ಅಗತ್ಯ ಕ್ರಮ ಕೈಗೊಳ್ಳಲು ಮುಂದಾದ ಜಿಲ್ಲಾಡಳಿತ / ಸೋಂಕಿತ ಹಂದಿಗಳ ವಧೆಗೆ ಸೂಚನೆ
ಮಡಿಕೇರಿ: ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, ಹಂದಿ ಸಾಕಾಣಿಕಾ ಕೇಂದ್ರದಲ್ಲಿರುವ ಹಂದಿಗಳಲ್ಲಿ ಜ್ವರ ಇರುವುದು ದೃಢಪಟ್ಟಿದೆ.
ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಿದೆ. ಈ ಹಂದಿ ಸಾಕಾಣಿಕ ಕೇಂದ್ರದ ೧ ಕಿ.ಮೀ ವ್ಯಾಪ್ತಿಯನ್ನು ರೋಗ ಪೀಡಿತ ವಲಯವೆಂದು ಮತ್ತು ೧೦ ಕಿ.ಮೀ ವ್ಯಾಪ್ತಿಯನ್ನು ಜಾಗೃತ ವಲಯವೆಂದು ಘೋಷಿಸಲಾಗಿದೆ.
ಸೋಂಕಿಗೆ ತುತ್ತಾಗಿರುವ ಹಂದಿಗಳನ್ನು ವಧೆ ಮಾಡಿ ವೈಜ್ಞಾನಿಕ ರೂಪದಲ್ಲಿ ಸಂಸ್ಕಾರ ಮಾಡಬೇಕೆಂದು ಆದೇಶಿಸಲಾಗಿದೆ. ರೋಗ ಪೀಡಿತ ಹಂದಿ ಫಾರಂನಿಂದ ೧೦ ಕಿ.ಮೀ. ಒಳಗಿನ ಎಲ್ಲಾ ಹಂದಿ ಸಾಕಾಣೆದಾರರು ಹೊಸದಾಗಿ ಹಂದಿಗಳನ್ನು ಬೇರೆ ಕಡೆಯಿಂದ ಕೊಂಡು ತರಬಾರದು. ಹಂದಿಗಳ ಮತ್ತು ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿನ ಕೆಲಸಗಾರರ ಸಂಚಾರ ನಿಯಂತ್ರಿಸಬೇಕು. ಹಂದಿಗಳಿಗೆ ಹೋಟೆಲ್ ಹಾಸ್ಟೆಲ್‌ಗಳಲ್ಲಿನ ಮಿಕ್ಕಿದ ಆಹಾರ ಸಂಗ್ರಹಿಸಿ ತಿನ್ನಿಸುವವರು ಕಡ್ಡಾಯವಾಗಿ ಅಂತಹ ಆಹಾರ ಪದಾರ್ಥವನ್ನು ಕನಿಷ್ಟ ೨೦ ನಿಮಿಷಗಳ ಕಾಲ ಬೇಯಿಸಿ ಕೊಡಬೇಕೆಂದು ಸೂಚಿಸಲಾಗಿದೆ.
ಹಂದಿ ಮಾಂಸದ ಹೋಟೆಲ್ ಮತ್ತು ಹಂದಿ ಮಾಂಸ ಮಾರಾಟ ಮಾಡುವ ಅಂಗಡಿಯಲ್ಲಿನ ಉಳಿಕೆ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಹಂದಿಗಳಿಗೆ ನೀಡಬಾರದು. ಸಂದರ್ಶಕರಿಗೆ ಹಂದಿ ಫಾರಂ ಒಳಗೆ ಪ್ರವೇಶಕ್ಕೆ ಅವಕಾಶ ನೀಡಬಾರದು. ಹಂದಿ ಆಹಾರ, ಇತರೆ ಸಾಮಗ್ರಿಗಳನ್ನು ಫಾರಂಗೆ ಸಾಗಿಸುವ ವಾಹನಗಳನ್ನು ಸೋಂಕು ನಿವಾರಕ ದ್ರಾವಣದಿಂದ ಶುಚಿಗೊಳಿಸಬೇಕು. ಹಂದಿ ಫಾರಂನ ಕೆಲಸಗಾರರು ಬೇರೆ ಫಾರಂಗೆ ಹೋಗಬಾರದೆಂದು ಸ್ಪಷ್ಟ ನಿರ್ದೇಶನವನ್ನು ನೀಡಲಾಗಿದೆ.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ನಿಗಾವಹಿಸಿ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸಹಕಾರ ನೀಡಿ ಆಫ್ರಿಕನ್ ಹಂದಿ ಜ್ವರದ ಹತೋಟಿಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾ ದಂಡಾಧಿಕಾರಿಗಳು ಸೂಚಿಸಿದ್ದಾರೆ.