಿ ಸಂಸತ್ ಪದಾಧಿಕಾರಿಗಳಿಂದ ಪ್ರಮಾಣ ವಚನ ಸ್ವೀಕಾರ ನಡೆಯಿತು. ಪ್ರಾಂಶುಪಾಲ ಡಾ.ಡಿ.ರವಿ, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಪಿ.ಶಿವಕುಮಾರ್, ಖಜಾಂಚಿ ಡಾ.ದೀಪಾ. ಆರ್.ಹೆಬ್ಬಾರ್, ಅನುಷಾ ಸಂಗಯ್ಯ, ಡಿ.ಎಸ್.ಅಂಬಿಕಾ ಹಾಜರಿದ್ದರು.

ಆಮಿಷವಿತ್ತು: ನಾವು ಸತ್ಯದ ಪರ ಇದ್ದೇವೆ

ಮೈಸೂರು: ಮುರುಘಾ ಶರಣರ ವಿರುದ್ಧದ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸುಮ್ಮನಿರಲು, ಸ್ವಾಮೀಜಿ ಪರವಿರಲು ೩ ಕೋಟಿ ರೂ. ಆಮಿಷವಿತ್ತು. ಆದರೆ, ನಾವು ಸತ್ಯದ ಪರ ಇದ್ದೇವೆ. ಸಂತ್ರಸ್ತ ಬಾಲಕಿಯರ ನೋವು ನಮ್ಮಲ್ಲಿ ಮರುಕ ಹುಟ್ಟಿಸಿತ್ತು. ಹಾಗಾಗಿಯೇ, ಹೋರಾಟಕ್ಕೆ ನಿಂತೆವು ಎಂದು ಪರಶು ತಿಳಿಸಿದರು.

೨೫ ವರ್ಷಗಳಿಂದ ೩ರಿಂದ ೧೬ ವರ್ಷದ ೨೩ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಾರೆ ಸ್ವಾಮೀಜಿ. ಇಂತಹವರ ಪರವಾಗಿ ನಿಂತ ಕೆಲವು ನಾಚಿಕೆ ಇಲ್ಲದ ರಾಜಕೀಯ ನಾಯಕರು ‘ಸ್ವಾಮೀಜಿ ಅವರು ಸುಮ್ಮನಿದ್ದು ಬಿಡ್ರಪ್ಪ’ ಎಂದು ಹೇಳಿದರು. ಆದರೆ, ನಮಗೆ ಮುಖ್ಯವಾಗಿದ್ದು, ನೊಂದ ಮಕ್ಕಳು ಎಂದು ವಿವರಿಸಿದರು.
 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ