ಬೆಂಗಳೂರು : ಅಪ್ಪು ಕನಸಿನ ‘ಗಂಧದ ಗುಡಿ’ ಅವರು ಕನ್ನಡ ನಾಡಿಗೆ ನೀಡಿರುವ ಮತ್ತೊಂದು ಅಮೂಲ್ಯ ಕೊಡುಗೆ. ನಮ್ಮ ಕರುನಾಡಿನ ಪ್ರಕೃತಿ ಸಂಪತ್ತು, ವನ್ಯ ಜೀವಸಂಕುಲದ ಬಗ್ಗೆ ಅತ್ಯುತ್ತಮ ಸಂದೇಶ ರವಾನಿಸಿದ್ದಾರೆ. ಸ್ಟಾರ್ ನಟನಾಗಿದ್ದರೂ ದಟ್ಟ ಕಾನನ, ಬೆಟ್ಟಗುಡ್ಡಗಳಲ್ಲಿ ಅಪಾಯವನ್ನು ಲೆಕ್ಕಿಸದೆ ಚಿತ್ರೀಕರಣ ಮಾಡಿರುವುದು ಆದರ್ಶನೀಯ ಎಂದು ಮಾಜಿ ಮೇಯರ್ ಹಾಗೂ ಚಲನಚಿತ್ರ ನಿರ್ಮಾಪಕ ಸಂದೇಶ ಸ್ವಾಮಿ ಅವರು ಸಿನಿಮಾ ಕುರಿತು ಸಂತಸವನ್ನು ವ್ಯಕ್ತಪಡಿಸಿದ್ದಾರೆ. ಮುಂದುವರಿದು ಗಂಧದ ಗುಡಿ ಸಿನಿಮಾ ಅದ್ಬುತವಾಗಿ ಮೂಡಿ ಬಂದಿರುವ ಈ ಚಿತ್ರವನ್ನು ಪ್ರತಿಯೊಬ್ಬರೂ ವೀಕ್ಷಿಸಲೇಬೇಕು. ಅದರಲ್ಲೂ ಮಕ್ಕಳು, ಯುವ ಸಮುದಾಯ ತಪ್ಪದೆ ನೋಡಬೇಕು. ಸಾಧ್ಯವಾದರೆ ಸರ್ಕಾರದ ಮೂಲಕ ಥಿಯೇಟರ್ ಗಳನ್ನು ಬುಕ್ ಮಾಡಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಡಬೇಕು. ಇದನ್ನು ಶೈಕ್ಷಣಿಕ ಚಟುವಟಿಕೆಯಾಗಿ ಪರಿಗಣಿಸಿ ಕೂಡಲೇ ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ.