Mysore
19
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಜಗತ್ತಿನ ಜನಸಂಖ್ಯೆ ಎಂಟು ನೂರು ಕೋಟಿ

ಆಫ್ರಿಕಾ ದೇಶಗಳಲ್ಲಿ ಜನಸಂಖ್ಯಾ ವೇಗ ಮುಂದುವರೆಯಲಿದ್ದು, ಭಾರತ, ಚೀನಾ ಸೇರಿದಂತೆ ಉಳಿದೆಲ್ಲ ದೇಶಗಳಲ್ಲಿ ಬೆಳವಣಿಗೆಯ ಗತಿ ಕಡಿಮೆಯಾಗಲಿದೆ!
ಪ್ರೊ.ಆರ್.ಎಂ.ಚಿಂತಾಮಣಿ

ಒಂದು ದೇಶದಲ್ಲಿ ದುಡಿಯುವ ವಯಸ್ಸಿನವರ (೧೮ರಿಂದ ೬೫ ವರ್ಷ), ಅದರಲ್ಲೂ ೫೦ ವರ್ಷ ವಯಸ್ಸಿನ ಒಳಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ಅದಕ್ಕೆ ತರುಣ ವಯಸ್ಸಿನ ಅನುಕೂಲ ಎಂದು ಕರೆಯುತ್ತಾರೆ. ಇಂಥವರೆಲ್ಲರ ಕೈಗಳಿಗೆ ಸೂಕ್ತವಾದ ಕೆಲಸಗಳನ್ನು ಒದಗಿಸಿದರೆ ಆ ಅವಧಿಯಲ್ಲಿ ಆದೇಶದ ಸಂಪತ್ತಿನ ನಿರ್ಮಾಣ ಹೆಚ್ಚುತ್ತದೆ ಮತ್ತು ಸಂಪನ್ಮೂಲಗಳ ಉಪಯೋಗ ಆಗುತ್ತದೆ ಎಂದು ಅರ್ಥ. ಇದಕ್ಕೆ ಒಂದು ಮಾನದಂಡ ‘ಮಧ್ಯಮ ವಯಸ್ಸು’. ಅಂದರೆ ಈ ವಯಸ್ಸಿನ ಕೆಳಗೆ ಮತ್ತು ಮೇಲೆ ಸಮನಾಗಿ ಜನಸಂಖ್ಯೆ ಇರುತದೆ. ಈ ಮೀಡಿಯನ್ ವಯಸ್ಸು ೩೦ ವರ್ಷಕ್ಕಿಂತ ಕಡಿಮೆ ಇದ್ದರೆ ದುಡಿಯುವ ವಯಸ್ಸಿನವರು ಹೆಚ್ಚಾಗಿದ್ದು ಅವಲಂಬಿ ಜನರ ಸಂಖ್ಯೆ ಕಡಿಮೆ ಇರುತ್ತದೆ.

ವಿಶ್ವಸಂಸ್ಥೆಯ ಜನಸಂಖ್ಯಾ ವಿಶ್ಲೇಷಣೆ ನಿಧಿಯ (United Nation Population Fund & UNFPA ) ಲೆಕ್ಕಾಚಾರದ ಪ್ರಕಾರ ೧೮೦೪ರಲ್ಲಿ ೧೦೦ ಕೋಟಿ ಜನರಿದ್ದರು- ಈ ಸಂಖ್ಯೆ ೨೦೦ ಕೋಟಿ ತಲುಪಲು ೧೨೬ ವರ್ಷಗಳೇ (೧೯೩೦) ಬೇಕಾದವು. ನಂತರ ಕೇವಲ ೩೦ ವರ್ಷಗಳಲ್ಲಿ (೧೯೬೦) ೩೦೦ ಕೋಟಿಯಾಯಿತು. ಮುಂದೆ ೪೦೦ ಕೋಟಿ ಮತ್ತು ೫೦೦ ಕೋಟಿ ಹಂತಕ್ಕೇರಲು ಅನುಕ್ರಮವಾಗಿ ೧೪ ವರ್ಷ (೧೯೭೪) ಮತ್ತು ೧೩ ವರ್ಷ (೧೯೮೭) ಮಾತ್ರ ಬೇಕಾಯಿತು. ೧೯೩೦ರಿಂದ ನೂರು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿಯೇ ಜನಸಂಖ್ಯೆ ನಾಲ್ಕುಪಟ್ಟು ಆಗಿರುತ್ತದೆ. ವರದಿಯ ಪ್ರಕಾರ ಇದೇ ನವೆಂಬರ್ ೧೫ರಿಂದ ಈ ಭೂಮಿಯ ಮೇಲೆ ೮೦೦ ಕೋಟಿ ಜನರು ವಾಸಿಸುತ್ತಿದ್ದಾರೆ.
ಭಾರತದ ಕಾಣಿಕೆ ಈ ಎಂಟನೇ ೧೦೦ ಕೋಟಿಗೆ ೧೭.೭ ಕೋಟಿ ಎಂದು ಹೇಳಲಾಗಿದೆ.

೧೯೫೦ರ ದಶಕದವರೆಗಿನ ಭಾರತದ ಜನಸಂಖ್ಯಾ ಬೆಳವಣಿಗೆಯ ಗತಿಯನ್ನು ಗಮನಿಸಿದರೆ ಇನ್ನೂ ಹೆಚ್ಚಾಗಬಹುದಿತ್ತೇನೊ? ಆದರೆ ಸ್ವಾತಂತ್ರ್ಯಾನಂತರ ಜಾರಿಗೆ ತಂದ ಜನ ಕಲ್ಯಾಣ ಯೋಜನೆಗಳ ಮಾಹಿತಿ ವಿಸ್ತರಣೆ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಕುಟುಂಬ ಕಲ್ಯಾಣ ಯೋಜನೆಗಳಿಂದಾಗಿ ಭಾರತದ ಜನಸಂಖ್ಯೆ ಸ್ಥಿರಗೊಳ್ಳುತ್ತಿರುವಂತೆ ಕಾಣುತ್ತಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಸದ್ಯದ ಹೆಚ್ಚಳದಲ್ಲಿ ಭಾರತದ್ದೇ ಅತಿ ದೊಡ್ಡ ಸಂಖ್ಯೆ ಎಂದೂ ದಾಖಲಾಗಿದೆ.

ಇನ್ನು ಚೀನಾದ ವಿಷಯಕ್ಕೆ ಬಂದರೆ ಅದು ೭.೩ ಕೋಟಿ ಜನರನ್ನು ಮಾತ್ರ ಸೇರಿಸಿದೆ. ಅಲ್ಲಿಯ ಕಟ್ಟುನಿಟ್ಟಿನ ಜನಸಂಖ್ಯಾ ನಿಯಂತ್ರಣ ನೀತಿಯಿಂದ ಇದು ಸಾಧ್ಯವಾಗಿದೆ ಎಂದು ವರದಿ ಹೇಳುತ್ತದೆ.

ಈಗ ಚೀನಾದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವುದಾದರೂ ಮುಂಬರುವ ದಿನಗಳಲ್ಲಿ ಅಲ್ಲಿಯ ಜನಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಚೀನಾದಲ್ಲಿ ಈವರೆಗೆ ಜಾರಿಯಲ್ಲಿ ಇದ್ದ ‘ಒಂದು ಜೋಡಿಗೆ ಒಂದೇ ಮಗು’ ನೀತಿಯನ್ನು ಇತ್ತೀಚೆಗೆ ಸಡಿಲಿಸಿ ಹೆಚ್ಚು ಮಕ್ಕಳನ್ನು ಪಡೆಯಬಹುದು ಎಂದು ಸರ್ಕಾರ ಹೇಳಿದ್ದರೂ ಜನರಲ್ಲಿ ಇದರ ಬಗ್ಗೆ ಕಡಿಮೆ ಎಂಬುದಾಗಿ ವರದಿಯಾಗಿದೆ.

ಮುನ್ನೋಟ

ಈಗಿನ ಅಂದಾಜುಗಳ ಪ್ರಕಾರ ಆಫ್ರಿಕಾ ಖಂಡದ ಬಹುತೇಕ ದೇಶಗಳಲ್ಲಿ ಮತ್ತು ಏಶಿಯದ ಒಂದೆರಡು ದೇಶಗಳಲ್ಲಿ ಜನಸಂಖ್ಯಾ ಬೆಳವಣಿಗೆಯ ಈವರೆಗಿನ ವೇಗ ಮುಂದುವರಿಯುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಭಾರತ ಮತ್ತು ಚೀನಾ ಸೇರಿದಂತೆ ಉಳಿದೆಲ್ಲ ದೇಶಗಳಲ್ಲಿ ಬೆಳವಣಿಗೆಯ ಗತಿ ಇನ್ನೂ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಚೀನಾದಲ್ಲಿ ಈ ಇಳಿಕೆ ಪ್ರಮಾಣ ಜನಸಂಖ್ಯೆ ಚೀನಾದ ಜನಸಂಖ್ಯೆಗಿಂತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಹಿಂದಿನ ದಶಕಗಳಲ್ಲಿ ಬೆಳೆದ ವೇಗದಲ್ಲಿ ವಿಶ್ವ ಜನಸಂಖ್ಯೆ ಮುಂದಿನ ದಿನಗಳಲ್ಲಿ ಬೆಳೆಯಲಿಕ್ಕಿಲ್ಲ.

ವಿಶ್ವ ಬ್ಯಾಂಕ್ ಅಂದಾಜಿನಂತೆ ಜಗತ್ತಿನ ಜನಸಂಖ್ಯೆ ಬೆಳವಣಿಗೆ ೧೯೬೧ರಲ್ಲಿ ವಾರ್ಷಿಕ ಶೇ.೨.೧೫ ಇದ್ದದ್ದು ನಿಧಾನವಾಗಿ ಕಡಿಮೆಯಾಗುತ್ತ ಬಂದಿದೆ. ೨೦೨೨ರಲ್ಲಿ ಅದು ಶೇ.೦.೯೫ಕ್ಕೆ ಇಳಿದಿದ್ದು ೨೦೫೦ರ ಹೊತ್ತಿಗೆ ಶೇ.೦.೫ಕ್ಕೆ ಇಳಿಯಲಿದೆ ಎಂದು ಅಂದಾಜಿಸಲಾಗಿದೆ. ಇದೇ ಲೆಕ್ಕಾಚಾರದಂತೆ ಆ ವರ್ಷ ಜಗತ್ತಿನಲ್ಲಿ ೯೯೫ ಕೋಟಿ ಜನರಿರಬಹುದು. ಈಗ ಮತ್ತು ೨೦೫೦ರಲ್ಲಿ ಅತಿ ಹೆಚ್ಚು ಜನಸಂಖ್ಯೆ ಇರುವ ಹತ್ತು ದೇಶಗಳ ಸಂಖ್ಯಾಪಟ್ಟಿಯಲ್ಲಿ ಪ್ರತಿ ಶತ ಪ್ರಮಾಣವನ್ನು ಕೊಡಲಾಗಿದೆ.

೨೦೫೦ರಲ್ಲಿ ಭಾರತ ಮತ್ತು ಚೀನಾದ ಸ್ಥಾನಗಳು ಅದಲು- ಬದಲಾಗಿರುತ್ತವೆ. ನೈಜೀರಿಯಾ ಮೂರನೇ ಸ್ಥಾನಕ್ಕೇರಿದರೆ, ಅಮೆರಿಕ ನಾಲ್ಕಕ್ಕಿಳಿಯುತ್ತದೆ. ಇಂಡೋನೇಶಿಯಾ ಆರಕ್ಕಿಳಿಯುತ್ತದೆ.

ಡೆಮೊಗ್ರಫಿಕ್ ಡಿವಿಡೆಂಡ್ ಯಾರಿಗೆ?

ಒಂದು ದೇಶದಲ್ಲಿ ದುಡಿಯುವ ವಯಸ್ಸಿನವರ (೧೮ರಿಂದ ೬೫ ವರ್ಷ), ಅದರಲ್ಲೂ ೫೦ ವರ್ಷ ವಯಸ್ಸಿನ ಒಳಗಿನವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ (ಯಾವುದೇ ಒಂದು ಸಮಯದಲ್ಲಿ) ಅದಕ್ಕೆ ತರುಣ ವಯಸ್ಸಿನ ಅನುಕೂಲ (demographic dividend ) ಎಂದು ಕರೆಯುತ್ತಾರೆ. ಇಂಥವರೆಲ್ಲರ ಕೈಗಳಿಗೆ ಸೂಕ್ತವಾದ ಕೆಲಸಗಳನ್ನು ಒದಗಿಸಿದರೆ ಆ ಅವಧಿಯಲ್ಲಿ ಆದೇಶದ ಸಂಪತ್ತಿನ ನಿರ್ಮಾಣ ಹೆಚ್ಚುತ್ತದೆ ಮತ್ತು ಸಂಪನ್ಮೂಲಗಳ ಉಪಯೋಗ ಆಗುತ್ತದೆ ಎಂದು ಅರ್ಥ. ಇದಕ್ಕೆ ಒಂದು ಮಾನದಂಡ ‘ಮಧ್ಯಮ ವಯಸ್ಸು’ (median age). ಅಂದರೆ ಈ ವಯಸ್ಸಿನ ಕೆಳಗೆ ಮತ್ತು ಮೇಲೆ ಸಮನಾಗಿ ಜನಸಂಖ್ಯೆ ಇರುತದೆ. ಈ ಮೀಡಿಯನ್ ವಯಸ್ಸು ೩೦ ವರ್ಷಕ್ಕಿಂತ ಕಡಿಮೆ ಇದ್ದರೆ ದುಡಿಯುವ ವಯಸ್ಸಿನವರು ಹೆಚ್ಚಾಗಿದ್ದು ಅವಲಂಬಿ ಜನರ ಸಂಖ್ಯೆ (ಮಕ್ಕಳು ಮತ್ತು ವೃದ್ಧರು) ಕಡಿಮೆ ಇರುತ್ತದೆ. ಮೀಡಿಯನ್ ವಯಸ್ಸು ಇದಕ್ಕಿಂತ ಹೆಚ್ಚಾದಂತೆ ದುಡಿಯುವ ವಯಸ್ಸಿವರ ಸಂಖ್ಯೆ ಕಡಿಮೆಯಾಗುತ್ತ ಹೋಗುತ್ತದೆ. ಡೆಮೊಗ್ರಫಿಕ್ ಡಿವಿಡೆಂಡ್ ಕಡಿಮೆಯಾಗುತ್ತ ಹೋಗುತ್ತದೆ.

ವಿಶ್ವ ಬ್ಯಾಂಕಿನ ಅಂದಾಜಿನಂತೆ ೨೦೫೦ರಲ್ಲಿ ಆಫ್ರಿಕಾ ಖಂಡದಲ್ಲಿ ತರುಣರೇ ಹೆಚ್ಚಾಗಿ ಇದ್ದು, ವೃದ್ಧರ ಸಂಖ್ಯೆ ಕಡಿಮೆ ಇರುತ್ತದೆ. ಮುಂದೆ ತರುಣರಾಗಲಿರುವ ಮಕ್ಕಳೂ ಹೆಚ್ಚಾಗಿರುತ್ತಾರೆ. ಏಶಿಯಾ ಖಂಡದಲ್ಲಿ ವೃದ್ಧರೇ ಹೆಚ್ಚಾಗಿ ವಾಸಿಸಲಿದ್ದಾರೆ ಎಂದು ವರದಿ ಹೇಳುತ್ತದೆ. ಯುರೋಪ್ ಮತ್ತು ಇತರ ಶ್ರೀಮಂತ ದೇಶಗಳಲ್ಲಿ ವೃದ್ಧರ ಪ್ರಾಬಲ್ಯ ಮುಂದುವರಿಯುತ್ತದೆ ಎಂದು ಹೇಳಲಾಗುತ್ತದೆ.

ಒಂದು ಮಾತು: ನಮ್ಮ ದೇಶದಲ್ಲಿ ೨೦೨೧ರಲ್ಲೇ ನಡೆಯಬೇಕಾಗಿದ್ದ ಜನಗಣತಿ ಕೋವಿಡ್- ೧೯ ಕಾರಣದಿಂದ ಮುಂದೂಡಲ್ಪಟ್ಟಿದೆ. ಅದಾಗಿದ್ದರೆ ಇಷ್ಟೊತ್ತಿಗೆ ವಿವರವಾದ ಪ್ರಾಥಮಿಕ ಜನಸಂಖ್ಯಾ ಮಾಹಿತಿ ಲಭ್ಯವಾಗುತ್ತಿತ್ತು. ಆದರೂ ೨೦೨೨ರ ನ್ಯಾಶನಲ್ ಹೆಲ್ತ್ ಸ್ಯಾಂಪಲ್ ರಿಜಿಸ್ಟ್ರೇಶನ್ ಸರ್ವೆ ಪ್ರಕಾರ ಈಗ ಇಂದು ‘ಡೆಮೊಗ್ರಫಿಕ್ ಡಿವಿಡೆಂಡ್’ ಅನುಕೂಲದ ಕೊನೆಯ ವರ್ಷಗಳಲ್ಲಿದ್ದೇವೆ. ಇದನ್ನು ಸದುಪಯೋಗಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಮತ್ತು ಕರ್ತವ್ಯ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ