Mysore
20
overcast clouds

Social Media

ಶುಕ್ರವಾರ, 02 ಜನವರಿ 2026
Light
Dark

ಕೊಡಗಿನ ದೇವಾಲಯಗಳಲ್ಲಿ ಸರಣಿ ಕಳವು

ಘಂಟೆ ಮಾತ್ರ ಕಳವಾಗುತ್ತಿರುವ ಬಗ್ಗೆ ಅಖಿಲ ಕೊಡವ ಸಮಾಜ ಯೂತ್‌ ವಿಂಗ್ ಆತಂಕ.

ಮಡಿಕೇರಿ: ಕೊಡಗು ಜಿಲ್ಲೆಯ ದೇವಸ್ಥಾನಗಳಲ್ಲಿ ಇದೀಗ ಘಂಟೆಗಳ ಸದ್ದು ಪೊಲೀಸರ ನಿದ್ದೆ ಕೆಡಿಸಿದ್ದು, ಒಂದು ವಾರದೊಳಗೆ ಒಂದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರೋಬ್ಬರಿ ನಾಲ್ಕು ದೇವಸ್ಥಾನಗಳಲ್ಲಿ ಘಂಟೆಗಳು ಕಳ್ಳತನವಾಗಿದೆ. ಮಾತ್ರವಲ್ಲ ತಿಂಗಳು ತುಂಬುವ ಹೊತ್ತಿಗೆ ಇದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ದೇವಸ್ಥಾನಗಳಲ್ಲಿ ಕಳ್ಳತನ ನಡೆದಿದ್ದು, ದೇವಸ್ಥಾನದ ಹುಂಡಿಗಳನ್ನು ಬಿಟ್ಟು ಕೇವಲ ಘಂಟೆಗಳನ್ನು ಮಾತ್ರ ಕಳ್ಳತನ ಮಾಡಿರುವ ಬಗ್ಗೆ ಅಖಿಲ ಕೊಡವ ಸವಾಜದ   ಯೂತ್‌ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಜಿಲ್ಲೆಯ ಹಲವೆಡೆ ದೇವಸ್ಥಾನಗಳಲ್ಲಿ ಘಂಟೆ ಕಳ್ಳತನವಾಗುತ್ತಿದ್ದು, ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ  ಸರಹದ್ದಿನಲ್ಲಿಯೇ ಒಂದು ವಾರದೊಳಗೆ ನಾಲ್ಕು ದೇವಸ್ಥಾನಗಳಲ್ಲಿ ಘಂಟೆಗಳು ಕಳ್ಳತನವಾಗಿದೆ.

ಒಂದು ತಿಂಗಳ ಹಿಂದೆ ಇದೇ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಕಳ್ಳತನ ಸೇರಿದಂತೆ ಒಟ್ಟು ಐದು ದೇವಸ್ಥಾನಗಳಲ್ಲಿಯೂ ಕೂಡ ಕೇವಲ ಗಂಟೆಗಳನ್ನು ಮಾತ್ರ ಕಳ್ಳತನ ಮಾಡಿದ್ದಾರೆ. ಇದರ ಉದ್ದೇಶ ಏನೂ ಎಂದು ಅರ್ಥ ಆಗುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಪೊನ್ನಂಪೇಟೆ ಠಾಣಾ ವ್ಯಾಪ್ತಿಯ  ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳೂರು ಕಲ್ಲುಗುಡಿ ಈಶ್ವರ ದೇವಸ್ಥಾನದಲ್ಲಿ 5 ಕಂಚಿನ ಘಂಟೆ ಹಾಗೂ ಬೆಸಗೂರು ಗ್ರಾಮದ ಮಹಾದೇವರ ದೇವಸ್ಥಾನ ಮತ್ತು ದುರ್ಗಿ ದೇವಸ್ಥಾನ ಎರಡು ಸೇರಿ 21ಕಂಚಿನ ಘಂಟೆಗಳು ಕಳ್ಳತನವಾಗಿವೆ. ಪೊಲೀಸರು ಇದರ ಹುಡುಕಾಟದಲ್ಲಿ ಇರುವಾಗಲೇ ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟುವಿನಲ್ಲಿ ಸುಮಾರು 900 ವರ್ಷಕ್ಕೂ ಹಿಂದಿನ ಇತಿಹಾಸವಿರುವ ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಮಧ್ಯರಾತ್ರಿ 2.15 ಕ್ಕೆ ಕಳ್ಳರು ನುಗ್ಗಿದ್ದು10 ಘಂಟೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ದೇವಸ್ಥಾನದ ಆಡಳಿತ ಮಂಡಳಿ ದೂರಿನ ಮೇರೆ ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಹಾಗೂ ಗೋಣಿಕೊಪ್ಪಲು ವೃತ್ತ ನಿರೀಕ್ಷಕರನೊಳಗೊಂಡ ತಂಡ ಸೇರಿದಂತೆ ಜಿಲ್ಲಾ ಅಪರಾಧ ದಳದ ತಂಡ ಸೇರಿದಂತೆ ವಿರಾಜಪೇಟೆ ಡಿವೈಎಸ್ಪಿ ಹಾಗೂ ಜಿಲ್ಲೆಯ ವಿವಿಧ ಪೊಲೀಸ್ ಅಧಿಕಾರಿಗಳ ತಂಡವೇ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ದ.ಕೊಡಗಿನಲ್ಲಿ ಘಂಟೆ ಕಳವು

ಫೆಬ್ರವರಿಯಲ್ಲಿ ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯ  ಮಾಯಮುಡಿ ಶ್ರೀ ಕಮಟೆ ಮಹಾದೇವರ ದೇವಸ್ಥಾದಲ್ಲಿ ಅಳವಡಿಸಲಾಗಿದ್ದ 105ಕೆ.ಜಿ. ತೂಕದ ಘಂಟೆಯನ್ನು ಕಳವು ಮಾಡಿದ್ದು, ರಾತ್ರಿ ಹೊತ್ತು ಬಂದ ಕಳ್ಳರು ದೇವಸ್ಥಾನದಲ್ಲಿ ಅಳವಡಿಸಿದ ಸಿ.ಸಿ.ಕ್ಯಾಮೆರಾವನ್ನು ತಿರುಗಿಸಿ ಕಳ್ಳತನ ಮಾಡಿ ಘಂಟೆಯನ್ನು ಕೊಂಡೊಯ್ದಿದ್ದಾರೆ ಎನ್ನಲಾಗಿದೆ.

 ಇದಾದ ಆರು ತಿಂಗಳ ಬಳಿಕ ನಾಪೋಕ್ಲುವಿನ ಮಕ್ಕಿ ಶಾಸ್ತಾವು ದೇವರ ಸನ್ನಿಧಿಯಲ್ಲಿ ಬೃಹತ್ ಗಾತ್ರದ ಘಂಟೆಗಳನ್ನು ಕಳ್ಳತನ ಮಾಡುವ ಮೂಲಕ ಆರಂಭವಾದ ಘಂಟೆಗಳ ಕಳ್ಳತನ ಇದೀಗ ದಕ್ಷಿಣ ಕೊಡಗಿನಲ್ಲಿ ಬಹಳ ಸದ್ದು ಮಾಡುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!