Mysore
21
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಅನಿವಾರ್ಯ

 ‘ಆಂದೋಲನ’ ನಡೆಸಿದ ವಿಶೇಷ ಅಭಿಯಾನದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರ ಅಭಿಮತ

ಮೈಸೂರು: ಮೈಸೂರನ್ನು ಆಳಿದ ಯದುವಂಶದ ಅರಸರ ಕಾಲದಲ್ಲಿ ನಿರ್ಮಾಣಗೊಂಡಿರುವ ಪಾರಂಪರಿಕ ಕಟ್ಟಡಗಳನ್ನು ನಿರ್ವಹಣೆ ಮಾಡದಿರುವ ಕಾರಣ ಕೆಲವು ಕಟ್ಟಡಗಳು ಕುಸಿದು ಬಿದ್ದಿದ್ದರೆ, ಹಲವಾರು ಕಟ್ಟಡಗಳು ನೆಲಕ್ಕುರುಳುವ ಮುನ್ಸೂಚನೆ ಇರುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸಬೇಕೆಂಬ ಕೂಗು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಕುರಿತು ‘ಆಂದೋಲನ’ ದಿನಪತ್ರಿಕೆ ನಡೆಸಿದ ವಿಶೇಷ ಅಭಿಯಾನದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು

ಮೈಸೂರು ನಗರದಲ್ಲಿ ೧೩೧ ಪಾರಂಪರಿಕ ಕಟ್ಟಡಗಳಿದ್ದು, ೪೦ ಕಟ್ಟಡಗಳನ್ನು ಸರ್ವೇ ಮಾಡಿ ಸ್ಥಿತಿಗತಿಯ ಅವಲೋಕನ ಮಾಡಿ ವರದಿ ತಯಾರಿಸಲಾಗಿದೆ. ಉಳಿದ ಕಟ್ಟಡಗಳ ಸರ್ವೇ ನಡೆಸಿದ ಮೇಲೆ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಲಾಗುವುದು. ತಕ್ಷಣವೇ ದುರಸ್ತಿ ಮಾಡಬೇಕಾದ ಕಟ್ಟಡಗಳು, ಪುನರ್ ನವೀಕರಣ ಮಾಡಬೇಕಾದ ಕಟ್ಟಡಗಳು ಮತ್ತು ಹೆಚ್ಚು ದುಸ್ಥಿತಿಯಲ್ಲಿರುವ ಕಟ್ಟಡಗಳ ಸಂರಕ್ಷಣೆ ಕುರಿತು ನಿರ್ಧರಿಸಲಾಗುವುದು. ಕೆಲವು ಕಟ್ಟಡಗಳನ್ನು ಪಾರಂಪರಿಕ ಶೈಲಿಯಲ್ಲಿ ದುರಸ್ತಿ ಮಾಡಿರುವ ಕಾರಣ ಉಳಿದವುಗಳನ್ನು ಹಾಗೆಯೇ ದುರಸ್ತಿಗೊಳಿಸಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಸಮಗ್ರ ವರದಿ ನೀಡಲಾಗುವುದು. -ಎ.ದೇವರಾಜು, ಆಯುಕ್ತರು, ಪುರಾತತ್ವ ವಸ್ತು ಸಂಗ್ರಹಾಲಯ ಹಾಗೂ ಪರಂಪರೆ ಇಲಾಖೆ.

ವಿಶೇಷ ಅನುದಾನಕ್ಕೆ ಮನವಿ ಮಾಡಿದ್ದೇನೆ

ನಗರದ ದೇವರಾಜ ಮಾರುಕಟ್ಟೆ, ಲ್ಯಾನ್ಸ್‌ಡೌನ್ ಕಟ್ಟಡ ಸೇರಿದಂತೆ ಹಲವಾರು ಕಟ್ಟಡಗಳು ದುಸ್ಥಿತಿಯಲ್ಲಿರುವ ಕಾರಣ ಅವುಗಳ ದುರಸ್ತಿಗೆ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದೇನೆ. ಲ್ಯಾನ್ಸ್‌ಡೌನ್ ಕಟ್ಟಡವನ್ನು ಪುನರ್ ನಿರ್ಮಾಣ ಮಾಡಲು ಕೌನ್ಸಿಲ್‌ನಲ್ಲಿ ನಿರ್ಣಯವಾಗಿದೆ. ಪುರಾತತ್ವ ಇಲಾಖೆಯು ಕಾಲಕಾಲಕ್ಕೆ ನಿರ್ವಹಣೆ ಮಾಡಿಕೊಂಡು ಬಂದಿದ್ದರೆ ಕಟ್ಟಡಗಳು ಇಷ್ಟೊಂದು ದುಸ್ಥಿತಿಗೆ ತಲುಪುತ್ತಿರಲಿಲ್ಲ. -ಎಲ್.ನಾಗೇಂದ್ರ, ಶಾಸಕರು

ತಜ್ಞರ ವರದಿ ಆಧರಿಸಿ ಮುಂದಿನ ಕ್ರಮ

ಲ್ಯಾನ್ಸ್‌ಡೌನ್ ಹಾಗೂ ದೇವರಾಜ ಮಾರುಕಟ್ಟೆ ಕಟ್ಟಡವನ್ನು ಹೊಸದಾಗಿ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಡಿ ಮಾರುಕಟ್ಟೆ ಹೊರಭಾಗದಲ್ಲಿ ಚೆನ್ನಾಗಿದ್ದು, ಒಳಭಾಗದಲ್ಲಿ ಸ್ವಲ್ಪ ದುರಸ್ತಿಯಾಗಬೇಕಿದೆ. ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಚರ್ಚೆ ಮಾಡಿದ ಮೇಲೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ದೊಡ್ಡ ಗಡಿಯಾರದ ಬಗ್ಗೆ ತಜ್ಞರು ನೀಡಿರುವ ವರದಿಯನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. -ಜಿ.ಲಕ್ಷ್ಮೀಕಾಂತ ರೆಡ್ಡಿ, ಆಯುಕ್ತರು, ಮೈಸೂರು ಮಹಾನಗರಪಾಲಿಕೆ

ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು

ನಗರದ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವ ಜೊತೆಗೆ ಹಲವು ಕಟ್ಟಡಗಳ ದುರಸ್ತಿ ಕುರಿತಂತೆ ಶೀಘ್ರದಲ್ಲೇ ಜನಪ್ರತಿನಿಧಿಗಳ ಸಭೆ ಕರೆದು ಸಮಾಲೋಚಿಸಿದ ನಂತರ ಮುಖ್ಯಮಂತ್ರಿಯವರ ಬಳಿಗೆ ನಿಯೋಗ ಕರೆದೊಯ್ಯಲಾಗುವುದು. ೧೦೦ ಕೋಟಿ ರೂ.ಗಳ ವಿಶೇಷ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಆದ್ಯತೆ ಮೇರೆಗೆ ದುರಸ್ತಿಪಡಿಸಲು ಅನುದಾನ ಬೇಕಿದೆ. -ಶಿವಕುಮಾರ್, ಮಹಾಪೌರರು.


‘ಆಂದೋಲನ’ ಅಭಿಯಾನ ಅರಿವುಂಟು ಮಾಡಿದೆ

ಮೈಸೂರಿನ ರಾಜ ಪ್ರಭುತ್ವ ಮತ್ತು ಮೈಸೂರಿನ ಇತಿಹಾಸವನ್ನು ಸಾರುವ ಸಾಕಷ್ಟು ಕುರುಹುಗಳು ಮೈಸೂರು ನಗರದಲ್ಲಿವೆ. ಅವುಗಳಲ್ಲಿ ಪಾರಂಪರಿಕ ಕಟ್ಟಡಗಳು ಕೇವಲ ಇತಿಹಾಸವನ್ನು ಸಾರುವುದಲ್ಲದೇ, ಮೈಸೂರಿಗೆ ಬಹುಬಗೆಯ ಸೌಂದರ್ಯವನ್ನು ನೀಡಿವೆ. ಇತ್ತೀಚಿನ ದಿನಗಳಲ್ಲಿ ನಾನಾ ಕಾರಣಗಳಿಂದ ಅವುಗಳು ಕುಸಿಯುತ್ತಿರುವುದು ಬೇಸರದ ಸಂಗತಿ. ಈ ಕುರಿತು ‘ಆಂದೋಲನ’ ದಿನಪತ್ರಿಕೆ ಎಲ್ಲರನ್ನು ಎಚ್ಚರಿಸಲು ಸರಣಿ ವರದಿಗಳನ್ನು ಮಾಡಿರುವುದು ಮೈಸೂರಿನ ನಾಗರಿಕರನ್ನು, ಜನಪ್ರತಿನಿಧಿಗಳನ್ನು ಮತ್ತು ಅಧಿಕಾರಿಗಳಲ್ಲಿ ಅರಿವುಂಟು ಮಾಡಿದೆ. – ಸಚಿನ್, ವಿಜಯನಗರ, ಮೈಸೂರು


ಮುಂದಿನ ತಲೆಮಾರಿಗಾಗಿ ಸಂರಕ್ಷಣೆ ಅಗತ್ಯ

ಪಾರಂಪರಿಕ ಕಟ್ಟಡಗಳು ಮೈಸೂರಿನ ಐತಿಹಾಸಿಕ ಆಸ್ತಿಗಳಾಗಿವೆ. ಮುಂದಿನ ತಲೆಮಾರು ಅವುಗಳನ್ನು ಕಾಣುವ ಮತ್ತು ಅವುಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ. ಕಟ್ಟಡಗಳ ಮೂಲ ರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ವ್ಯವಸ್ಥಿತವಾಗಿ, ಗುಣಮಟ್ಟಕ್ಕೆ ಆದ್ಯತೆ ನೀಡಿ ಅವುಗಳ ದುರಸ್ತಿ ಯಾಗಬೇಕು. -ಮಯೂರಿ, ಕೆ.ಆರ್.ಮೊಹಲ್ಲಾ, ಮೈಸೂರು

ಪಾರಂಪರಿಕ ಕಟ್ಟಡ ಕಾಪಾಡುವುದು ಎಲ್ಲರ ಹೊಣೆ

ಮೈಸೂರಿನ ಪಾರಂಪರಿಕ ಕಟ್ಟಡಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ. ಮೈಸೂರು ಇತಿಹಾಸ ತಿಳಿಸುವ ಕಟ್ಟಡಗಳನ್ನು ಉಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರ ದುರಸ್ತಿ ವಾಡಲು ಶೀಘ್ರ ಮುಂದಾಗಬೇಕು. -ಅಮೃತ, ಸಹ ಪ್ರಾಧ್ಯಾಪಕಿ, ಮೈಸೂರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ