Mysore
26
haze

Social Media

ಗುರುವಾರ, 01 ಜನವರಿ 2026
Light
Dark

ಮಕ್ಕಳಿಂದಲೇ ಮಾದಕ ವಸ್ತು ಮಾರಾಟ!

ಮೈಸೂರು: ಬೃಹತ್ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಾಲ್ವರ ಹೆಡೆಮುರಿ ಕಟ್ಟಿದ್ದು, ವಿಚಾರಣೆ ವೇಳೆ ಆರೋಪಿಗಳು ಬಹಿರಂಗಪಡಿಸಿರುವ ಮಾಹಿತಿ ಪೊಲೀಸರ ನಿದ್ದೆಗೆಡಿಸಿದೆ. ಏಕೆಂದರೆ ಮಾದಕ ವಸ್ತುಗಳ ಮಾರಾಟ ಮಕ್ಕಳ ಮೂಲಕವೇ ಹೆಚ್ಚು ನಡೆಯುತ್ತಿದೆ.

ಅದೊಂದು ದೊಡ್ಡ ಮಟ್ಟದ ಕಾರ್ಯಾಚರಣೆ. ಕಳೆದ ಎರಡು ತಿಂಗಳ ಹಿಂದೆ ಉತ್ತರ ಭಾರತದ ಕಡೆಯಿಂದ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಮೈಸೂರಿಗೆ ರವಾನೆಯಾಗಿದೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಬಂದಿತ್ತು. ಕೂಡಲೇ ಕಾರ್ಯಪ್ರೌತ್ತರಾದ ಸಿಸಿಬಿ ಪೊಲಿಸರ ತಂಡ ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ ನೀಡಿ ಆರೋಪಿಗಳ ಬಂಧನಕ್ಕೆ ತಂಡ ರಚಿಸಿ ಮೈಸೂರು ಸುತ್ತಮುತ್ತ ಸಣ್ಣ ಮಟ್ಟದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಹತ್ತಾರು ಮಂದಿಯನ್ನು ವಶಕ್ಕೆ ಪಡೆದು ಅವರಿಗೆ ತಮ್ಮದೇ ಆದ ರೀತಿಯಲ್ಲಿ ಪಾಠ ಹೇಳಿದ ಪೊಲೀಸರು ಮೈಸೂರಿಗೆ ರವಾನೆಯಾಗಿರುವ ಗಾಂಜಾದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ.

ಉತ್ತರ ಭಾರತದ ಕಡೆಯಿಂದ ರವಾನೆಯಾಗಿದ್ದ ಗಾಂಜಾವನ್ನು ಪಾಳುಬಿದ್ದ ಕಟ್ಟಡವೊಂದರಲ್ಲಿ ಅಡಗಿಸಿಡಲಾಗಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಸಿಸಿಬಿ ಪೊಲೀಸರ ತಂಡ, ಕಟ್ಟಡದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆದರೆ, ತಕ್ಷಣವೇ ಗಾಂಜಾವನ್ನು ವಶಕ್ಕೆ ಪಡೆಯಲು ಮುಂದಾಗಲಿಲ್ಲ. ಕಾರಣ ಈ ಜಾಲವನ್ನು ಸಂಪೂರ್ಣ ಪತ್ತೆಹಚ್ಚಬೇಕಾಗಿತ್ತು. ಪ್ರಕರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮತ್ತಷ್ಟು ಜನರ ಹೆಡೆಮುರಿ ಕಟ್ಟಿದ್ದಾರೆ. ಅವರು ನೀಡಿದ ಮಾಹಿತಿ ಮೇರೆಗೆ ನಾಲ್ವರನ್ನೂ ಬಂಧಿಸಿದ್ದಾರೆ. ಬಂಧಿತರನ್ನು ವಿಚಾರಣೆಗೊಳಪಡಿಸಿದಾಗ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ಮಕ್ಕಳೇ ಮದ್ಯವರ್ತಿಗಳು: ಗಾಂಜಾವನ್ನು ವ್ಯಸನಿಗಳಿಗೆ ತಲುಪಿಸಲು ಆರೋಪಿಗಳು ಮಕ್ಕಳನ್ನು ಬಳಸುತ್ತಿದ್ದುದು ವಿಚಾರಣೆ ವೇಳೆ ಬಹಿರಂಗವಾಗಿದೆ. ೧೦ರಿಂದ ೧೩ ವರ್ಷದ ಮಕ್ಕಳ ಕೈಯಲ್ಲಿ ಗಾಂಜಾ ಪೊಟ್ಟಣಗಳನ್ನು ನೀಡುತ್ತಿದ್ದರು. ನಂತರ ವ್ಯಸನಿಗಳನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಮಕ್ಕಳು ನಿಂತಿರುವ ಜಾಗವನ್ನು ತಿಳಿಸುತ್ತಿದ್ದರು. ಅಲ್ಲಿಗೆ ತೆರಳುತ್ತಿದ್ದ ವ್ಯಸನಿಗಳು ಮಕ್ಕಳ ಕೈಯಲ್ಲಿ ಗಾಂಜಾ ಕೊಟ್ಟವರ ಹೆಸರನ್ನು ಸರಿಯಾಗಿ ಹೇಳಿ ಗಾಂಜಾ ಪೊಟ್ಟಣವನ್ನು ಪಡೆಯುತ್ತಿದ್ದರು. ಇದಕ್ಕಾಗಿ ಮಕ್ಕಳಿಗೆ ೧೦೦ ರೂ.ನಿಂದ ೨೦೦ ರೂ. ಹಣ ನೀಡುತ್ತಿದ್ದರು. ಇದಕ್ಕೂ ಮೊದಲೇ ಮಾರಾಟಗಾರರು ತಮಗೆ ಸೇರಬೇಕಾದ ಹಣವನ್ನು ಗೂಗಲ್ ಅಥವಾ ಫೋನ್ ಪೇ ಮೂಲಕ ಹಣ ಪಡೆದುಕೊಳ್ಳುತ್ತಿದ್ದರು.

ವಿದ್ಯಾರ್ಥಿಗಳೂ ಟಾರ್ಗೆಟ್

ಮೈಸೂರು: ವಾದಕ ವಸ್ತುಗಳ ಖರೀದಿಯಲ್ಲಿ ವಿದ್ಯಾರ್ಥಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಅದರಲ್ಲಿಯೂ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಅನ್ಯ ರಾಜ್ಯಗಳ ವಿದ್ಯಾರ್ಥಿಗಳು ಗಾಂಜಾ ಮಾರುವವರ ರೆಗ್ಯುಲರ್ ಕಸ್ಟಮರ್ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಗಾಂಜಾ ಹಾಗೂ ಇನ್ನಿತರ ಮಾದಕ ವಸ್ತುಗಗಳ ,ಮಾರಾಟ ಜಾಲ ಮೈಸೂರಿನಲ್ಲಿ ವಿಸ್ತಾರವಾಗಿದೆ. ತನಿಖೆಯನ್ನು ಆರಂಭಿಸಿರುವ ಸಿಸಿಬಿ ಪೊಲೀಸರು, ಗಾಂಜಾ ಹಾಗೂ ಮಾದಕ ವಸ್ತುಗಳನ್ನು ಮೈಸೂರಿಗೆ ರವಾನಿಸುವ ಹಾಗೂ ಇಲ್ಲಿ ಅದನ್ನು ಹಂಚಿಕೆ ಮಾಡುವವರ ವಿವರವನ್ನು ಜಾಲಾಡುತ್ತಿದ್ದಾರೆ. ಪ್ರಕರಣದಲ್ಲಿ ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಸಿಕ್ಕಲ್ಲಿ ಮಾದಕ ವ್ಯಸನ ಜಾಲದಲ್ಲಿರುವ ಮತ್ತಷ್ಟು ಮಂದಿಯ ಹೆಡೆಮುರಿ ಕಟ್ಟಲಿದ್ದಾರೆ.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!