ಅರಣ್ಯ ಇಲಾಖೆ ಅಧಿಕಾರಿಗಳು ಕ್ಷೇತ್ರಕ್ಕೆ ಹೋಗಲು ಮುಖ್ಯಮಂತ್ರಿ ತಾಕೀತು
ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಮಲೈ ಮಹದೇಶ್ವರ ಹುಲಿ ಯೋಜನೆಗೆ ಸದ್ಯವೇ ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ವನ್ಯಜೀವಿ ಮಂಡಳಿ ಸಭೆಗೆ ತಿಳಿಸಿದರು.
ಬೆಂಗಳೂರಿನಲ್ಲಿ ಗುರುವಾರ ನೆಡದ ವನ್ಯಜೀವಿ ಮಂಡಳಿಯ ೧೬ನೇ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಮಂಡಳಿ ಸದಸ್ಯ ಬಿ.ಆರ್.ಮಲ್ಲೇಶಪ್ಪ ಅವರಿಗೆ ಸಿಎಂ ಅವರು ಈ ಉತ್ತರ ನೀಡಿದರು.
ಮಲೈಮಹದೇಶ್ವರ ಹುಲಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಈಗಾಗಲೇ ಮಂಡಳಿಯೂ ಒಪ್ಪಿಗೆ ನೀಡಿ ರಾಜ್ಯ ಸಚಿವ ಸಂಪುಟವೂ ಅನುಮೋದನೆ ನೀಡಿದೆ. ಆದೇಶ ಮಾತ್ರ ಜಾರಿಯಾಗಬೇಕಾಗಿದೆ ಎಂದು ಮಲ್ಲೇಶಪ್ಪ ಅವರು ಸಿಎಂ ಗಮನಕ್ಕೆ ತಂದರು.
ಈ ಬಗ್ಗೆ ನನಗೆ ಎಲ್ಲವೂ ತಿಳಿದಿದೆ. ನಮ್ಮ ಸಚಿವ ಸೋಮಣ್ಣ ಅವರಿಗೆ ವನ್ಯಜೀವಿಗಳ ಬಗ್ಗೆ ಕಾಳಜಿ ಇರುವುದರಿಂದ ವಿಳಂಬವಾಗುತ್ತಿದೆ. ಅವರಿಗೆ ಕೆಲ ವಿಚಾರ ಅರ್ಥವಾಗಿಲ್ಲ. ಆದಷ್ಟು ಬೇಗನೇ ಈ ಕುರಿತು ಅಧಿಸೂಚನೆ ಹೊರಡಿಸಲಾಗುವುದು. ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ದೃಷ್ಟಿಯಿಂದ ಯೋಜನೆ ಜಾರಿ ಮುಖ್ಯ ಎಂದು ಸಿಎಂ ತಿಳಿಸಿದರು.
ಅರಣ್ಯ ಇಲಾಖೆಯ ೪೦ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು ಬೆಂಗಳೂರಿನಲ್ಲಿದ್ದೀರಿ. ಬರೀ ಕಚೇರಿಯಲ್ಲೇ ಕೂಡದೇ ಕ್ಷೇತ್ರಗಳಿಗೆ ಹೋಗಿ. ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸಿ ಎಂದು ಸಲಹೆ ನೀಡಿದರು.
ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಸ್ಥಗಿತಗೊಳಿಸಿ. ಎಲ್ಲಾ ೩೦ ಕ್ರಷರ್‌ಗಳಿಗೆ ನೊಟೀಸ್ ನೀಡಿ. ಕಪ್ಪತ್ತಗುಡ್ಡದಲ್ಲಿ ಸೂಕ್ಷ್ಮ ಪರಿಸರ ವಲಯ ಆದೇಶವಾಗಿರುವುರಿಂದ ೧೦ ಕಿ.ಮಿ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆಗೆ ಅವಕಾಶವಿಲ್ಲ ಎಂದು ಸೂಚಿಸಿದರು.
ಸಭೆಯಲ್ಲಿ ಅರಣ್ಯ ನಿಗಮದ ಅಧ್ಯಕ್ಷೆ ತಾರಾ ಅನುರಾಧ, ಮಂಡಳಿ ಸದಸ್ಯ ವಿನೋದ್‌ಕುಮಾರ್ ಬಿ. ನಾಯ್ಕ, ಹಿರಿಯ ಅಧಿಕಾರಿಗಳಾದ ಜಾವೇದ್ ಅಖ್ತರ್, ಆರ್.ಕೆ.ಸಿಂಗ್, ವಿಜಯಕುಮಾರ್ ಗೋಗಿ, ಸಂಜಯ್ ಬಿಜ್ಜೂರ್, ಶಾಶ್ವತಿ ಮಿಶ್ರ ಮತ್ತಿತರರು ಹಾಜರಿದ್ದರು.