Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನಕಲಿ ಮೊಬೈಲ್ ಬಿಡಿ ಭಾಗಗಳ ಹಾವಳಿ!

ನಕಲಿ ಜಾಲಕ್ಕೆ ಕಡಿವಾಣ ಹಾಕಲು ಪ್ರಜ್ಞಾವಂತ ನಾಗರಿಕರು ಮನವಿ
-ಕೆ.ಬಿ.ಶಂಶುದ್ಧೀನ್
ಕುಶಾಲನಗರ: ಅತೀ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರಿ ಕುಶಾಲನಗರದಲ್ಲಿ ಮೊಬೈಲ್‌ನ ನಕಲಿ ಬಿಡಿ ಭಾಗಗಳ ಮಾರಾಟ ಯಥೇಚ್ಛವಾಗಿ ನಡೆಯುತ್ತಿದ್ದು, ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಾಗಿದೆ. ನಕಲಿ ವಸ್ತುಗಳ ಮಾರಾಟದ ಜಾಲಕ್ಕೆ ಕಡಿವಾಣ ಹಾಕಬೇಕು ಎಂದು ಕುಶಾಲನಗರ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.
ಮಾರುಕಟ್ಟೆಯಲ್ಲಿ ನಕಲಿ ವಸ್ತುಗಳ ಮಾರಾಟ ಸಾಮಾನ್ಯವಾಗಿದೆ. ಕಡಿಮೆ ಬೆಲೆಯಲ್ಲಿ ಸಾಮಗ್ರಿಗಳು ಲಭಿಸುತ್ತಿದ್ದು, ಅದರ ಜೊತೆಯಲ್ಲಿ ನಕಲಿ ವಸ್ತುಗಳ ಮಾರಾಟ ಹೆಚ್ಚಾಗಿದೆ. ಹೆಚ್ಚು ಹಣ ಮಾಡುವ ಉದ್ದೇಶದಿಂದ ಅಸಲಿ ವಸ್ತುಗಳ ತದ್ರೂಪಗಳನ್ನು ತಯಾರಿಸುತ್ತಿದ್ದಾರೆ. ಅಸಲಿಗೂ ನಕಲಿಗೂ ವ್ಯತ್ಯಾಸ ಕಂಡು ಬಾರದಂತೆ ನಕಲಿ ವಸ್ತುಗಳನ್ನು ತಯಾರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ. ನೋಡಲು ಥೇಟ್ ಅಸಲಿಯಂತೆ ಇರುವುದನ್ನು ಕಂಡು ಸಾರ್ವಜನಿಕರು ಹೆಚ್ಚು ಹಣ ನೀಡಿ ನಕಲಿ ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇದರ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ.
ಐಫೋನ್, ಸ್ಯಾಮ್‌ಸಂಗ್, ಒನ್‌ಪ್ಲಸ್, ಓಪ್ಪೋ, ವೀವೋ, ರಿಯಲ್ ಸೇರಿದಂತೆ ಇನ್ನಿತರ ಕಂಪೆನಿಗಳ ಬಿಡಿ ಭಾಗಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿದೆ. ಅಸಲಿ ವಸ್ತುಗಳಂತೆ ಪ್ಯಾಕಿಂಗ್, ಡಿಸೈನ್ ಇರುವ ಕಾರಣ ಸಾರ್ವಜನಿಕರಿಗೆ ಹೆಚ್ಚಿನ ಹಣಕ್ಕೆ ನಕಲಿ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ.
ಮೊಬೈಲ್ ಬ್ಲೂ ಟೂತ್ ನೆಕ್ ಬ್ಯಾಂಡ್, ಏರ್ ಪಾಡ್ಸ್, ಚಾರ್ಜರ್, ಇಯರ್ ಫೋನ್ಸ್ ಹಾಗೂ ಮುಂತಾದ ಮೊಬೈಲ್ ಬಿಡಿ ಭಾಗಗಳನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಪದಾರ್ಥಗಳಿಗೆ ಯಾವುದೇ ಸಮಸ್ಯೆ ಆದಲ್ಲಿ ಸರ್ವೀಸ್ ಸೆಂಟರ್‌ಗೆ ಸಂಪರ್ಕಿಸುವಂತೆ ಹೇಳುತ್ತಾರೆ. ಕನಿಷ್ಠ ಅದರ ಬಿಲ್ ಕೂಡ ನೀಡುತ್ತಿಲ್ಲ ಎಂದು ಆರೋಪಿಸುತ್ತಿರುವ ಸಾರ್ವಜನಿಕರು, ಕೂಡಲೇ ಸಂಬಂಧಪಟ್ಟವರು ಇದರ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ನಕಲಿ ಫೋನ್‌ಗಳು: ಐಫೋನ್, ಸಾಮ್ ಸಂಗ್ ನಂತರ ಬೃಹತ್ ಕಂಪೆನಿಗಳ ಹೆಸರಿನ ನಕಲಿ ಸ್ಮಾರ್ಟ್ ಗಳು  ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿವೆ. ಕಡಿಮೆ ಬೆಲೆಯಲ್ಲಿ ಬಿಲ್ ನೀಡದೇ ಸ್ಮಾರ್ಟ್ ಫೋನ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಸಾರ್ವಜನಿಕರು ಇದರ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ. ಇಂತಹ ಫೋನ್ ಗಳನ್ನು ಮೊಬೈಲ್ ಟೆಕ್ನಿಷಿಯನ್ಸ್ ಕೂಡ ಪತ್ತೇ ಹಚ್ಚಲಾಗದ ರೀತಿಯಲ್ಲಿ ನಕಲಿ ಸ್ಮಾರ್ಟ್ ಫೋನ್‌ಗಳನ್ನು ತಯಾರು ಮಾಡಲಾಗುತ್ತಿದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸರ ಗಮನಕ್ಕೆ ತರಬೇಕು. ನಕಲಿ ವಸ್ತುಗಳ ಮಾರಾಟದ ಜಾಲಕ್ಕೆ ಕಡಿವಾಣ ಹಾಕಲು ಸಹಕರಿಸಬೇಕಾಗಿದೆ.
ನೋ ಜಿಎಸ್‌ಟಿ, ನೋ ಬಿಲ್: ಕುಶಾಲನಗರದಲ್ಲಿ ಸುಮಾರು ೫೦ಕ್ಕೂ ಹೆಚ್ಚು ಮೊಬೈಲ್ ಮಳಿಗೆಗಳಿವೆ. ಪಟ್ಣಣದ ಬಹುತೇಕ ಮಳಿಗೆಗಳಲ್ಲಿ ಸಾರ್ವಜನಿಕರಿಗೆ ಬಿಲ್ ನೀಡುವುದಿಲ್ಲ. ಹಾಗೆ ಸರ್ಕಾರಕ್ಕೆ ತೆರಿಗೆ ಕೂಡ ಪಾಲಿಸುತ್ತಿಲ್ಲ. ಇದರ ಬಗ್ಗೆ ಸಂಬಂಧಪಟ್ಟ ಸರಕು ಮತ್ತು ತೆರಿಗೆ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಕಲಿ ವಸ್ತುಗಳ ಬಳಕೆ: ಕುಶಾಲನಗರದ ಕೆಲವೊಂದು ಮೊಬೈಲ್ ಸರ್ವೀಸ್ ಮಳಿಗೆಗಳಲ್ಲಿ ನಕಲಿ ವಸ್ತುಗಳನ್ನು ಬಳಸಲಾಗುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿವೆ. ಮೊಬೈಲ್ ಡಿಸ್‌ಪ್ಲೇ, ಚಾರ್ಜಿಂಗ್ ಬೋರ್ಡ್, ಮೊಬೈಲ್ ಪಾನಲ್ ಸೇರಿದಂತೆ ಇನ್ನಿತರ ನಕಲಿ ವಸ್ತುಗಳನ್ನು ಹಾಕಿ ಕೊಡಲಾಗುತ್ತಿದೆ ಎಂದು ಗ್ರಾಹಕರು ದೂರುತ್ತಿದ್ದಾರೆ.
ನಕಲಿ ಜಾಲಕ್ಕೆ ಕಡಿವಾಣ ಹಾಕಿ: ಕುಶಾಲನಗರದ ಭಾಗಶಃ ಮಳಿಗೆಗಳಿಗೆ ಕುಶಾಲನಗರದ ೧೦ಕ್ಕೂ ಹೆಚ್ಚು ವೋಲ್ ಸೇಲ್ ಮಳಿಗೆಗಳಿಂದ ಮೊಬೈಲ್‌ನ ಬಿಡಿ ಭಾಗಗಳು ಸರಬರಾಜಾಗುತ್ತಿವೆ. ಮೈಸೂರು, ಬೆಂಗಳೂರು, ಮುಂಬೈ, ಚೆನ್ನೈ, ದಿಲ್ಲಿ ಹಾಗೂ ಇನ್ನಿತರ ಕಡೆಗಳಿಂದ ವೋಲ್‌ಸೇಲ್ ಮಳಿಗೆಗಳಿಗೆ ನಕಲಿ ಮೊಬೈಲ್ ಬಿಡಿ ಭಾಗಗಳು ಸರಬರಾಜಾಗುತ್ತಿವೆ. ಇಂತಹ ವೋಲ್ ಸೇಲ್ ಮಳಿಗೆಗಳ ಮೇಲೆ ಸಂಬಂಧಪಟ್ಟವರು ದಾಳಿ ನಡೆಸಿದ್ದಲ್ಲಿ ನಕಲಿ ವಸ್ತುಗಳ ಹಾವಳಿಗೆ ಕಡಿವಾಣ ಹಾಕಬಹುದಾಗಿದೆ ಎಂದು ಕುಶಾಲನಗರದ ಪ್ರಜ್ಞಾವಂತ ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಾಣಿಜ್ಯ ನಗರಿ ಕುಶಾಲನಗರದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಮಳಿಗೆಗಳು ಇದ್ದು, ಬಹುತೇಕ ಮಳಿಗೆಗಳನ್ನು ಮಾರ್ವಾಡಿಗಳು ನಡೆಸುತ್ತಿದ್ದಾರೆ. ಹೆಚ್ಚಾಗಿ ಮಾರ್ವಾಡಿಗಳು ನಕಲಿ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಕಡಿಮೆ ಬೆಲೆಗೆ ನಕಲಿ ವಸ್ತುಗಳನ್ನು ಮಾರಾಟ ವಾಡಿ, ಜನರಿಗೆ ಮೋಸ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸಂಘಟನೆ ವತಿಯಿಂದ ಹೋರಾಟ ನಡೆಸಲಾಗುತ್ತದೆ.
ಆದಂ, ಡಾ.ಬಿ.ಆರ್.ಅಂಬೇಡ್ಕರ್ ಜನಪರ ವೇದಿಕೆ ತಾಲ್ಲೂಕು ಅಧ್ಯಕ್ಷರು.


ಕುಶಾಲನಗರದಲ್ಲಿ ಮೊಬೈಲ್ ಸರ್ವೀಸ್‌ಗೆ ಸಂಬಂಧಿಸಿದಂತೆ ಮೊಬೈಲ್ ಟೆಕ್ನಿಷಿಯನ್ಸ್ ಅಸೋಸಿಯೇಷನ್ ಅನ್ನು ನೋಂದಾಯಿಸಲಾಗಿದೆ. ಮಾರುಕಟ್ಟೆಯಲ್ಲಿ ಸರ್ವೀಸ್‌ಗೆ ನಕಲಿ ವಸ್ತುಗಳನ್ನು ಬಳಸುವ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿ ಬರುತ್ತಿವೆ. ಸಂಘದಲ್ಲಿ ಇಂತಹವುಗಳಿಗೆ ಅವಕಾಶವಿಲ್ಲ. ಸ್ಪರ್ಧೆಯ ಹೆಸರಿನಲ್ಲಿ ನಕಲಿ ವಸ್ತುಗಳನ್ನು ಬಳಸಿ ಸರ್ವೀಸ್ ಮಾಡುವ ಬಗ್ಗೆ ದೂರು ಕೇಳಿಬಂದಿದೆ. ಅಂತಹವರ ವಿರುದ್ಧ ನೇರವಾಗಿ ಪೊಲೀಸರಿಗೆ ದೂರು ನೀಡಬಹುದು.
ಸುನಿಲ್, ಕುಶಾಲನಗರ ಮೊಬೈಲ್ ಟೆಕ್ನಿಷಿಯೇನ್ಸ್ ಅಸೋಸಿಯೇಷನ್ ಅಧ್ಯಕ್ಷರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ