Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವಾರೆ ನೋಟ : ಶೂನ್ಯಪಥದಲ್ಲಿ ಪಟೇಲ್ರು- ಗೌಡ್ರು ಖಾಸ್‌ಬಾತ್!

ವಾರೆ ನೋಟ

ವಾಯುವಿಹಾರ ಹೊರಟಿದ್ದ ಗೌಡ್ರನ್ನು ಪಟೇಲ್ರು ಎದುರಾದರು. ‘ನಮಸ್ಕಾರ ಗೌಡ್ರೆ, ಹೇಗದ್ದೀರಿ? ಎಲ್ಲಾ ಸುಭಿಕ್ಷವೇ?’ ಎಂದು ಕೇಳಿದರು.
‘ನಮಸ್ಕಾರ ಪಟೇಲ್ರೆ, ಏನ್ ಹೇಳೋದು? ಸುಭಿಕ್ಷವಾಗಿದೆ ಅಂತಾ ಅಂದ್ಕೊಂಡರೆ ಸುಭಿಕ್ಷಾನೇ.. ಇಲ್ಲಾ ಅಂದರೆ ಇಲ್ಲ..’ ಎಂದರು.

‘ಯಾಕೆ ಗೌಡ್ರೆ ಮನ್ಸಿಗೆ ಶಾನೆ ಬೇಜಾರ್ ಮಾಡ್ಕೊಂಡಿದ್ದೀರಿ? ನೀವು ಖುಷಿ ಪಡೋ ಸಮಯ ಇದು.. ಎಲ್ಲಿ ನೋಡಿದ್ರೂ ನಿಮ್ಮದೇ ಹವಾ? ಇಂಟರ್‌ನೆಟ್ಟಿನಲ್ಲೂ ನಿಮ್ಮದೇ ಟ್ರೆಂಡು, ನೀವೊಂಥರಾ ಟ್ರೆಡ್ ಸೆಟ್ಟರ್ ಕಣ್ರಪಾ.. ಟಎಂದರು ಪಟೇಲ್ರು.

‘ನೋಡಿ ಪಟೇಲ್ರೇ.. ಮಾಡಿದ್ ಕೆಲ್ಸದಿಂದ ಜನರಿಗೆ ಒಳ್ಳೆದಾಗಿ ಅದ್ರಿಂದ ಟ್ರೆಂಡ್ ಸೆಟ್ಟಾದ್ರೆ ಅದುನ್ನಾ ಬೇಕಾದ್ರೆ ಟ್ರೆಂಡ್ ಸೆಟ್ಟರ್ ಅನ್ನಬಹುದು. ಟ್ರೆಂಡ್ ಸೆಟ್ ಮಾಡಕೋಸ್ಕರಾನೆ ಕೆಲ್ಸ ಮಾಡಿ ಅದರಿಂದ ಟ್ರೆಂಡ್ ಆದ್ರೆ ಅದುನ್ನು ಟ್ರೆಂಡ್ ಸೆಟ್ಟರ್ ಅನ್ನಕಾಗೊಲ್ಲ .. ಅದು ಬರೀ ಸೆಟ್ಟಿಂಗ್ ಆಗುತ್ತೆ’ ಅಂದರು ಗೌಡ್ರು.

‘ಗೌಡ್ರೆ ನೀವು ತುಂಬಾ ಸೀರಿಯಸ್ಸಾಗಿ ಮಾತಾಡ್ತಾ ಇರೋದಕ್ಕೆ ಕಾರಣವಾದ್ರೂ ಏನು? ಪಟೇಲ್ರು ಕೇಳಿದ್ರು.

‘ನೀವೇ ಹೇಳಿದ್ರಲ್ಲಾ ಪಟೇಲ್ರೆ.. ಟ್ರೆಂಡ್ ಸೆಟ್ಟರ್ ನೀವು ಅಂತಾ.. ಇವತ್ತುಂದಿನಾ ನಾನು ಟ್ರೆಂಡ್ ಸೆಟ್ಟರ್ ಅಲ್ಲ.. ನನ್ನುನ್ನ ಟ್ರೆಂಡ್ ಸೆಟ್ಟರ್ ಮಾಡಿ ಯಾರೋ ಬೇರೇನೋ ಸೆಟ್ ಮಾಡ್ಕೊತಾ ಇದಾರೆ ಅಂತಾ ನಂಗೆ ಡೌಟು ಇದೆ. ನಮ್ಮೊಂತೋರೆಲ್ಲ ಇಲ್ಲೆಲ್ಲಾ ಕುಳಿತು ಬೇರೆಯವರ ಬಗ್ಗೆ ಡೌಟು ಪಡೋದು ಸರಿಯಲ್ಲ ಅಂತಾನೂ ಗೊತ್ತು. ಆದರೆ, ನಮ್ಮ ಉದ್ದೇಶ ಆಶಯಗಳನ್ನು ದುರುದ್ದೇಶ ಮತ್ತು ದುಸ್ಸಾಶಯಕ್ಕೆ ಬಳಸಿಕೊಳ್ತಾ ಇರೋದನ್ನಾ ನೋಡ್ಕೊಂಡು ಸುಮ್ಮನೆ ಕೂರೋಕು ಆಗಲ್ಲ ಪಟೇಲ್ರೆ..’ ಎಂದರು ಗೌಡ್ರು.
ಇಷ್ಟೊತ್ತು ಸಲೀಸಾಗಿ ಮಾತಾಡ್ತ ಇದ್ರ ಗೌಡ್ರುಗೆ ಪಟೇಲ್ರು ಬಗ್ಗೆ ಒಂದು ಡೌಟು ಬಂತು.

‘ಅಲ್ಲ ಪಟೇಲ್ರೆ ನಾನು ದಿನಾ ಇದೇ ರೂಟಲ್ಲಿ ವಾಕ್ ಮಾಡ್ತಾ ಇದ್ದೆ. ಆದ್ರೆ ಒಂದಿನಾನೂ ನೀವು ನಂಗೆ ಮಾತಾಡ್ಸಿರಲಿಲ್ಲ. ಇವತ್ತುಂದಿನಾ ನೀವು ನನ್ನ ಹಿತೈಷಿಗಳಂತೆ ಮಾತಾಡ್ತಾ ಇದ್ದೀರಾ ನಂಗಂತೂ ಆಶ್ಚರ್ಯ ಆಗ್ತಾ ಇದೆ…’

‘ಹೌದು ಗೌಡ್ರೆ.. ಇಷ್ಟು ದಿನಾ ನಿಮ್ಮುನ್ನಾ ನೋಡ್ತಾ ಇದ್ದೆ. ಯಾರಪ್ಪಾ ಇವರು ಧೀರೋದಾತ್ತ ವ್ಯಕ್ತಿತ್ವದ ಗಂಭೀರ ನಡೆಯ ಮನುಷ…್ಯ ಅಂತಾ ಅಂದ್ಕೊತಾ ಇದ್ದೆ. ನಿನ್ನೆ ಗೊತಾಯ್ತು, ನಾವೆಲ್ಲಾ ತುಂಬಾ ಗೌರವ ಇಟ್ಕೊಂಡಿರುವ ಗೌಡ್ರು ನೀವೇಯಾ ಅಂತಾ..’ ಅಂದು ಪಟೇಲ್ರು ವಿವರಿಸಿದ್ರು.

‘ಅದ್ಸರಿ ಗೌಡ್ರೆ, ನನ್ನ ಪರಿಚಯ ನಿಮಗೆ ಹೇಗೆ ಆಯ್ತು?
ಒಹ್ಹ್ ಅದಾ ನಿಮ್ಮ ಪರಿಚಯ ನಂಗೆ ೨೦೧೮ ಅಕ್ಟೋಬರ್ ೩೧ರಿಂದಾನೆ ಇದೆ.. ನಾನು ನಿಮ್ಮುನ್ನಾ ಬಹಳ ದಿನಗಳಿಂದ ನೋಡ್ತಾನೆ ಇದ್ದೆ.. ಏನು ಗಾಂಭೀರ್ಯ.. ಲೋಹವೇ ವ್ಯಕ್ತಿಯ ಮೈತಳೆದು ಹೊರಟಂತಿರುತ್ತದೆ ನಿಮ್ಮ ನಡಿಗೆ’ ಎಂದು ಗೌಡ್ರು ಪಟೇಲ್ರನ್ನಾ ಹೊಗಳಿದರು.
ಪಟೇಲರು ಹೊಗಳಿಕೆಗೆ ಕೊಂಚ ನಾಚಿದರೂ, ತೋರಿಸಿಕೊಳ್ಳಲಿಲ್ಲ.

‘ಗೌಡ್ರೆ ನಂಗೊಂದು ಡೌಟು. ನೀವು ಯಾವಾಗಲೂ ಧೀರೋದಾತ್ತರಾಗಿ ಹೆಜ್ಜೆ ಹಾಕುತ್ತಿದ್ದರೂ ಆಗಾಗಾ ತಲೆ ಬಗ್ಗಿಸಿ ನೋಡಿಕೊಂಡು ನಡೆಯುತ್ತೀರಲ್ಲಾ ಯಾಕೆ ?’ ಪಟೇಲ್ರು ಕೇಳಿದ್ರು.

‘ನೋಡಿ ಪಟೇಲ್ರೇ.. ನಾವು ಎಷ್ಟೇ ಎತ್ತರಕ್ಕೆ ಬೆಳೆದ್ರೂ ತಗ್ಗಿ ಬಗ್ಗಿ ನಡೀಬೇಕು ಅಂತಾ ನಮ್ಮ ತಂದೆತಾಯಿ ಕಲಿಸಿಕೊಟ್ಟ ಪಾಠ. ಅಷ್ಟಕ್ಕೂ ತಗ್ಗಿ ಬಗ್ಗಿ ನೋಡಿದ್ರೇ ತಾನೆ. ನೆಲ ಸಮತಟ್ಟಾಗಿದೆಯೋ ಇಲ್ಲಾ ಗುಂಡಿ ಬಿದ್ದಿದೆಯೋ ಎಂಬುದು ಗೊತ್ತಾಗೋದು?’ ಎಂದು ಗೌಡ್ರು ಮರು ಪ್ರಶ್ನಿಸಿದರು.

‘ನೀವು ಹೇಳೋದು ನಿಜಾ ಗೌಡ್ರೆ, ತ್ವರಿತವಾಗಿ ಬೆಳೆದ ಕೆಲವರಿಗೆ ನೆಲ ಕಾಣೋದಿಲ್ಲ. ನೆಲ ಕಾಣದವರಿಗೆ ವಾಸ್ತವಿಕತೆ ಕಾಣೋದಿಲ್ಲ. ವಾಸ್ತವಿಕತೆ ಕಾಣದವರಿಗೆ ನ್ಯಾಯ ನೀತಿ ತಿಳಿಯೋದಿಲ್ಲ. ನ್ಯಾಯ ನೀತಿ ತಿಳಿಯದವರಿಗೆ ಧರ್ಮದ ಅರಿವಾಗುವುದಿಲ್ಲ. ಧರ್ಮದ ಅರಿವೇ ಇಲ್ಲದವರು ಅನ್ಯರೊಂದಿಗೆ ಸಹಿಷ್ಣುತೆ- ಸಹಬಾಳ್ವೆಯಿಂದ ಬದುಕಲು ಸಾಧ್ಯವೇ? ಸಹಿಷ್ಣತೆ- ಸಹಬಾಳ್ವೆ ಇಲ್ಲದವರು ದ್ವೇಷ- ಅಸೂಯೆಗಳಿಂದ ಕುದಿಯುತ್ತಿರುತ್ತಾರೆ ಈ ಕುದಿಯುವಿಕೆ ಹೆಚ್ಚಾಗಿ ಅಗ್ನಿಪರ್ವತವಾಗಿ ಸ್ಪೋಟಗೊಳ್ಳುತ್ತದೆ. ಹಾಗೆ ಸ್ಪೋಟಗೊಂಡಾಗ ದೇಷ-ಅಸೂಯೆ ಮಾಡುತ್ತಿದ್ದವರೆ ಹೇಳಹೆಸರಿಲ್ಲದಂತಾಗಿಬಿಡುತ್ತಾರೆ…’ ಎಂದರು ಪಟೇಲ್ರು.

‘ನಿಜಾ ಪಟೇಲ್ರೆ ನಿಮ್ಮ ಹೆಸರಿಗೆ ತಕ್ಕಂತೆ ಮಾತನಾಡಿದಿರಿ. ನಿಮ್ಮ ಎತ್ತರಕ್ಕೆ ತಕ್ಕುದಾದ ಮೇಲ್ಪಂಕ್ತಿಯಾಗುವಂತಹ ಮಾತುಗಳು.. ಈ ಮಾತುಗಳನ್ನು ಎಲ್ಲೆಡೆ ಎಲ್ಲರಿಗೂ ಮುಟ್ಟಿಸಬೇಕು… ನೀವು ಒಂದು ಯೂಟ್ಯೂಬ್ ಚಾನಲ್ ಮಾಡಬಾರದೇಕೆ?’ ಎಂದು ಗೌಡರು ನಕ್ಕರು.

‘ಗೌಡ್ರರೆ ಎತ್ತರದ ಪ್ರಶ್ನೆ ಮುಖ್ಯವಲ್ಲ. ನೀವೇನು ಕಮ್ಮೀನೆ? ಇಡೀ ದೇಶಕ್ಕೆ ಮಾದರಿಯಾಗುವಂತ ನಗರ ಕಟ್ಟಿದ್ದೀರಿ.. ನೀವು ಕಟ್ಟಿರೋ ಕರೆ ಕಟ್ಟೆಗಳ ಲೆಕ್ಕ ಹಾಕಲಾದೀತೆ? ಆ ಲೆಕ್ಕಕ್ಕೆ ಹೋದರೆ ನಿಮ್ಮಷ್ಟು ಎತ್ತರದ ವ್ಯಕ್ತಿ ಯಾರೂ ಇಲ್ಲ ಬಿಡಿ..’ ಎಂದು ಪಟೇಲ್ರು ಶ್ಲಾಘಿಸಿದರು.

ಗೌಡ್ರು ನಕ್ಕು ಸುಮ್ಮನಾದರು.
ಪಟೇಲ್ರೇ ಮಾತಿಗಳಿದರು ‘ನೋಡಿ ಗೌಡ್ರೆ.. ನನ್ ಸ್ಟ್ಯಾಚ್ಯೂ ೫೯೧ ಫೀಟೇ ಇರಬಹುದು ಅದು ನದೀ ದಂಡೆ ಮೇಲಿದೆ. ನಿಮ್ಮದು ೧೧೦ ಫೀಟೇ ಇರಬಹುದು. ಆದರೆ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಪಕ್ಕಾನೇ ಇದೆ ಇಡೀ ಜಗತ್ತು ಸುತ್ತೋ ಜನರೆಲ್ಲ ನಿಮ್ಮನ್ನಾ ನೋಡಿ ಹೋಗ್ತಾರೆ.. ಆ ಲೆಕ್ಕಕ್ಕೆ ನೀವೇ ಎತ್ತರದವರು ಎಂದರು.
ಗೌಡ್ರು ಏನೂ ಮತನಾಡಲಿಲ್ಲ. ಮೀಸೆಯಂಚಿನಲ್ಲೇ ನಕ್ಕರು! ಆ ನಗೆಯಲ್ಲಿ ವಿಷಾದದ ಛಾಯೆಯೊಂದು ಕಂಡುಕಾಣದಂತೆ ಮಾಯವಾಯಿತು!
-‘ಅಷ್ಟಾವಕ್ರಾ’

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ