Mysore
22
overcast clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ರಾಜ್ಯದಲ್ಲಿ ಜಿಟಿ ಜಿಟಿ ಮಳೆ : ಸದ್ಯಕ್ಕಿಲ್ಲ ಭಾರೀ ಮಳೆಯ ಮುನ್ಸೂಚನೆ

ಬೆಂಗಳೂರು :  ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಜಿಟಿ ಜಿಟಿ ಮಳೆಯಾಗುತ್ತಿದೆ.
ಬೆಳಗ್ಗೆ ಆರಂಭವಾದ ತುಂತುರು ಮಳೆ ಆಗಾಗ್ಗೆ ಬರುತ್ತಲೇ ಇದ್ದು, ಇಂದು ಬೆಳಗ್ಗೆ ಕೂಡ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದೆ. ಆದರೆ, ಭಾರೀ ಮಳೆಯಾದ ವರದಿಯಾಗಿಲ್ಲ. ಭಾರೀ ಮಳೆಯಾಗುವ ಮುನ್ಸೂಚನೆಗಳು ಸದ್ಯಕ್ಕೆ ಕಂಡುಬರುತ್ತಿಲ್ಲ.
ಅಲ್ಲದೆ, ಆಗಾಗ್ಗೆ ತಂಪಾದ ಮೇಲ್ಮೈ ಗಾಳಿ ಬೀಸುತ್ತಿರುವುದರಿಂದ ತೀವ್ರವಾದ ಚಳಿಯ ಅನುಭವವಾಗುತ್ತಿದೆ. ಮತ್ತೆ ಮಳೆ ಆರಂಭವಾಗಿರುವುದರಿಂದ ದೈನಂದಿನ ಕೆಲಸ-ಕಾರ್ಯಗಳಿಗೆ ತೆರಳುವವರು ಕೊಡೆ, ರೈನ್‍ಕೋಟ್‍ಗಳ ಮೊರೆ ಹೋಗಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿ ಕಂಡುಬಂದಿತು.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸಹ ಜಿನುಗುವ ಮಳೆಯಲ್ಲೇ ಕೊಡೆ ಮತ್ತು ರೈನ್‍ಕೋಟ್‍ಗಳನ್ನು ಧರಿಸಿ ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಎಡಬಿಡದೆ ನಿರಂತರವಾಗಿ ಬೀಳುತ್ತಿರುವ ಜಿಟಿ ಜಿಟಿ ಮಳೆಯಿಂದ ದೈನಂದಿನ ಕೆಲಸ-ಕಾರ್ಯಗಳಿಗೆ ಅಡ್ಡಿಯಾಗಿತ್ತು.
ಗ್ರಾಮೀಣ ಭಾಗದಲ್ಲೂ ಜಿಟಿ ಜಿಟಿ ಮಳೆಯಿಂದ ಕೃಷಿ ಕಾರ್ಯಗಳಿಗೆ ತೊಂದರೆಯಾಗಿ ಬಿಡುವು ಕೊಟ್ಟರೆ ಸಾಕು ಎಂಬ ಮನಸ್ಥಿತಿಯಲ್ಲಿ ಜನರಿದ್ದಾರೆ.  ಹವಾಮಾನ ಮುನ್ಸೂಚನೆ ಪ್ರಕಾರ, ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಗಳಿವೆ. ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಆಗಾಗ್ಗೆ ಹಗುರದಿಂದ ಸಾಧಾರಣ ಮಳೆಯಾಗುತ್ತಿದೆ. ವಾಯುಭಾರ ಕುಸಿತದಿಂದ ತಮಿಳುನಾಡಿನಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದೆ. ಬೆಂಗಳೂರು, ರಾಮನಗರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಗುರ ಮಳೆಯಾದ ವರದಿಯಾಗಿದೆ.
ಹವಾಮಾನ ಮುನ್ಸೂಚನೆ ಪ್ರಕಾರ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರ ಇಲ್ಲವೆ ಸಾಧಾರಣ ಪ್ರಮಾಣದ ಮಳೆಯಾಗುವ ಸಾಧ್ಯತೆಗಳಿವೆ.
ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದ್ದು, ಕೆಲವೆಡೆ ಹಗುರ ಮಳೆಯನ್ನು ನಿರೀಕ್ಷಿಸಬಹುದಾಗಿದೆ. ಮಲೆನಾಡು ಹಾಗೂ ಕರಾವಳಿ ಭಾಗದ ಜಿಲ್ಲೆಗಳಲ್ಲೂ ಸಾಧಾರಣ ಪ್ರಮಾಣದ ಮಳೆ ಕೆಲವೆಡೆ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಕಳೆದ ನಾಲ್ಕೈದು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ನಿನ್ನೆಯಿಂದ ಮತ್ತೆ ಆರಂಭವಾಗಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ದಕ್ಷಿಣ ಒಳನಾಡು ಹಾಗೂ ಪೂರ್ವಭಾಗದ ಜಿಲ್ಲೆಗಳಲ್ಲಿ ಕೆಲವೆಡೆ ತುಂತುರು ಮಳೆ, ಮತ್ತೆ ಕೆಲವೆಡೆ ಸಾಧಾರಣ ಮಳೆ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ