Mysore
19
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ನ್ಯಾಯಾಲಯ ಕಟ್ಟಡ ಇಂದು ಲೋಕಾರ್ಪಣೆ

೩೬ ಕೋಟಿ ರೂ. ವೆಚ್ಚದಲ್ಲಿ ಉಚ್ಚನ್ಯಾಯಾಲಯದ ಶೈಲಿಯಲ್ಲಿ ನಿರ್ಮಾಣ

ವರದಿ:  ಪುನೀತ್, ಮಡಿಕೇರಿ

ಮಡಿಕೇರಿ: ನಗರದ ಹೊರವಲಯದ ವಿದ್ಯಾನಗರದಲ್ಲಿ ನಿರ್ಮಾಣವಾಗಿರುವ ನೂತನ ನ್ಯಾಯಾಲಯ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಇಂದು(ನ.೧೨) ಲೋಕಾರ್ಪಣೆಯ ಭಾಗ್ಯ ಲಭಿಸಿದೆ.

ಕಳಕೇರಿ ನಿಡುಗಣೆ ಗ್ರಾಮ ಪಂಚಾಯಿತಿಗೊಳಪಡುವ ಒಟ್ಟು ೪.೬೦ ಎಕರೆ ಪ್ರದೇಶದಲ್ಲಿ ೩೬ ಕೋಟಿ ರೂ. ವೆಚ್ಚದಲ್ಲಿ ಉಚ್ಚನ್ಯಾಯಾಲಯದ ಶೈಲಿಯಲ್ಲಿ ನ್ಯಾಯಾಲಯ ನಿರ್ಮಾಣ ಮಾಡಲಾಗಿದೆ. ಕೆಂಪು ಬಣ್ಣದ ಬೃಹತ್ ನ್ಯಾಯಾಲಯ ಸಂಕೀರ್ಣ ನೋಡಲು ಆಕರ್ಷಣಿಯವಾಗಿದೆ. ಬೆಂಗಳೂರಿನ ಹೈಕೋರ್ಟ್ ಶೈಲಿಯಲ್ಲಿ ಹೊರವಿನ್ಯಾಸ ಮಾಡಲಾಗಿದೆ. ಇದರೊಂದಿಗೆ ಮೂಲಭೂತ ವ್ಯವಸ್ಥೆಗಳಾದ ಪಾರ್ಕಿಂಗ್, ಶೌಚಾಲಯ, ಕ್ಯಾಂಟಿನ್, ಆಸನ ಸೇರಿದಂತೆ ಇನ್ನಿತರ ವ್ಯವಸ್ಥೆ ಕಲ್ಪಿಸಲಾಗಿದೆ.

ನೂತನ ನ್ಯಾಯಾಲಯದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ವಿಶಾಲವಾಗಿರುವ ಕೋರ್ಟ್ ಆವರಣದ ಮುಂಭಾಗ ಪಾರ್ಕ್ ಕೂಡ ನಿರ್ಮಿಸಲಾಗಿದೆ. ಕೋರ್ಟ್ ಹಾಲ್‌ಗೆ ಬೇಕಾದ ಕಟಕಟೆ, ನ್ಯಾಯಾಪೀಠ, ವಕೀಲರ ಆಸನದ ವ್ಯವಸ್ಥೆ ಕೆಲಸಗಳು ಪೂರ್ಣಗೊಂಡಿದೆ. ಇದರೊಂದಿಗೆ ಕಟ್ಟಡ ಹೊರಭಾಗದ ಒಂದು ಕಡೆ ತಡೆಗೋಡೆಯನ್ನು ನಿರ್ಮಿಸಲಾಗಿದೆ.

ನ್ಯಾಯಾಲಯದ ಕಟ್ಟಡದ ಕಾಮಗಾರಿಗೆ ೨೦೧೩ರಲ್ಲಿ ಚಾಲನೆ ನೀಡಲಾಗಿತ್ತು. ನ್ಯಾಯಾಲಯ ಕಟ್ಟಡದ ನಿರ್ಮಾಣ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯ ಮೂಲಕ ಬೆಂಗಳೂರಿನ ಸಂಸ್ಥೆ ಟೆಂಡರ್ ಪಡೆದುಕೊಂಡು ಕಾಮಗಾರಿಯನ್ನು ಆರಂಭಿಸಿತ್ತು. ೨೦೧೫ರಲ್ಲಿ ಕಟ್ಟಡದ ಕಾಮಗಾರಿಯನ್ನು ಮುಗಿಸಿ ನ್ಯಾಯಾಲಯ ಕಲಾಪಗಳು ನಡೆಯಲು ಗುತ್ತಿಗೆದಾರ ಬಿಟ್ಟುಕೊಡಬೇಕಾಗಿತ್ತು. ಆದರೆ ಕೆಲವು ತಾಂತ್ರಿಕ ಅಡೆತಡೆಗಳಿಂದ ನ್ಯಾಯಾಲಯದ ಕಟ್ಟಡ ಕಾಮಗಾರಿ ವಿಳಂಬವಾಗಿದ್ದವು. ಸದ್ಯ ನ್ಯಾಯಾಲಯ ಪ್ರಾಚ್ಯವಸ್ತು ಇಲಾಖೆಯ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ನ.೧೨ ರಂದು ತೆರವು ಕಾರ್ಯ ನಡೆಯಲಿದೆ.

ಲೋಕೋಪಯೋಗಿ ಇಲಾಖೆ ಬೆಂಗಳೂರಿನ ಖಾಸಗಿ ಕಂಪೆನಿಯೊಂದಕ್ಕೆ ನಿರ್ಮಾಣದ ಗುತ್ತಿಗೆಯನ್ನು ನೀಡಿತ್ತು. ೨೦೧೫ಕ್ಕೆ ಮುಗಿುಂಬೇಕಾದ ಕಾಮಗಾರಿ ಇದೀಗ ಪೂರ್ಣಗೊಂಡಿದ್ದು, ನ.೧೪ರಿಂದ ನ್ಯಾಯಾಲಯ ಚಟುವಟಿಕೆಗಳು ಹೊಸ ಕಟ್ಟಡದಲ್ಲಿ ಆರಂಭವಾಗಲಿದೆ. ಮಡಿಕೇರಿ ಲೋಕೋಪಯೋಗಿ ಇಲಾಖೆಯ ಮಡಿಕೇರಿ ವಿಭಾಗ ಕಟ್ಟಡ ನಿರ್ಮಾಣ ಮತ್ತು ಉಸ್ತುವಾರಿಯ ಹೊಣೆ ನಿರ್ವಹಿಸಿದೆ. ಸದ್ಯ ನಗರದ ಹೊರವಲಯದಲ್ಲಿ ನ್ಯಾಯಾಲಯ ಕಟ್ಟಡ ಲೋಕಾರ್ಪಣೆಗೊಂಡರೆ ನಗರದಲ್ಲಿ ಸಂಚಾರ ಸಮಸ್ಯೆ, ಜನಜಂಗುಳಿ ಎಲ್ಲದಕ್ಕೂ ತಡೆಬೀಳಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಇಂದು ಉದ್ಘಾಟನೆ: ಮಡಿಕೇರಿ ನಗರದ ಹೊರವಲುಂದ ವಿದ್ಯಾನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ನ್ಯಾಯಾಲಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ನ.೧೨ರಂದು ನಡೆಯಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಕೆ.ಡಿ.ದಯಾನಂದ ತಿಳಿಸಿದರು.

ಅಂದು ಬೆಳಿಗ್ಗೆ ೧೧.೩೦ ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಎ.ಎಸ್.ಬೋಪಣ್ಣರವರು ನ್ಯಾಯಾಲಯ ಕಟ್ಟಡವನ್ನು ಉದ್ಘಾಟಿಸುವರು. ಹೈಕೋಟ್ ನ್ಯಾಯಾಧೀಶರಾದ ಪ್ರಸನ್ನ.ಬಿ.ವರ್ಲೆ, ಇ.ಎಸ್.ಇಂದ್ರೇಶ್, ಎಂ.ಜಿ.ಶುಕುರೆ ಕಮಲ್, ಸಿ.ಎಂ.ಪೂಣಚ್ಚ, ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್, ಪ್ರಮುಖರಾದ ಜೆ.ಸಿ.ಮದುಸ್ವಾಮಿ, ಸಿ.ಸಿ.ಪಾಟಿಲ್, ಶಾಸಕರಾದ ಕೆ.ಜಿ.ಬೋಪಯ್ಯ, ಮಡಿಕೇರಿ ಶಾಸಕರು, ಸಂಸದ ಪ್ರತಾಪ್ ಸಿಂಹ ಇತರರು ಪಾಲ್ಗೊಳ್ಳಲಿದ್ದಾರೆ.

ವಕೀಲರ ಸಂಘದ ಉಪಾಧ್ಯಕ್ಷ ರತನ್ ತಮ್ಮಯ್ಯ, ಜಂಟಿ ಕಾರ್ಯದರ್ಶಿ ಸಂಜಯ್‌ ರಾಜ್, ಕಾರ್ಯದರ್ಶಿ ಎಂ.ಕೆ.ಅರುಣ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಹಳೆ ಕೋರ್ಟ್ ಕಟ್ಟಡದ ಹಿನ್ನೆಲೆ: ನಗರದ ಕೋಟೆಯಾವರಣದೊಳಗೆ ಪ್ರಸ್ತುತ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿರುವ ಕಟ್ಟಡವನ್ನು ೧೯೬೯ರಿಂದ ೧೯೭೪ರಲ್ಲಿ ನಿರ್ಮಿಸಿದ್ದಾಗಿದೆ. ನ.೧೮ರ ೧೯೬೯ರಲ್ಲಿ ಮೈಸೂರು ಚೀಫ್ ಜಸ್ಟೀಸ್ ಎ.ಆರ್.ಸೋಮನಾಥ ಅಯ್ಯರ್ ಈ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಡಿ.೭ರ ೧೯೭೪ರಲ್ಲಿ ಕರ್ನಾಟಕದ ಆಗಿನ ಚೀಫ್ ಜಸ್ಟೀಸ್ ಜಿ.ಕೆ.ಗೋವಿಂದ ಭಟ್ ನ್ಯಾಯಾಲಯವನ್ನು ಲೋಕಾರ್ಪಣೆ ಮಾಡಿದ್ದರು.

ನೂತನ ಕಟ್ಟಡದಲ್ಲೇನಿದೆ?
ಮೂರು ಅಂತಸ್ತು, ೩೦ ಕೊಠಡಿಗಳು, ೯ ಕೋರ್ಟ್ ಹಾಲ್, ಪ್ರತ್ಯೇಕವಾದ ಏರಿಯಾ ಸೆಂಟರ್, ನಾಲ್ಕು ನ್ಯಾಯಾಲಯಗಳು, ಫಾಸ್ಟ್ ಟ್ರಾಕ್ ನ್ಯಾಯಾಲಯ, ಸ್ಟ್ರಾಂಗ್ ರೂಂ, ನ್ಯಾಯಾಲಯಕ್ಕೆ ಸಂಬಂಧಿಸಿದ ವಿವಿಧ ಕಚೇರಿಗಳು, ವಿಭಾಗಗಳು ಮಕ್ಕಳಿಗೆ ಪ್ರತ್ಯೇಕ ಆರೈಕೆ ಕೇಂದ್ರ.

ಬಸ್ ವ್ಯವಸ್ಥೆಗೆ ಮನವಿ
ನಗರದಿಂದ ಹೊರಹೊಲದಲ್ಲಿ ನ್ಯಾಯಾಲಯ ಇರುವ ಪರಿಣಾಮ ಸಾರ್ವಜನಿಕರ ಹಿತದೃಷ್ಠಿಯಿಂದ ಬಸ್ ವ್ಯವಸ್ಥೆಗೆ ಕೆ.ಎಸ್.ಆರ್.ಟಿ.ಸಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಬಸ್ ವ್ಯಸ್ಥೆಗೆ ಕಲ್ಪಿಸಲು ಅಧಿಕಾರಿಗಳು ಸ್ಪಂಧಿಸಿದ್ದಾರೆ. ಕಾರ್ಯಕಲಾಪ ಆರಂಭವಾದ ಕೂಡಲೇ ಬಸ್‌ಗಳು ಸಂಚಾರ ಆರಂಭಿಸಲಿದೆ. ಜತೆಗೆ ರಸ್ತೆಗಳು ಕಿರಿದಾದ ಪರಿಣಾಮ ರಸ್ತೆ ವಿಸ್ತರಣೆ ವಾಡಲು ಮಡಿಕೇರಿ ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಲಾಗಿದ್ದು, ದುರಸ್ತಿಪಡಿಸುವ ಭರವಸೆ ನೀಡಿದ್ದಾರೆ ಎಂದು ವಕೀಲರ ಸಂಘ ಅಧ್ಯಕ್ಷ ದಯಾನಂದ್ ತಿಳಿಸಿದ್ದಾರೆ.

ಹಳೆ ಕಟ್ಟಡಕ್ಕೆ ಭಾವನಾತ್ಮಕ ವಿಧಾಯ
ಸುವಾರು ೭೦ ವರ್ಷದಿಂದ ಕೋಟೆ ಆವರಣದಲ್ಲಿರುವ ನ್ಯಾಯಾಲಯ ಕಟ್ಟಡದಲ್ಲಿ ಕಾರ್ಯನಿರ್ವಹಿಸಿತ್ತು. ಬುಧವಾರ ವಕೀಲರೆಲ್ಲರು ಹಳೆ ಕಟ್ಟಡಲ್ಲಿ ಸೇರಿ ಚಪ್ಪಾಳೆ ಮೂಲಕ ಭಾವನಾತ್ಮಕವಾಗಿ ಅಭಿನಂಧನೆ ಸಲ್ಲಿಸಿದರು. ಹಳೆ ಕಟ್ಟಡದಲ್ಲಿ ನ೧೨ ರವರೆಗೆ ಕಾರ್ಯನಿರ್ವಹಿಸಲಿದ್ದು, ನಂತರ ಕಡತವನ್ನು ನೂತನ ಕಟ್ಟಡಕ್ಕೆ ತೆರವು ಮಾಡುವ ಮೂಲಕ ಸಂಪೂರ್ಣವಾಗಿ ವಿಧಾಯ ಹೇಳಲಿದೆ ಎಂದು ದಯಾನಂದ್ ತಿಳಿಸಿದರು.

ಹಳೆ ಕಟ್ಟಡದೊಂದಿಗೆ ಭಾವನಾತ್ಮಕ ಸಂಬಂಧವಿತ್ತು. ನ.೧೨ರಂದು ಅಧಿಕೃತವಾಗಿ ವಿಧಾಯ ಹೇಳಲಿದ್ದೇವೆ. ಮಳೆಯ ಕಾರಣದಿಂದ ನೂತನ ಕಟ್ಟಡದ ಉದ್ಘಾಟನೆಗೆ ವಿಳಂಬವಾಗಿತ್ತು. ಈಗ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಇಂದು ಉದ್ಘಾಟನೆಗೊಂಡು ನ.೧೪ರಿಂದ ಕಾರ್ಯಾರಂಭ ಮಾಡಲಿದೆ. -ಕೆ.ಡಿ.ದಯಾನಂದ್, ಅಧ್ಯಕ್ಷೃರು, ವಕೀಲರ ಸಂಘ ಕೊಡಗು

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ