Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಹಿರಿಮೆ- ಗರಿಮೆ

ದೇಶ- ವಿದೇಶಗಳಲ್ಲಿ ಇರುವ ಕನ್ನಡ ಮನಸ್ಸುಗಳ ಬೆಸೆಯುವ ವೇದಿಕೆ

–  ಅರುಣ್ ಜಾವಗಲ್, ರಾಜ್ಯ ಸಂಘಟನಾ ಕಾರ್ಯದರ್ಶಿ,
ಕರ್ನಾಟಕ ರಕ್ಷಣಾ ವೇದಿಕೆ

ಮನರಂಜನೆ ಕ್ಷೇತ್ರದ ವಿಚಾರದಲ್ಲೂ ಜಾಲತಾಣಗಳ ಪಾತ್ರ ಗಣನೀಯ ಪ್ರಮಾಣದಲ್ಲೇ ಇದೆ. ಒಟಿಟಿ, ನೆಟ್‌ಫ್ಲಿಕ್ಸ್ ನಂತಹ ಜಾಲತಾಣಗಳ ಮೂಲಕ ಜನರು ಮನೆಯಲ್ಲೇ ಕುಳಿತು ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಅಮೆರಿಕದಲ್ಲಿರುವ ಕನ್ನಡಿಗ, ಬೇಕೆಂದರೆ ತನ್ನ ಮನೆಯಲ್ಲೇ ಕುಳಿತು ಕನ್ನಡ ಚಿತ್ರವನ್ನು ನೋಡಬಹುದು.

ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ, ನೆಲ, ಜಲ ಪರವಾದ ಬಹುತೇಕ ಅಭಿಯಾನಕ್ಕೆ ಸಾಮಾಜಿಕ ಜಾಲತಾಣಗಳೇ ಉಗಮ ಸ್ಥಾನಗಳಾಗಿವೆ ಎಂದರೆ ತಪ್ಪಾಗಲಾರದು. ಕೇಂದ್ರ ಸರ್ಕಾರದ ಹಿಂದಿ ಭಾಷೆ ಹೇರಿಕೆ ನಿರ್ಧಾರದ ವಿರುದ್ಧ ಕನ್ನಡಿಗರ ಹೋರಾಟಕ್ಕೆ ಹೆಚ್ಚು ಬೆಂಬಲ ಸಿಕ್ಕಿದ್ದು, ಅಂತರ್ಜಾಲ, ಸಾಮಾಜಿಕ ಜಾಲತಾಣಗಳಲ್ಲಿ ಎಂಬುದು ಗಮನಾರ್ಹ.
ಕಳೆದ ೧೦- ೧೫ ವರ್ಷಗಳಿಂದ ಕರ್ನಾಟಕದ ಹೊರಗೆ ಅನ್ಯ ರಾಜ್ಯ, ವಿದೇಶಗಳಲ್ಲಿರುವ ಕನ್ನಡಿಗರ ಭಾವನೆಗಳನ್ನು ಬೆಸೆಯಲು ಜಾಲತಾಣ ದೊಡ್ಡ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸುಮಾರು ೨೦ ವರ್ಷಗಳ ಹಿಂದೆ ಕನ್ನಡಿಗರು ಬೇರೆ ದೇಶಕ್ಕೆ ಹೋದರೆ ಮುಗಿಯಿತು, ಬಹುತೇಕ ಅವರ ಮತ್ತು ಕನ್ನಡದ ನಡುವಿನ ಸಂಬಂಧ ಹರಿದು ಹೋದಂತೆ ಎಂಬಂತಹ ಪರಿಸ್ಥಿತಿ ಇತ್ತು. ಈಗ ಅದು ಸಕಾರಾತ್ಮಕವಾಗಿ ಬದಲಾಗಿದೆ. ಯಾವುದೇ ದೇಶಕ್ಕೆ ಹೋದರೂ ಅಲ್ಲಿಯೇ ಕುಳಿತು ಕನ್ನಡ ಭಾಷೆಯ ಬೆಳವಣಿಗೆ, ವೈವಿಧ್ಯತೆಯನ್ನು ಕ್ಷಣ ಕ್ಷಣವೂ ಗ್ರಹಿಸಬಹುದು. ಸಿಬ್ಬಂದಿ ಆಯ್ಕೆ ಆಯೋಗ (ಎಸ್‌ಎಸ್‌ಸಿ) ಪರೀಕ್ಷೆಯಲ್ಲಿ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಉತ್ತರಿಸಲು ಮಾತ್ರ ಅವಕಾಶ ನೀಡಿ, ಕನ್ನಡವನ್ನು ಕಡೆಗಣಿಸಿದಾಗ ಜಾಲತಾಣಗಳಲ್ಲಿ ಕನ್ನಡಿಗರು ತಿರುಗಿಬಿದ್ದ ಪರಿ ಅನೂಹ್ಯ.
ಇನ್ನು ಗ್ರಾಹಕರಿಗೆ ವಿವಿಧ ಸೇವೆ ಒದಗಿಸುವ ಖಾಸಗಿ ಕಂಪೆನಿಗಳಲ್ಲಿ ಕೂಡ ಕನ್ನಡ ಭಾಷೆಗೆ ಅವಕಾಶ ಸಿಕ್ಕಿದೆ. ಅದಕ್ಕೆ ಜಾಲತಾಣದಲ್ಲಿ ಕನ್ನಡ ಕಸ್ತೂರಿ ಘಮಲು ಹರಡಿರುವುದು ಕಾರಣ. ರಾಜ್ಯದಿಂದ ವಿದೇಶಕ್ಕೆ ತೆರಳುವ ಅಥವಾ ಅಲ್ಲಿಂದ ಆಗಮಿಸುವ ಬಹುತೇಕ ವಿಮಾನಗಳಲ್ಲಿ ಪ್ರಯಾಣಿಕರ ಸುರಕ್ಷತೆ ಹಾಗೂ ಮತ್ತಿತರ ಸೂಚನೆ ಕನ್ನಡದಲ್ಲಿ ಕೂಡ ಇರುತ್ತದೆ ಎಂಬುದು ಹೆಮ್ಮೆಯ ಸಂಗತಿ. ಅದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡದ ಅಗಾಧ ಹರಿವಿನ ದ್ಯೋತಕವಾಗಿದೆ ಎನ್ನಬಹುದು.
ಬೇರೆ ದೇಶಗಳಲ್ಲಿರುವ ಕನ್ನಡ ಪರ ಮನಸ್ಸುಗಳು ಒಂದಾಗಲು ಕೂಡ ಈ ಜಾಲತಾಣಗಳು ಕಾರಣವಾಗಿದೆ. ಉದಾರಹಣೆ ನೀಡುವುದಾದರೆ ನನಗೆ ಮೈಸೂರು ಮತ್ತು ಗುಲಬರ್ಗಾ ಜಿಲ್ಲೆಗಳಲ್ಲಿ ಕನಿಷ್ಠ ತಲಾ ೫೦೦ ಮಂದಿ ಕನ್ನಡಿಗರು ಸಂಪರ್ಕಕ್ಕೆ ಬಂದಿದ್ದರು. ಆಗ ನಾನು ವಿದೇಶದಲ್ಲಿದ್ದ ಸಂದರ್ಭ. ಈಗ ಕೂಡ ಆ ಬಾಂಧವ್ಯಗಳು ಮುಂದುವರಿದಿವೆ. ಅಲ್ಲದೆ, ಜಾಲತಾಣಗಳು ಕನ್ನಡಿಗರು ಅಥವಾ ಕನ್ನಡ ಭಾಷೆ ಇತರೆ ಭಾಷೆಗಳೊಂದಿಗೆ ಕೆಲಸ ಮಾಡುವುದಕ್ಕೂ ದಾರಿಯಾಗಿವೆ. ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ನಾನು ಮಾಡಿದ್ದ ಟ್ವೀಟ್ ಅನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಮತ್ತು ಮಾಜಿ ಸಂಸದರಾದ ಕನಿಮೋಳಿ ಅವರು ಟ್ಯಾಗ್ ಮಾಡಿ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದರು. ಅದು ಸಮಾನ ಮನಸ್ಸಿನ ಎಲ್ಲ ಭಾಷಿಕರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕೂಡ ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳು ಕೆಲಸ ಮಾಡುತ್ತಿವೆ.
ಸುಮಾರು ೧೫ ದಿನಗಳ ಹಿಂದೆ ಕೋಲ್ಕತ್ತದಲ್ಲಿ ಪ್ರತಿಭಟನೆ ನಡೆದಾಗ ರಾಷ್ಟ್ರಕವಿ ಕುವೆಂಪು ಅವರ ಕವಿತೆಯ ಸಾಲುಗಳನ್ನು ಪ್ರದರ್ಶಿಸಿದರು. ಹೊರ ರಾಜ್ಯಕ್ಕೂ ಕನ್ನಡದ ಕಂಪು ಪಸರಿಸಿದೆ ಎಂಬುದು ಕನ್ನಡಿಗರೆಲ್ಲರೂ ಹೆಮ್ಮೆಪಡುವಂತಹ ವಿಚಾರ. ಇದು ಕೂಡ ಸಾಮಾಜಿಕ ಜಾಲತಾಣಗಳ ಕೊಡುಗೆ.
ಅಂತರ್ಜಾಲ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಅಭಿಯಾನಗಳು ಬೀದಿ ಪ್ರತಿಭಟನೆಗಳಿಗಿಂತ ಹೆಚ್ಚು ಜನರನ್ನು ಒಳಗೊಳ್ಳುತ್ತಿವೆ. ಸಾಮಾನ್ಯವಾಗಿ ನೇರ ಪ್ರತಿಭಟನೆಗಳಲ್ಲಿ ಇಂಜಿನಿಯರ್, ವೈದ್ಯರು, ವಕೀಲರು ಇತ್ಯಾದಿ ವಲಯಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಆದರೆ, ಜಾಲತಾಣಗಳಲ್ಲಿ ಎಲ್ಲ ವಲಯಗಳೂ ಮುಗಿಬಿದ್ದು ತಮ್ಮ ಪ್ರತಿರೋಧವನ್ನು ದಾಖಲಿಸುತ್ತಿವೆ. ಯಾವುದೇ ಬೇಡಿಕೆಗಳ ಹೋರಾಟದಲ್ಲಿ ಸಂಬಂಧಪಟ್ಟ ವಲಯದವರು ಮಾತ್ರ ಭಾಗವಹಿಸುತ್ತಾರೆ. ಜಾಲತಾಣಗಳಲ್ಲಿ ಶುರುವಾಗುವ ಅಭಿಯಾನಕ್ಕೆ ಎಲ್ಲ ವರ್ಗದವರೂ ಕೈಜೋಡಿಸುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು. ಸಾಮಾಜಿಕ ಜಾಲತಾಣಗಳು ಬೀದಿ ಹೋರಾಟಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂಬುದು ಕೂಡ ನಿಜ.
ಇನ್ನು ರಾಜಕೀಯ ವಲಯದಲ್ಲಿ ಸಾಮಾಜಿಕ ಜಾಲತಾಣ ಪರಿಚಯವಾದಂತೆ ಸಂಚಲನವೇ ಸೃಷ್ಟಿಯಾಗಿದೆ ಎನ್ನಬಹುದು. ಬಿಸಿಲು, ಮಳೆ, ಗಾಳಿಯಲ್ಲಿ ಪ್ರತಿಭಟನೆ ನಡೆಸಿದರೂ, ಅವುಗಳಿಗೆ ಜನಪ್ರತಿನಿಧಿಗಳು ಅಥವಾ ವಿರೋಧ ಪಕ್ಷಗಳವರು ಸ್ಪಂದಿಸುವುದು ಕಷ್ಟ. ಆದರೆ, ಜಾಲತಾಣದಲ್ಲಿ ಯಾವುದೇ ವಿಷಯದ ಅಭಿಯಾನ ಆರಂಭವಾದರೆ ಸಾಕು, ರಾಜಕಾರಣಗಳ ಸ್ಪಂದನೆ ಬೃಹತ್ ಪ್ರಮಾಣದಲ್ಲಿ ವ್ಯಕ್ತವಾಗುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ