ಚಾಮರಾಜನಗರ: ಕೇಂದ್ರ ಸರ್ಕಾರವು ಕ್ವಿಂಟಲ್ ತೆಂಗಿನ ಕಾಯಿಗೆ ಕನಿಷ್ಠ ಬೆಂಬಲ ಬೆಲೆ ೨೮೬೦ ರೂ. ಘೋಷಿಸಿರುವುದನ್ನು ಈಗಲಾದರೂ ಅನುಷ್ಠಾನಗೊಳಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್ ಒತ್ತಾಯಿಸಿದ್ದಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಕೆ.ಜಿ. ತೆಂಗಿನಕಾಯಿ ಬೆಲೆ ೨೦-೨೧ ರೂ.ಗೆ ಕುಸಿದಿದ್ದು, ತೆಂಗು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಖರೀದಿ ಕೇಂದ್ರ ತೆರೆದು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಗೆ ಖರೀದಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕಳೆದ ವರ್ಷ ಇದೇ ಅವಧಿಯಲ್ಲಿ ಕೆ.ಜಿ. ತೆಂಗಿನ ಕಾಯಿ ಬೆಲೆ ೪೧ ರೂ.ಗಳಿತ್ತು. ತೆಂಗು ಬೆಳೆಯಲು, ಕೊಯ್ಲು ಮಾಡಲು, ಸಿಪ್ಪೆ ಸುಲಿದು ಮಾರುಕಟ್ಟೆಗೆ ಸಾಗಿಸಲು ವೆಚ್ಚ ಹೆಚ್ಚಾಗಿದೆ. ಈಗಿರುವ ೨೦-೨೧ ರೂ. ಬೆಲೆಯಿಂದ ರೈತರಿಗೆ ನಷ್ಟವಾಗುತ್ತಿದೆ ಎಂದರು.
ತೆಂಗಿನಕಾಯಿಯ ಬೆಲೆ ಕುಸಿದಿರುವ ಬಗ್ಗೆ ಜಿಲ್ಲಾಡಳಿತವು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ರಾಜ್ಯ ಸರ್ಕಾರ ಸಂಪುಟ ಸಭೆಯಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದರೆ ಬೆಂಬಲ ಬೆಲೆಯಲ್ಲಿ ಖರೀದಿಗೆ ಚಾಲನೆ ಸಿಗಲಿದೆ. ಈ ಕುರಿತು ಸಂಬAಧಪಟ್ಟವರು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
೨೦೧೨-೧೩ನೇ ಸಾಲಿನಲ್ಲಿ ಕಾಯಿಯ ಬೆಲೆ ರೂ.ಗೆ ಕುಸಿದಿತ್ತು. ಆಗ ರಾಜ್ಯ ಸರ್ಕಾರ ೧೪ ರೂ. ಕನಿಷ್ಠ ಬೆಲೆಗೆ ಖರೀದಿಸಿತ್ತು. ೨೦೧೬-೧೭ನೇ ಸಾಲಿನಲ್ಲೂ ಬೆಲೆ ಕುಸಿತ ಕಂಡಾಗ ೧೬ ರೂ.ಗೆ ಖರೀದಿ ಮಾಡಿ ರೈತರ ನೆರವಿಗೆ ಧಾವಿಸಿತ್ತು. ಅದೇ ಮಾದರಿ ಅನುಸರಿಸಬೇಕು ಎಂದು ಕೋರಿದರು.
ಜಿಲ್ಲೆಯಲ್ಲಿ ೧೩೦೭೦ ಹೆಕ್ಟೇರ್‌ನಲ್ಲಿ ತೆಂಗು ಫಸಲು ಬೆಳೆ ಬೆಳೆಯಲಾಗುತ್ತಿದೆ. ಚಾ.ನಗರ ತಾಲ್ಲೂಕಿನಲ್ಲಿ ೮೪೦೭, ಗುಂಡ್ಲುಪೇಟೆ ತಾ.ನಲ್ಲಿ ೨೨೦೦ ಹೆ., ಕೊಳ್ಳೇಗಾಲ ತಾ.ನಲ್ಲಿ ೯೦೩೩ ಹೆ., ಹನೂರು ತಾ.ನಲ್ಲಿ ೬೦೭ ಹೆ., ಯಳಂದೂರು ತಾ.ನಲ್ಲಿ ೯೫೩ ಹೆ. ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದೆ ಎಂದು ಹೇಳಿದರು.
ಬೆಂಬಲಬೆಲೆ ಘೋಷಿಸಿ ಸುಮ್ಮನೆ ಕೂರುವುದರಿಂದ ಪ್ರಯೋಜನವಿಲ್ಲ. ಬೇಗ ಅನುಷ್ಠಾನಗೊಳಿಸಿ ಕೆ.ಜಿ. ತೆಂಗಿನ ಕಾಯಿಯನ್ನು ೩೦-೩೫ ರೂ.ಗಳಿಗೆ ಖರೀದಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.