ಹನೂರು: ನೂತನ ತಾಲ್ಲೂಕು ಕೇಂದ್ರದಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡುತ್ತಿರುವುದು ಸಂತಸದ ವಿಚಾರ ಎಂದು ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ ಸೋಮಣ್ಣ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಭವನ ನಿರ್ಮಾಣ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದ ಅವರು ಪತ್ರಕರ್ತರು ಸಮಾಜದ ನಾಲ್ಕನೇ ಪ್ರಮುಖ ಅಂಗ,ಸಮಾಜದಲ್ಲಿನ ಅಂಕುಡೊಂಕು ತಿದ್ದುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾದುದು. ಚಾ. ನಗರ ಜಿಲ್ಲಾ ಕೇಂದ್ರ ಹೊರತುಪಡಿಸಿ ಯಾವುದೇ ತಾಲ್ಲೂಕು ಕೇಂದ್ರಗಳಲ್ಲಿ ಪತ್ರಕರ್ತರ ಭವನ ಇರಲಿಲ್ಲ, ನೂತನ ಹನೂರು ತಾಲೂಕಿನಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಿಕೊಳ್ಳುತ್ತಿರುವುದು ಸಂತಸದ ವಿಚಾರ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರವರ ಜೊತೆ ಚರ್ಚೆ ನಡೆಸಿ ಆದಷ್ಟು ಬೇಗ ಭವನ ಕಾಮಗಾರಿಗೆ ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ. ಇದಲ್ಲದೆ ವೈಯಕ್ತಿಕವಾಗಿ ಭವನ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ(ರಿ) ಹನೂರು ತಾಲ್ಲೂಕು ವತಿಯಿಂದ ಸಚಿವ ವಿ. ಸೋಮಣ್ಣ ರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವ ಅಧ್ಯಕ್ಷ ದೇವರಾಜ್ ನಾಯ್ಡು, ಅಧ್ಯಕ್ಷ ಮಹಾದೇಶ್ ಎಂ ಹಾಗೂ ಪದಾಧಿಕಾರಿಗಳು ಹಾಜರಿದ್ದರು