ಆಲಿಯಾ ಭಟ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮಗಳ ಆಗಮನದ ಖುಷಿಯಲ್ಲಿದ್ದಾರೆ ಕಪೂರ್ ಕುಟುಂಬ. ಇದೀಗ ಮುದ್ದು ಮಗಳಿಗೆ ಚೆಂದದ ಹೆಸರನ್ನ ಇಟ್ಟಿದ್ದಾರೆ. ರಣ್‌ಬೀರ್ ಮತ್ತು ಆಲಿಯಾ ಮಗಳಿಗೆ ನಾಮಕರಣ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ನವೆಂಬರ್ 6 ರಂದು ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇನ್ನೂ ರಣಬೀರ್ ದಂಪತಿಯ ಮಗಳಿಗೆ ಇಡುವ ಹೆಸರೇನು ಅನ್ನೋದನ್ನ ತಿಳಿದುಕೊಳ್ಳುವ ಕುತೂಹಲವೂ ಅಭಿಮಾನಿಗಳಿಗೆ ಹೆಚ್ಚಾಗಿತ್ತು. ಈಗ ರಣಬೀರ್ ಹಾಗೂ ಆಲಿಯಾ ಮಗಳ ಹೆಸರು ಬಹಿರಂಗಪಡಿಸಲಾಗಿದೆ.
ಮಗಳ ಹೆಸರನ್ನು ಅಲಿಯಾ ಭಟ್ ಇನ್‌ಸ್ಟಾಗ್ರಾಂ ಮೂಲಕ ಬಹಿರಂಗ ಪಡಿಸಿದ್ದಾರೆ. ʻರಾಹಾʼ ಪದದ ಅರ್ಥವನ್ನು ಅಲಿಯಾ ಭಟ್ ವಿವರಿಸಿದ್ದಾರೆ. ರಾಹಾ ಹಲವು ಅರ್ಥಗಳನ್ನು ಹೊಂದಿದೆ. ರಾಹಾ ಎಂದರೆ ದೈವಿಕ ಮಾರ್ಗ ಎಂದರ್ಥ. ಸ್ವಾಹಿಲಿ ಭಾಷೆಯಲ್ಲಿ ಸಂತೋಷ. ಇನ್ನು ಸಂಸ್ಕೃತದಲ್ಲಿ ಕುಲ ಎಂದರ್ಥ.
ಬಂಗಾಳಿ ಭಾಷೆಯಲ್ಲಿ ವಿಶ್ರಾಂತಿ, ಸೌಕರ್ಯ, ಪರಿಹಾರ ಎಂದರ್ಥ, ಅರೆಬಿಕ್ ಭಾಷೆಯಲ್ಲಿ ರಾಹಾ ಎಂದರೆ ಶಾಂತಿ, ಸಂತೋಷ ಹಾಗೂ ಸ್ವಾತಂತ್ರ‍್ಯ ಎಂಬ ಅರ್ಥವಿದೆ. ನಾವು ರಾಹಾಳನ್ನು ಕೈಯಲ್ಲಿ ಹಿಡಿದ ದಿನದಿಂದ ನಾವು ಸಂತೋಷ, ಶಾಂತಿ ಅನುಭವಿಸುತ್ತಿದ್ದೇವೆ. ನಮ್ಮ ಕುಟುಂಬವನ್ನು ಸಂತೋಷವಾಗಿರಿಸಿದ ರಾಹಾಳಿಗೆ ಧನ್ಯವಾದ. ನಮ್ಮ ಜೀವನ ಈಗಷ್ಟೇ ಆರಂಭವಾದಂತಿದೆ ಎಂದು ಅಲಿಯಾ ಭಟ್ ಹೇಳಿದ್ದಾರೆ.