ಮೈಸೂರು: ಪ್ರೀತಿಸಿ ೫ ತಿಂಗಳ ಹಿಂದೆಯಷ್ಟೇ ಮದುವೆಯಾದ ಜೋಡಿಯೊಂದು ನೀರಿನಲ್ಲಿ ಮುಳುಗಿ ಸಾವಿನಲ್ಲೂ ಒಂದಾಗಿರುವ ದುರಂತ ಘಟನೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರು ತಾಲ್ಲೂಕಿನ ಶಾದನಹಳ್ಳಿ ಗ್ರಾಮದ ನಿವಾಸಿಗಳಾದ ಶಿವಕುಮಾರ್(೨೯) ಹಾಗೂ ಕವಿತಾ(೨೫) ಎಂಬುವವರೇ ಮೃತಪಟ್ಟವರು. ಶುಕ್ರವಾರ ಸಂಜೆ ೫ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ. ಇವರು ಶ್ರೀರಂಗಪಟ್ಟಣ ಮೊಗರಳ್ಳಿ ಗ್ರಾಮದಲ್ಲಿ ನೆಲೆಸಿದ್ದರು. ಕೆ.ಆರ್.ಎಸ್ ಬಳಿಯ ವರುಣಾ ಚಾನೆಲ್ ಕಟ್ಟೆ ಮೇಲೆ ಕುಳಿತು ಬಟ್ಟೆ ಒಗೆಯುತ್ತಿದ್ದ ಕವಿತಾ ಆಕಸ್ಮಿಕವಾಗಿ ನೀರಿಗೆ ಜಾರಿ ಬಿದ್ದಿದ್ದಾರೆ. ಪತ್ನಿಯನ್ನ ರಕ್ಷಿಸಲು ಪತಿ ಶಿವಕುಮಾರ್ ಸಹ ನೀರಿಗೆ ಹಾರಿದ್ದಾರೆ. ಆದರೆ, ಇಬ್ಬರೂ ಸಹ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕವಿತಾ ಅವರ ಮೃತ ದೇಹ ಶುಕ್ರವಾರವೇ ಪತ್ತೆಯಾದರೆ, ಶಿವಕುಮಾರ್ ಅವರ ಶವ ಶನಿವಾರ ಪತ್ತೆಯಾಗಿದೆ. ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.