ಮೈಸೂರು : ನಗರದ ಹಳೆ ಕೆಸರೆಯಲ್ಲಿ ನಿರ್ಮಾಣವಾಗುತ್ತಿರುವ ಬೃಹತ್ ತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿಯನ್ನು ಡಿ.15ರೊಳಗೆ ಸಂಪೂರ್ಣಗೊಳಿಸುವಂತೆ ಶಾಸಕ ಎಸ್.ಎ.ರಾಮದಾಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಂಗಳವಾರ ಮಹಾಪೌರ ಶಿವಕುಮಾರ್ ಮತ್ತು ಉಪ ಮಹಾಪೌರ ಡಾ.ಡಿ.ರೂಪ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳ ತಂಡದೊಂದಿಗೆ ಸ್ಥಳಕ್ಕೆ ತೆರಳಿ ಕಾಮಗಾರಿ ವಿಳಂಬ ಆಗಿರುವುದಕ್ಕೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಇದೇ ವೇಳೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಇನ್ನೂ ವಿದ್ಯುತ್ ಸಂಪರ್ಕ ನೀಡಿಲ್ಲದ ಕಾರಣ ಸ್ಥಳದಿಂದಲೇ ಸೆಸ್ಕ್ ಅಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಟಿಸಿ ಅಳವಡಿಸಿ ವಿದ್ಯುತ್ ಸಂಪರ್ಕ ನೀಡುವಂತೆ ಆದೇಶಿಸಿದರು. ಜತೆಗೆ ತ್ಯಾಜ್ಯ ವಿಲೇವಾರಿ ಘಟಕದ ಅಪೂರ್ಣ ಕಾಮಗಾರಿಗಳನ್ನು ನವೆಂಬರ್ 30 ರೊಳಗೆ ಪೂರೈಸಬೇಕು ಹಾಗೂ ಟ್ರಯಲ್ ನೀಡಬೇಕೆಂದು ತಾಕೀತು ಮಾಡಿದರು.
200 ಟನ್ ಕಸ ಸಂಗ್ರಹಣ ಮಾಡುವ ಸಾಮರ್ಥ್ಯದ ವಿಶೇಷ ಕ್ಲಿನಿಸಿಟಿ ಆಲೋಚನೆಯನ್ನು 2014ರಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಯಿತು. 2015ರಲ್ಲಿ 2ನೇ ಬಾರಿಗೆ ಶೂನ್ಯ ವಿಲೇವಾರಿ ತ್ಯಾಜ್ಯ ಘಟಕ ವನ್ನು ರಾಜ್ಯದಲ್ಲೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಲಾಯಿತು. ನಗರದ 18 ಕಡೆಗಳಲ್ಲಿ ಹಸಿ ಹಾಗೂ ಒಣ ಕಸ ವಿಂಗಡಿಸಲು ಹೊಸ ತಂತ್ರಜ್ಞಾನ ಅಳವಡಿಸಲು ಚಾಲನೆ ನೀಡಲಾಗಿತ್ತು. ರಾಯನ ಕೆರೆ ಹಾಗೂ ಕೆಸರೆ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ನೂತನ ತಂತ್ರಜ್ಞಾನ ಅಳವಡಿಕೆ ಸಂಪೂರ್ಣವಾದರೆ ಸುಯೇಜ್ ಫಾರಂನಲ್ಲಿರುವ 7ಟನ್ ಕಸಕ್ಕೂ ಮುಕ್ತಿ ಸಿಗಲಿದೆ. ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸದಿಂದ ಆದಾಯವೂ ಹೆಚ್ಚಾಗಿ ಪಾಲಿಕೆಗೆ ಹೆಚ್ಚುವರಿ ಹೊರೆಯೂ ಕಡಿಮೆಯಾಗಲಿದೆ ಈ ನಿಟ್ಟಿನಲ್ಲಿ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಶಾಸಕರು ಸೂಚಿಸಿದರು.





