Mysore
18
few clouds

Social Media

ಸೋಮವಾರ, 26 ಜನವರಿ 2026
Light
Dark

ರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ

ಮೈಸೂರು: ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಪ್ರಜ್ಞೆ ಬೆಳೆಸಿಕೊಳ್ಳುವುದು ಅತ್ಯಗತ್ಯ. ಅದರಲ್ಲೂ ಕಾನೂನು ವಿದ್ಯಾರ್ಥಿಗಳು ಸವಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ, ಮಹಿಳೆಯರು ಹಾಗೂ ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ಜವಾಬ್ದಾರಿ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಎಂ.ಎಲ್. ರಘುನಾಥ್ ಹೇಳಿದರು. ಮೈಸೂರು-ಬನ್ನೂರು ರಸ್ತೆಯಲ್ಲಿರುವ ವಿದ್ಯಾವಿಕಾಸ್ ಕಾನೂನು ಮಹಾವಿದ್ಯಾಲಯ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಲಲಿತ ಸಭಾಂಗಣದಲ್ಲಿ ನಡೆದ ಬುಧವಾರ ರಾಷ್ಟ್ರೀುಯ ಕಾನೂನು ಸೇವಾ ದಿನಾಚರಣೆ ಕಾರ್ಯಕ್ರಮವನ್ನು ಮಾತನಾಡಿದರು.ಕನ್ನಡವನ್ನು ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲಿ ಬಳಸಲು ಸರ್ವೋಚ್ಛ ನ್ಯಾಯಾಲಯ ಅನುಮತಿ ನೀಡಿದೆ. ಇದರಿಂದ ಕರ್ನಾಟಕದ ಪ್ರತಿ ನ್ಯಾಯಾಲಯದಲ್ಲೂ ಕನ್ನಡಕ್ಕೆ ಮೊದಲ ಆಧ್ಯತೆ ನೀಡಲು ಸಹಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ಅರಿವು ಅತ್ಯವಶ್ಯಕವಾಗಿ ತಲುಪಬೇಕು ಹಾಗೂ ಇದು ಕಾನೂನು ಸೇವಾ ಕಾಯ್ದೆಯ ಪ್ರಮುಖ ಉದ್ದೇಶವು ಸಹ ಆಗಿರುತ್ತದೆ. ಹಾಗಾಗಿ ದುರ್ಬಲರಿಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಕಾನೂನಿನ ಅರಿವು ಮೂಡಿಸುವುದು ಹಾಗೂ ಅದರ ನೆರವು ನೀಡಲು ನಮಗೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಬಹಳ ಮುಖ್ಯವಾಗಿದೆ. ಒಬ್ಬ ವಿದ್ಯಾರ್ಥಿಗೆ ಕಾನೂನಿನ ಅರಿವಿದ್ದರೆ ಆತ ಇತರರಿಗೆ ಮಾರ್ಗದರ್ಶನ ನೀಡುವುದರ ಜತೆಗೆ ಸೂಕ್ತ ನೆರವು ನೀಡಲು ಅನುಕೂಲವಾಗುತ್ತದೆ. ಹಾಗಾಗಿ,ದೇಶದ ಸಂವಿಧಾನ,ಕಾನೂನಿನ ಅಂಶಗಳನ್ನು ಅರಿತು ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ್ ಭೂತೆ ಮಾತನಾಡಿ, ತಮ್ಮ ಭಾಷಣದಲ್ಲಿ ಕಾನೂನು ಅರಿವನ್ನು ಅವಶ್ಯಕ ಇರುವ ಪ್ರತಿಯೊಬ್ಬ ನಾಗರೀಕನಿಗೂ ತಲುಪಿಸಬೇಕಾಗಿರುವುದು ರಾಷ್ಟ್ರೀಯ ಕಾನೂನು ಸೇವಾ ಕಾಯಿದೆಯ ಉದ್ದೇಶವಾಗಿದೆ ಎಂದು ಅಭಿಪ್ರಾಯಪಟ್ಟರು.
ವಕೀಲರಾದ ಎನ್. ಗೀತಾ ಮಾತನಾಡಿ, ಕಾನೂನಿನ ಅರಿವು ಮೂಡಿಸುವುದರಲ್ಲಿ ಪ್ರಾಧಿಕಾರದ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಹಳ್ಳಿಗಳಲ್ಲಿ ಕಡುಬಡತನದಿಂದ ಆರ್ಥಿಕವಾಗಿ ಹಿಂದುಳಿದಿರುವ ಎಲ್ಲ ನಾಗರೀಕರಿಗೂ ಇದರ ಪ್ರಯೋಜನ ಸಿಗಬೇಕು ಎಂದು ತಿಳಿಸಿದರು. ಜತೆಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವೀಶ್ ಗೌಡ ಮಾತನಾಡಿ, ಕಾನೂನು ಪ್ರಾಧಿಕಾರ ಮತ್ತು ಕಾನೂನು ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರವು ಸಂಪೂರ್ಣ ಬೆಂಬಲ ನೀಡುವ ಮೂಲಕ ಕಾನೂನಿನ ಅರಿವನ್ನು ಎಲ್ಲ ಸ್ತರಗಳಲ್ಲಿ ತಲುಪಿಸಲು ಕಾರ್ಯ  ಪ್ರವೃತ್ತರಾಗಬೇಕಾಗಿದೆ ಎಂದು ಹೇಳಿದರು.
ಮೈಸೂರು ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ವಿದ್ಯಾವಿಕಾಸ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಂ.ಎನ್. ಸಂಜೀತ್, ಹಿರಿಯ ಪ್ರಾಧ್ಯಾಪಕ ವಿ.ಸಂತೋಷ್ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!