ವೆಲ್ಲಿಂಗ್ಟನ್ : ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಮಳೆಯಿಂದಾಗಿ ಒಂದೂ ಎಸೆತವೂ ಕಾಣದೇ ರದ್ದಾಗಿದೆ. ಶುಕ್ರವಾರ ನಿರಂತರವಾಗಿ ಸುರಿದ ಮಳೆಯಿಂದಾಗಿ ಮೈದಾನ ಒದ್ದೆಯಾಗಿದ್ದರಿಂದಾಗಿ, ಆಡಲು ಯೋಗ್ಯವಿಲ್ಲ ಎನ್ನುವುದನ್ನು ತೀರ್ಮಾನಿಸಿದ ಮ್ಯಾಚ್ ರೆಫ್ರಿ, ಪಂದ್ಯ ರದ್ದಾಗಿರುವುದಾಗಿ ಘೋಷಿಸಿದ್ದಾರೆ.
ಇದೀಗ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಇನ್ನೆರಡು ಟಿ20 ಪಂದ್ಯಗಳನ್ನು ಆಡಲಿದೆ. ಉಭಯ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಆಸ್ಟ್ರೇಲಿಯಾದಲ್ಲಿ ಇತ್ತೀಚೆಗಷ್ಟೇ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮೀಸ್‌ನಲ್ಲೇ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು. ಇದಾದ ಬಳಿಕ ಉಭಯ ತಂಡಗಳು ಇದೀಗ ಟಿ20 ಸರಣಿಯನ್ನಾಡುತ್ತಿವೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯವಾದ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ವಿಶ್ರಾಂತಿ ಬಯಸಿ ನ್ಯೂಜಿಲೆಂಡ್ ಪ್ರವಾಸದಿಂದ ಹೊರಗುಳಿದಿದ್ದರು. ಹೀಗಾಗಿ ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕರಾಗಿ ನೇಮಕವಾಗಿದ್ದು, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಉಪನಾಯಕರಾಗಿ ನೇಮಕವಾಗಿದ್ದಾರೆ. ಇನ್ನು ರೋಹಿತ್ ಶರ್ಮಾ ಮಾತ್ರವಲ್ಲದೇ ತಾರಾ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಕೆ ಎಲ್ ರಾಹುಲ್ ಹಾಗೂ ರವಿಚಂದ್ರನ್ ಅಶ್ವಿನ್ ಕೂಡಾ ನ್ಯೂಜಿಲೆಂಡ್ ಪ್ರವಾಸದಿಂದ ಹೊರಗುಳಿದಿದ್ದಾರೆ.
ಹಿರಿಯ ಆಟಗಾರರು ವಿಶ್ರಾಂತಿ ಪಡೆದಿದ್ದರಿಂದಾಗಿ ಯುವ ಪ್ರತಿಭೆಗಳಾದ ಶುಭ್‌ಮನ್ ಗಿಲ್, ಉಮ್ರಾನ್ ಮಲಿಕ್, ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ಅವರು ತಮ್ಮ ಪ್ರತಿಭೆ ಅನಾವರಣ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನು ಹಿರಿಯ ಆಟಗಾರರು ಮಾತ್ರವಲ್ಲದೇ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಸಂಪೂರ್ಣ ಕೋಚಿಂಗ್ ಸಿಬ್ಬಂದಿಗೂ ಕೂಡಾ ವಿಶ್ರಾಂತಿ ನೀಡಲಾಗಿದೆ.
The first T20I in Wellington has been abandoned without a ball being bowled ⛈️
Watch the remainder of the #NZvIND series LIVE on https://t.co/MHHfZPyHf9 (in select regions) 📺 pic.twitter.com/WfUpaHS4an
— ICC (@ICC) November 18, 2022