ಚಾಮರಾಜನಗರ: ಹಲ್ಲೆ ಮಾಡಿ ಪತ್ನಿ ಸಾವಿಗೆ ಕಾರಣನಾದ ಪತಿಗೆ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ೫ ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಬೆರಟಹಳ್ಳಿ ಮಹೇಶ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಕಿಲಗೆರೆ ಪಾರ್ವತಮ್ಮ ಅವರನ್ನು ಮಹೇಶನಿಗೆ ಮದುವೆ ಮಾಡಲಾಗಿತ್ತು. ಮಹೇಶ ಪ್ರತಿ ದಿನ ಜಗಳವಾಡಿ ಆಕೆಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ.
೨೦೧೮ರ ಅ.೨ರ ರಾತ್ರಿ ಮಹೇಶ ಮರದ ತುಂಡಿನಿAದ ಪಾರ್ವತಮ್ಮಳ ಕೈ ಹಾಗೂ ತಲೆಗೆ ಹೊಡೆದಿದ್ದ. ತೀವ್ರವಾಗಿ ಗಾಯಗೊಂಡಿದ್ದ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಅ.೭ರಂದು ಬೆರಟಹಳ್ಳಿಯ ಮನೆಗೆ ಬಂದಿದ್ದರು. ಅದೇ ದಿನ ರಾತ್ರಿ ಮನೆಗೆ ಬಂದ ಮಹೇಶ, ಆಕೆಯ ಮೇಲೆ ಮತ್ತೆ ಹಲ್ಲೆ ಮಾಡಿದ್ದರಿಂದ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದರು.
ಆಕೆಯ ತಾಯಿ ಗುರುನಂಜಮ್ಮ ತೆರಕಣಾಂಬಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿ ಮಹೇಶ್ ವಿರುದ್ಧ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.
ಆರೋಪ ಸಾಬೀತಾಗಿರುವುದರಿಂದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಎನ್.ಆರ್.ಲೋಕಪ್ಪ ಅವರು ಬುಧವಾರ ಅಪರಾಧಿ ಮಹೇಶನಿಗೆ ಜೈಲು ಶಿಕ್ಷೆ ಜೊತೆಗೆ ೧.೫ ಲಕ್ಷ ರೂ.ದಂಡ ವಿಧಿಸಿದ್ದಾರೆ.ದಂಡದಲ್ಲಿ ಪಾರ್ವತಮ್ಮಳ ಇಬ್ಬರು ಮಕ್ಕಳಿಗೆ ತಲಾ ೭೦ ಸಾವಿರ ಹಾಗೂ ಉಳಿದ ೧೦ ಸಾವಿರ ರೂ.ಅನ್ನು ಸರ್ಕಾರಕ್ಕೆ ಪಾವತಿಸಲು ಆದೇಶಿಸಿದ್ದಾರೆ.
ಪ್ರಾಷಿಕ್ಯೂಷನ್ ಪರ ಸಾರ್ವಜನಿಕ ಅಭಿಯೋಜಕ ಬಿ.ಪಿ.ಮಂಜುನಾಥ ವಾದ ಮಂಡಿಸಿದ್ದರು.





