Mysore
17
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಗುಂಡ್ಲುಪೇಟೆ-ಬಾಚಹಳ್ಳಿ ರಸ್ತೆಯಲ್ಲಿ ಸಂಚಾರಕ್ಕೆ ಪರದಾಟ

ಬದಿಗಳಲ್ಲಿ ಬೆಳೆದು ನಿಂತ ಜಾಲಿ ಮುಳ್ಳು, ಗಿಡಗಂಟಿ; ತಿರುವುಗಳಲ್ಲಿ ಎದುರಿನ ವಾಹನವೇ ಕಾಣಿಸದ ಸ್ಥಿತಿ

ಮಹೇಂದ್ರ ಹಸಗೂಲಿ

ಗುಂಡ್ಲುಪೇಟೆ: ತಾಲ್ಲೂಕಿನಲ್ಲೇ ಅತಿ ಹೆಚ್ಚು ವಾಹನಗಳು ಓಡಾಡುವ ಗ್ರಾಮೀಣ ರಸ್ತೆ ಎಂದೇ ಗುರುತಿಸಿಕೊಂಡಿರುವ ಗುಂಡ್ಲುಪೇಟೆ-ಬಾಚಹಳ್ಳಿ ಸಂಪರ್ಕ ರಸ್ತೆಯ ಬದಿಯಲ್ಲಿ ಗಿಡಗಂಟಿಗಳು ಬೆಳೆದು ನಿಂತು ಸಂಚಾರಕ್ಕೆ ತೊಂದರೆಯಾಗಿದೆ.

ಗುಂಡ್ಲುಪೇಟೆಯಿಂದ ಅಣ್ಣೂರುಕೇರಿ, ಶಿವಪುರ, ಹುಲ್ಲೇಪುರ, ಚೌಡಹಳ್ಳಿ, ಬೆಳವಾಡಿ, ಬೊಮ್ಮಲಾಪುರ, ಅಂಕಹಳ್ಳಿ, ಬಾಚಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸುವಾರು ೨೦ ಕಿ.ಮೀ.ಅಂತರದ ಈ ರಸ್ತೆಯ ಬದಿಯಲ್ಲಿ ಜಾಲಿ ಮುಳ್ಳು, ಪಾರ್ಥೇನಿಯಂ, ಲಂಟಾನ ಬೆಳೆದು ನಿಂತಿವೆ. ಇದರಿಂದ ಓಡಾಡುವ ವಾಹನಗಳಿಗೆ, ಪ್ರಯಾಣಿಕರಿಗೆ ತಾಕುತ್ತಿದ್ದು ಸಂಚರಿಸಲು ಪ್ರಾಯಾಸಪಡಬೇಕಿದೆ.

ಅಪಘಾತಕ್ಕೂ ಆಹ್ವಾನ: ಕಿರಿದಾದ ಈ ರಸ್ತೆಯಲ್ಲಿ ಹತ್ತಾರು ತಿರುವುಗಳಿವೆ. ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿರುವುದರಿಂದ ತಿರುವುಗಳಲ್ಲಿ ಎದುರಿಗೆ ಬರುವ ವಾಹನಗಳು ಕಾಣಿಸುವುದೇ ಇಲ್ಲ. ಈ ಪರಿಸ್ಥಿತಿ ಅಪಘಾತಕ್ಕೆ ಆಹ್ವಾನ ನೀಡುವಂತಿದೆ.

ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯಲ್ಲಿ ಪ್ರತಿನಿತ್ಯ ಕೆಎಸ್‌ಆರ್‌ಟಿಸಿ ಬಸ್, ಶಾಲೆ, ಸರಕು ಸಾಗಣೆ ವಾಹನಗಳು ಹೆಚ್ಚಾಗಿ ಓಡಾಡುತ್ತವೆ. ಬೈಕ್‌ಗಳಂತೂ ಲೆಕ್ಕವಿಲ್ಲದಷ್ಟು ಓಡಾಡುತ್ತಿದ್ದು, ಸವಾರರು ಜಾಲಿ ಮುಳ್ಳುಗಳಿಂದ ಚುಚ್ಚಿಸಿಕೊಂಡು ಸಂಬಂಧಿಸಿದವರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ವಾಹನಗಳು ಎದುರುದಾಗ ಬದಿಗೆ ಹೋದರೆ ಗಿಡಗಂಟಿಗಳಿಂದ ಚುಚ್ಚಿಸಿಕೊಳ್ಳಬೇಕಿದೆ.

ಈ ರಸ್ತೆಯುದ್ದಕ್ಕೂ ಸಿಗುವ ೮-೧೦ ಗ್ರಾಮಗಳ ವಿದ್ಯಾರ್ಥಿಗಳು ಓದಲು ಮತ್ತು ನಿವಾಸಿಗಳು ಅಗತ್ಯ ವಸ್ತುಗಳನ್ನು ಖರೀದಿಸಲು ಬೊಮ್ಮಲಾಪುರ ಮತ್ತು ಗುಂಡ್ಲುಪೇಟೆ ಪಟ್ಟಣಕ್ಕೆ ಹೋಗಿ ಬರುತ್ತಾರೆ. ರಾತ್ರಿ ವೇಳೆಯಂತೂ ರಸ್ತೆಯಲ್ಲಿ ಓಡಾಡುವುದೇ ದುಸ್ತರ. ಕಳೆದ ೩ ತಿಂಗಳ ಅವಧಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಕಳೆಗಿಡಗಳು ರಸ್ತೆ ಬದಿಯಲ್ಲಿ ಹುಲುಸಾಗಿ ಬೆಳೆದು ನಿಂತಿವೆ.

ರಸ್ತೆಯೇನೊ ಓಡಾಡಲು ಚೆನ್ನಾಗಿದೆ. ಆದರೆ, ಕಿರಿದಾಗಿದ್ದು ದೊಡ್ಡ ವಾಹನಗಳು ಎದುರಿಗೆ ಬಂದರೆ ಪಕ್ಕಕ್ಕೆ ಸರಿದುಕೊಳ್ಳಲು ಪರದಾಡಬೇಕಿದೆ. ಬದಿಗೆ ಸರಿಯಲು ಮುಂದಾದರೆ ಗಿಡಗಂಟಿಗಳ ಕಾಟ, ಇಲ್ಲವೇ ವಾಹನಕ್ಕೆ ಡಿಕ್ಕಿ ಹೊಡೆಯಬೇಕಾದ ಅನಿವಾರ್ಯತೆಯಿಂದ ಪ್ರಯಾಣಿಕರು ಜೀವ ಕೈಲಿಡಿದುಕೊಂಡು ಸಂಚರಿಸುವ ಉದ್ಭವವಾಗಿದೆ.

 ಇದೇ ರಸ್ತೆಯಲ್ಲಿ ಸ್ವಗ್ರಾಮಕ್ಕೆ ತೆರಳುವ ಶಾಸಕರು
ಗುಂಡ್ಲುಪೇಟೆ ಕ್ಷೇತ್ರದ ಶಾಸಕರಾದ ಸಿ.ಎಸ್.ನಿರಂಜನಕುಮಾರ್ ತಮ್ಮ ಸ್ವಗ್ರಾಮ ಚೌಡಹಳ್ಳಿಗೆ ಗುಂಡ್ಲುಪೇಟೆ-ಅಣ್ಣೂರಿಕೇರಿ-ಶಿವಪುರ-ಹುಲ್ಲೇಪುರ ಮೂಲಕ ತೆರಳುತ್ತಾರೆ. ಮೈಸೂರಿನಿಂದ ಗುಂಡ್ಲುಪೇಟೆಗೆ ಆಗಮಿಸುವ ಶಾಸಕರು ಅಧಿಕಾರಿಗಳು, ಬಿಜೆಪಿ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರ ಸಭೆ, ಸಮಾರಂಭ ನಡೆಸಿ ಸ್ವಗ್ರಾಮಕ್ಕೆ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಇದಲ್ಲದೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆಗೊಮ್ಮೆ, ಈಗೊಮ್ಮೆ ಈ ರಸ್ತೆಯಲ್ಲಿ ಶಾಸಕರೊಡನೆ ಓಡಾಡುತ್ತಾರೆ. ಈ ಸಮಸ್ಯೆ ಇವರುಗಳ ಗಮನಕ್ಕೆ ಬಂದಿಲ್ಲವೇ ? ಇನ್ನಾದರೂ ಇತ್ತ ಗಮನಹರಿಸಬೇಕು ಎಂಬುದು ನಿವಾಸಿಗಳ ಆಗ್ರಹವಾಗಿದೆ.

 ಹೆಚ್ಚು ವಾಹನಗಳು ಓಡಾಡುವ ಈ ರಸ್ತೆ ಬದಿಯಲ್ಲಿ ಜಾಲಿಮುಳ್ಳು ಬೆಳೆದುನಿಂತು ಚಾಚಿಕೊಂಡು ಸವಾರರಿಗೆ ಬಡಿಯುತ್ತಿವೆ. ಬೈಕ್ ಸವಾರರು, ಸರಕು ಸಾಗಣೆ ವಾಹನಗಳಲ್ಲಿ ಓಡಾಡುವವರ ಪರಿಸ್ಥಿತಿ ಹೇಳತೀರದು. ಬೇಗ ರಸ್ತೆ ಬದಿಯ ಗಿಡಗಂಟಿಗಳನ್ನು ತೆರವು ಮಾಡಿಸಬೇಕು. -ಸದಾಶಿವಮೂರ್ತಿ, ಚೌಡಹಳ್ಳಿ

ಇದೊಂದೇ ರಸ್ತೆಯಲ್ಲ ಸುಮಾರು ರಸ್ತೆಗಳಲ್ಲಿ ಇಂತಹ ಸಮಸ್ಯೆಯಿದೆ. ರಸ್ತೆ ನಿರ್ವಹಣೆಗೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಬಿಡುಗಡೆಯಾದ ತಕ್ಷಣ ಜಂಗಲ್ ಕಟಿಂಗ್ ಮಾಡಿಸಲಾಗುವುದು. – ರಾಮಚಂದ್ರ, ಎಇಇ, ಲೋಕೋಪೋಂಗಿ ಇಲಾಖೆ

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ