Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮಾನಸಿಕ ಆರೋಗ್ಯ ಸುಧಾರಣೆಗೆ ಮನೋಚೈತನ್ಯ ಕ್ಲಿನಿಕ್!

ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ವಾರದಲ್ಲಿ ಒಂದು ದಿನ ಮಾನಸಿಕ ಸಮಾಲೋಚನೆ ಮತ್ತು ಚಿಕಿತ್ಸೆ

ಬಿ.ಎನ್.ಧನಂಜಯ ಗೌಡ
ಮೈಸೂರು: ಸಮುದಾಯ ಸದೃಢತೆಗೆ ಮಾನಸಿಕ ಆರೋಗ್ಯವು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಹಾಗಾಗಿ, ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಲು ಮತ್ತು ಚಿಕಿತ್ಸೆ ನೀಡಿ ಸುಧಾರಿಸಲು ಮೈಸೂರು ಜಿಲ್ಲಾ ಆರೋಗ್ಯ ಇಲಾಖೆಯು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ‘ಮನೋಚೈತನ್ಯ’ ಚಿಕಿತ್ಸಾ ಯೋಜನೆಯನ್ನು ರೂಪಿಸಿ ಚಟುವಟಿಕೆಗಳನ್ನು ನಡೆಸುತ್ತಿದೆ.
ಇತ್ತೀಚಿನ ಒತ್ತಡಯುತ ಜೀವನದಿಂದಾಗಿ ಸಾಕಷ್ಟು ಜನರು ಖಿನ್ನತೆ, ಆತಂಕ, ಹತಾಶೆ, ಮದ್ಯ ವ್ಯಸನ ಇವೆ ಮೊದಲಾದ ಮಾನಸಿಕ ಆನಾರೋಗ್ಯಗಳಿಂದ ಬಳಲುತ್ತಿದ್ದಾರೆ. ಇಂತಹವರ ಮಾನಸಿಕ ಆರೋಗ್ಯ ಸುಧಾರಣೆಗಾಗಿ ಜಿಲ್ಲಾ ಆರೋಗ್ಯ ಇಲಾಖೆ ಚಿಕಿತ್ಸಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಜಿಲ್ಲೆಯಲ್ಲಿ ೨೦೨೧-೨೨ನೇ ಸಾಲಿನಲ್ಲಿ ೧೫,೫೮೯ ಮತ್ತು ೨೦೨೨-೨೩ನೇ ಸಾಲಿನಲ್ಲಿ ೧೧,೩೭೧ (ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೂ) ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಸಮಾಲೋಚನೆ ಪಡೆದಿದ್ದಾರೆ.

ಏನಿದು ಮನೋಚೈತನ್ಯ?: ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಮಾನಸಿಕ ಆರೋಗ್ಯ ಸುಧಾರಣೆಗಾಗಿ ಆಯೋಜಿಸುವ ಅನೇಕ ಚಟುವಟಿಕೆಗಳಲ್ಲಿ ‘ಮನೋಚೈತನ್ಯ ಕ್ಲಿನಿಕ್’ ಕೂಡ ಒಂದಾಗಿ ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ವಾರದಲ್ಲಿ ಒಂದು ಮನೋರೋಗ ತಜ್ಞನರ ಒಂದು ತಂಡ ಕಳುಹಿಸಿ, ಮಾನಸಿಕ ಚಿಕಿತ್ಸೆ ಅಗತ್ಯವಿರುವವರಿಗೆ ಸಮಾಲೋಚನೆ ನೀಡುತ್ತಾರೆ. ತಿಂಗಳಿನ ಮೊದಲ ಮಂಗಳವಾರ ನಂಜನಗೂಡು, ಮೊದಲ ಶುಕ್ರವಾರ ಬನ್ನಿಮಂಟಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಎರಡನೇ ಮಂಗಳವಾರ ತಿ.ನರಸೀಪುರ, ಎರಡನೇ ಶುಕ್ರವಾರ ಎಚ್.ಡಿ.ಕೋಟೆ, ಮೂರನೇ ಮಂಗಳವಾರ ಹುಣಸೂರು, ಮೂರನೇ ಶುಕ್ರವಾರ ಪಿರಿಯಾಪಟ್ಟಣ, ನಾಲ್ಕನೇ ಮಂಗಳವಾರ ಸರಗೂರು ಮತ್ತು ಕೆ.ಆರ್.ನಗರದಲ್ಲಿ ‘ಮನೋಚೈತನ್ಯ ಕ್ಲಿನಿಕ್’ ಕಾರ್ಯನಿರ್ವಹಿಸಲಿದೆ. ಇಲ್ಲಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿಯನ್ನು ಮೂಡಿಸಲಾಗುತ್ತದೆ. ಮನೋಚೈತನ್ಯ ಕ್ಲಿನಿಕ್‌ನಲ್ಲಿ ೨೦೨೧-೨೨ನೇ ಸಾಲಿನಲ್ಲಿ ೧,೬೩೨ ಮತ್ತು ೨೦೨೨-೨೩ನೇ ಸಾಲಿನಲ್ಲಿ ೧,೨೩೭ (ಏಪ್ರಿಲ್‌ಯಿಂದ ಸೆಪ್ಟೆಂಬರ್) ಮಂದಿ ಚಿಕಿತ್ಸೆ ಪಡೆದಿದ್ದಾರೆ.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ಇತರೆ ಚಟುವಟಿಕೆಗಳು
*ಶಾಲಾ-ಕಾಲೇಜುಗಳಲ್ಲಿ ಮಾನಸಿಕ ಆರೋಗ್ಯದ ಅರಿವು ಕಾರ್ಯಕ್ರಮ.
* ಬೀದಿ ನಾಟಕಗಳನ್ನು ಮಾಡುವ ಮೂಲಕ ಸಾರ್ವಜನಿಕರಲ್ಲಿ ಮಾನಸಿಕ ಆರೋಗ್ಯದ ಅರಿವು ಮೂಡಿಸುವುದು.
*ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉಚಿತ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆ.
* ಸರ್ಕಾರದ ವಿವಿಧ ಇಲಾಖಾ ಸಿಬ್ಬಂದಿಗಳಿಗೆ ಪ್ರತಿವರ್ಷ ಒತ್ತಡ ನಿರ್ವಹಣೆಯ ಕುರಿತು ತರಬೇತಿ ಕಾರ್ಯಕ್ರಮ.

ಮಾನಸಿಕ ಅನಾರೋಗ್ಯಕ್ಕೆ ಕಾರಣಗಳೇನು?:
ಪ್ರಪಂಚದಾದ್ಯಂತ ಎಂಟು ಜನರಲ್ಲಿ ಒಬ್ಬರು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೇಶದಲ್ಲಿ ಖಿನ್ನತೆ ಮತ್ತು ಆತಂಕದ ಸಮಸ್ಯೆಯ ಪ್ರಕರಣಗಳು ಶೇ.೩೪ರಷ್ಟು, ಸ್ಕಿೋಫ್ರೆನಿಯಾ(ಬುದ್ಧಿ ಭ್ರಮಣೆ), ದಂತ ಗಂಭೀರ ಮಾನಸಿಕ ಸಮಸ್ಯೆಯ ಪ್ರಕರಣಗಳು ಶೇ.೧೮.೪ರಷ್ಟು, ಮದ್ಯ ವ್ಯಸನದಿಂದ ಆಗುವ ಮಾನಸಿಕ ಸಮಸ್ಯೆಯ ಪ್ರಕರಣಗಳು ಶೇ.೧೧.೨ ಹೀಗೆ ಅನೇಕ ಸಮಸ್ಯೆಗಳಿಂದ ದೇಶದಾದ್ಯಂತ ೧.೬೪ ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒತ್ತಡದ ಜೀವನದ ಘಟನೆಗಳು, ಜೈವಿಕ ಅಂಶಗಳು, ವೈಯಕ್ತಿಕ ಅಂಶಗಳು, ಸಾಮಾಜಿಕ ಅಂಶಗಳು, ಬಾಲ್ಯದಲ್ಲಿನ ಪ್ರತಿಕೂಲ ಜೀವನ ಅನುಭವಗಳು ಮಾನಸಿಕ ಅನಾರೋಗ್ಯಕ್ಕೆ ಕಾರಣಗಳಾಗಿವೆ.


ಮಾನಸಿಕ ಆರೋಗ್ಯವಂತ ವ್ಯಕ್ತಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವನ್ನು ಹೊಂದಿರಬೇಕು. ಇವೆರಡು ಒಂದಕ್ಕೊಂದು ಸಂಬಂಧವನ್ನು ಹೊಂದಿವೆ. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ವಿವಿಧ ಚಟುವಟಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮನೋಚೈತನ್ಯ ಯೋಜನೆ ಮೂಲಕ ಜಾಗೃತಿ ಮೂಡಿಸುವ ಜೊತೆಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅಗತ್ಯವಿದ್ದವರು ಸದ್ಬಳಸಿಕೊಳ್ಳಬಹುದು. ಮಾನಸಿಕ ಆರೋಗ್ಯ ಸಹಾಯವಾಣಿ ೧೦೪ ಅನ್ನು ಸಂಪರ್ಕಿಸಬಹುದು.
ಡಾ.ಮಂಜುಪ್ರಸಾದ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ, ಮೈಸೂರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ