ಕಂದಾಯ ಸಚಿವರ ಭೇಟಿ ಹಿನ್ನೆಲೆಯಲ್ಲಿ ಅಧಿಕಾರಿಗಳ ನಡೆಗೆ ಸ್ಥಳೀಯರ ಆಕ್ರೋಶ
ಮಂಜು ಕೋಟೆ
ಎಚ್.ಡಿ.ಕೋಟೆ: ಕಂದಾಯ ಸಚಿವರ ಗ್ರಾಮ ವಾಸ್ತವ್ಯದಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ತರಾತುರಿುಂಲ್ಲಿ ನಡೆಸುತ್ತಿದ್ದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗಳನ್ನು ತಡೆದ ಗ್ರಾಮಸ್ಥರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ತಾಲ್ಲೂಕಿನ ಗಡಿ ಭಾಗದ ಎನ್.ಬೇಗೂರು ಗ್ರಾಪಂ ವ್ಯಾಪ್ತಿಯ ಕೆಂಚನಹಳ್ಳಿ ಮತ್ತು ಹೊಸಹಳ್ಳಿ ರಸ್ತೆ ತೀವ್ರ ಹದಗೆಟ್ಟು, ಭಾರಿ ಗುಂಡಿಗಳಾಗಿ ನಿರ್ಮಾಣಗೊಂಡು ಕೆರೆಯ ರೀತಿ ನೀರು ಶೇಖರಣೆಯಾಗಿತ್ತು. ಇದರಿಂದ ಸಾರ್ವಜನಿಕರು, ರೈತಾಪಿ ವರ್ಗದವರು ಸಂಚರಿಸಲು ಸಾಧ್ಯವಾಗುತ್ತಿರಲಿಲ್ಲ. ಇತ್ತೀಚೆಗೆ ಹೊಸಹಳ್ಳಿ ಹಾಡಿ ಕರಿಯಪ್ಪ ಎಂಬವರು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಅವರ ಮನೆಗೆ ಭೇಟಿ ಕೊಡಲು ರಸ್ತೆುಂಲ್ಲಿ ಸಂಚರಿಸಿದ್ದ ಅಂದಿನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಮಾಜಿ ಸಚಿವ ಎಂ.ಶಿವಣ್ಣ, ಶಾಸಕ ಅನಿಲ್ ಚಿಕ್ಕವಾದು, ಎಸ್‌ಪಿ ಚೇತನ್ ಮತ್ತಿತರರು ರಸ್ತೆಯಲ್ಲಿ ಸಂಚರಿಸಲು ಹರಸಾಹಸಪಟ್ಟಿದ್ದರು.
ಒಂದೂವರೆ ವರ್ಷದ ಹಿಂದೆ ಶಾಸಕ ಅನಿಲ್ ಚಿಕ್ಕಮಾದು ೬ ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಆದರೆ ಬಾಪೂಜಿ ಕಂಪೆನಿಯ ಗುತ್ತಿಗೆದಾರ ಸ್ವಲ್ಪ ಕಾಮಗಾರಿ ನಡೆಸಿ, ನಂತರ ಹಣ ಬಿಡುಗಡೆಯಾಗಿಲ್ಲ ಎಂದು ಸ್ಥಗಿತಗೊಳಿಸಿದ್ದರು. ಈಗ ಕಂದಾಯ ಸಚಿವ ಅಶೋಕ್ ಅವರು ಇದೇ ಭಾಗದಲ್ಲಿ ಶನಿವಾರ ಮತ್ತು ಭಾನುವಾರ ಗ್ರಾಮ ವಾಸ್ತವ್ಯ ಹೂಡಲಿದ್ದು, ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಹೀಗಾಗಿ ರಾಷ್ಟ್ರೀಯ ಹೆದ್ದಾರಿಯ ನಿಗಮದ ಅಧಿಕಾರಿ ರಾಜೇಂದ್ರ ಕುಮಾರ್‌ರವರು ಭಾರಿ ಗುಂಡಿಗಳನ್ನು ಮುಚ್ಚಲು ನೌಕರರು ಮತ್ತು ಗುತ್ತಿಗೆದಾರರ ಜತೆ ಮುಂದಾಗಿದ್ದನ್ನು ಗಮನಿಸಿದ ಗ್ರಾಮದ ನಿವಾಸಿಗಳು, ಮುಖಂಡರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಹಲವು ವರ್ಷಗಳಿಂದ ಈ ರಸ್ತೆ ಹದಗೆಟ್ಟಿದ್ದರೂ ಸರಿಪಡಿಸದ ನೀವು ಈಗ ಸಚಿವರು ಆಗಮಿಸುತ್ತಿದ್ದಾರೆ ಎಂಬ ಕಾರಣಕ್ಕೆ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದೀರಿ. ನಾವು ನಿತ್ಯ ನರಕಯಾತನೆ ಅನುಭವಿಸುವಂತೆಯೇ ಸಚಿವರೂ ಈ ರಸ್ತೆಯಲ್ಲಿ ಸಂಚರಿಸಿ ಜನರ ಸಮಸ್ಯೆ ಅರಿಯಬೇಕು. ಆದ್ದರಿಂದ ಈ ಕಾಮಗಾರಿ ನಡೆಸಲು ಬಿಡುವುದಿಲ್ಲ. ಸಚಿವರು ಇಲ್ಲಿಂದ ತೆರಳಿದ ನಂತರ ಕಾಮಗಾರಿ ನಡೆಸಿ ಎಂದು ಅಧಿಕಾರಿಗಳನ್ನು ವಾಪಸ್ ಕಳಿಸಿದ್ದಾರೆ
ರಸ್ತೆ ಅಭಿವೃದ್ಧಿಗೆ ಟೆಂಡರ್ ಆಗಿ ವರ್ಷಗಳೇ ಕಳೆದಿವೆ. ಗುತ್ತಿಗೆದಾರ ಕಾಮಗಾರಿ ಪ್ರಾರಂಭಿಸಿ ಅನೇಕ ಕಾರಣಗಳಿಂದ ಸ್ಥಗಿತಗೊಳಿಸಿದ್ದಾರೆ. ಮತ್ತೆ ಕಾಮಗಾರಿ ಪ್ರಾರಂಭಿಸಲು ಮುಂದಾದಾಗ ಗ್ರಾಮಸ್ಥರು ತಡೆದಿರುವುದರಿಂದ ಕೆಲಸ ಸ್ಥಗಿತಗೊಳಿಸಲಾಗಿದೆ. –ರಾಜೇಂದ್ರ ಕುಮಾರ್, ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿ
ಗಡಿ ಭಾಗದಲ್ಲಿರುವ ಜನಸಾಮಾನ್ಯರನ್ನು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮನುಷ್ಯರೆಂದು ಭಾವಿಸಿದ್ದರೆ ಈ ರೀತಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗುತ್ತಿರಲಿಲ್ಲ. ಪ್ರಾಣಿಗಳು ಬದುಕುವ ರೀತಿಯಲ್ಲಿ ಜನರು ಜೀವನ ನಡೆಸುತ್ತಿದ್ದೇವೆ. ಸಚಿವರು ಬರುವಂತಹ ಸಂದರ್ಭದಲ್ಲಿ ಮಾತ್ರ ನಮ್ಮ ಬಗ್ಗೆ ಇವರಿಗೆ ನೆನಪಾಗುತ್ತದೆ. -ಜಯರಾಮ್, ಜಕ್ಕಳ್ಳಿ ಗ್ರಾಮದ ನಿವಾಸಿ.