ಡಿಸಿ ಕಚೇರಿ ಎದುರು ಕಬ್ಬು ಬೆಳೆಗಾರ ಸಂಘದವರಿಂದ ಬಾರುಕೋಲು ಚಳವಳಿ
ಮೈಸೂರು: ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಬಾರುಕೋಲು ಚಳವಳಿ ನಡೆಸಿದ ಕಬ್ಬು ಬೆಳೆಗಾರರು, ಎಂಎಲ್‌ಎ, ಎಂಪಿಗಳ ವೇಷಧಾರಿಗಳನ್ನು ಅಟ್ಟಾಡಿಸಿಕೊಂಡು ಛಡಿ ಏಟು ಕೊಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆಸುತ್ತಿರುವ ಧರಣಿ ೮ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ನೀವು ಬಂಡವಾಳ ಶಾಹಿಗಳು, ಮಾರ್ವಾಡಿಗಳ ಪರವಿದ್ದು, ರೈತಪರ ಕೆಲಸ ಮಾಡುತ್ತಿಲ್ಲ. ನೀವು ಎಮ್ಮೆ ಕಾಯಲು ಲಾಯಕ್ ಎಂದು ಛಾಟಿಯಿಂದ ಹೊಡೆಯುವ ಅಣಕು ಪ್ರದರ್ಶನ . ಎಚ್ಚರಿಕೆ… ಎಚ್ಚರಿಕೆ ಎಂಎಲ್‌ಎ, ಎಂಪಿ, ಮಂತ್ರಿಗಳೇ ಎಚ್ಚರಿಕೆ. ನಮ್ಮ ಕೈಯಲ್ಲಿ ಬಾರುಕೋಲು ಇದೆ. ನಮ್ಮ ಹಳ್ಳಿಗೆ ಬಂದಾಗ ಕೋಲಿನಲ್ಲಿ ಬಾರಿಸಬೇಕಾಗುತ್ತದೆ ಎಂದು ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಕುಮಾರ್, ಟನ್ ಕಬ್ಬಿಗೆ ೭,೫೦೦ ರೂ.ಗೂ ಹೆಚ್ಚು ಆದಾಯ ವಿದೆ. ಒಂದು ಟನ್ ಕಬ್ಬಿನಿಂದ ೧೦೦ ಲೀ. ಎಥೆನಾಲ್ ಉತ್ಪಾದನೆಯಾಗುತ್ತದೆ. ಕೇಂದ್ರ ಸರ್ಕಾರ ನಿಗದಿ ದರ ಲೀಟರಿಗೆ ೬೫ ರೂ. ಹಾಗೂ ಟನ್ ಕಬ್ಬಿನ ಸಿಪ್ಪೆಯಿಂದ ೧೪೪ಯೂನಿಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ನಂತರ ಮಡ್ಡಿಯಿಂದ ಗೊಬ್ಬರ ಉತ್ಪಾದಿಸಲಾಗುತ್ತದೆ. ಎಲ್ಲ ಸೇರಿ ೭,೫೦೦ ರೂ. ಆದಾಯ ಬರುತ್ತದೆ. ವರ್ಷಕಾಲ ಕಷ್ಟಪಟ್ಟು ಇರುವ ಬೆಳೆದ ರೈತನಿಗೆ ೩,೦೦೦ ರೂ. ಮಾತ್ರ ಕೊಡಲಾಗುತ್ತಿದೆ. ಈ ರೀತಿ ಅನ್ಯಾಯ ಏಕೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ನಾಲ್ಕು ತಿಂಗಳಿನಿಂದ ಕಬ್ಬು ಬೆಳೆಗಾರರು ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದರು ನಿದ್ದೆ ಮಾಡುತ್ತಿರುವ ರಾಜಕಾರಣಿಗಳಿಗೆ ಈ ಹೋರಾಟದ ಮೂಲಕ ಎಚ್ಚರಿಸುತ್ತಿದ್ದೇವೆ. ಇನ್ನು ಮುಂದೆಯೂ ಇದೇ ರೀತಿ ರೈತರ ಬಗ್ಗೆ ಲಘುವಾಗಿ ನಡೆದುಕೊಂಡರೆ ಅಂತಹ ಎಂಎಲ್‌ಎ, ಎಂಪಿಗಳಿಗೆ ಚುನಾವಣೆಯಲ್ಲಿ ರೈತರ ಶಕ್ತಿ ಏನೆಂದು ತಿಳಿಸಿಕೊಡುತ್ತೇವೆ ಎಂದು ಎಚ್ಚರಿಸಿದರು.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಜಿಲ್ಲಾಧ್ಯಕ್ಷ ಪಿ.ಸೋಮಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕೆರೆಹುಂಡಿ ರಾಜಣ್ಣ, ಹಾಡ್ಯ ರವಿ, ಅಂಬಳೆ ಮಂಜುನಾಥ್, ಲಕ್ಷ್ಮೀಪುರ ವೆಂಕಟೇಶ್, ವರಕೋಡು ಜಯರಾಮು, ಟಿ.ರಾಮೇಗೌಡ, ಸೋನಹಳ್ಳಿ ದೊರೆಸ್ವಾಮಿ, ಬಸವಣ್ಣ, ಮಂಜುನಾಥ್, ಕುರುಬೂರು ಮಂಜು, ಮಾರ್ಬಳ್ಳಿ ನೀಲಕಂಠಪ್ಪ, ಚುಂಚರಾಯನಹುಂಡಿ ತಮ್ಮಯ್ಯಪ್ಪ, ಮಲ್ಲಪ್ಪ, ಮಾದೇವ ಸ್ವಾಮಿ, ಮುದ್ದಹಳ್ಳಿ ಶಿವಣ್ಣ, ದಿನೇಶ್, ಬಾಲಕೃಷ್ಣ ಸಂಗಾಪುರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.





