Mysore
14
broken clouds

Social Media

ಸೋಮವಾರ, 29 ಡಿಸೆಂಬರ್ 2025
Light
Dark

ಚಾ.ನಗರ : ಬೆಳಗಿನ ಸಮಯ ರೈಲು ಸೇವೆ ಒದಗಿಸಲು ಸಾರ್ವಜನಿಕರ ಆಗ್ರಹ

ಚಾಮರಾಜನಗರ: ನಗರದಿಂದ ಮೈಸೂರಿಗೆ ಪ್ರತಿ ದಿನ ಆರು ರೈಲುಗಳು ಸಂಚರಿಸುತ್ತಿದ್ದು, ಈ ಪೈಕಿ ನಾಲ್ಕು ರೈಲುಗಳು ಸಂಜೆ 5.30ರ ನಂತರ ಸಾಂಸ್ಕೃತಿಕ ನಗರಿಗೆ ತೆರಳುತ್ತವೆ.

ಬೆಳಿಗ್ಗೆ 7.15ಕ್ಕೆ ಮೊದಲ ಪ್ಯಾಸೆಂಜರ್‌ ರೈಲು ಮೈಸೂರಿಗೆ ತೆರಳಿದರೆ, ನಂತರದ ರೈಲಿಗಾಗಿ ಮಧ್ಯಾಹ್ನ 3.30ರವರೆಗೆ ಕಾಯಬೇಕು. ಬೆಳಗಿನ ಅವಧಿಯಲ್ಲಿ ನಗರದಿಂದ ಇನ್ನೂ ಎರಡು ಮೂರು ರೈಲು ಸೇವೆ ಒದಗಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ‘ಸಂಜೆ ಹಾಗೂ ರಾತ್ರಿ ಮೈಸೂರಿಗೆ ರೈಲುಗಳಿದ್ದರೂ ಜಿಲ್ಲೆಯ ಜನರಿಗೆ ಉಪಯೋಗವಿಲ್ಲ. ಬೆಳಗಿನ ಹೊತ್ತು ಸಂಚರಿಸಿದರೆ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ’ ಎಂಬುದು ಅವರ ಅಭಿಪ್ರಾಯ.

‌ಆರು ರೈಲು: ಈಗ ಪ್ರತಿದಿನ ಬೆಳಿಗ್ಗೆ 7.15 (ಪ್ಯಾಸೆಂಜರ್‌), ಮಧ್ಯಾಹ್ನ 3.30 (ತಿರುಪತಿ ಎಕ್ಸ್‌ಪ್ರೆಸ್‌), ಸಂಜೆ 5.25 (ಪ್ಯಾಸೆಂಜರ್‌), 6.35 (ಎಕ್ಸ್‌ಪ್ರೆಸ್‌), ರಾತ್ರಿ 8.45 (ಎಕ್ಸ್‌ಪ್ರೆಸ್‌– ಇದು ಹೊಸ ರೈಲು. 10 ದಿನಗಳ ಹಿಂದೆಯಷ್ಟೇ ಆರಂಭವಾಗಿದೆ) ಹಾಗೂ ರಾತ್ರಿ 9.30ಕ್ಕೆ (ಪ್ಯಾಸೆಂಜರ್‌) ನಗರದಿಂದ ಮೈಸೂರಿಗೆ ರೈಲುಗಳಿವೆ.  ಬೆಳಿಗ್ಗೆ 7.15ರ ರೈಲಿಗೆ ಬೇಡಿಕೆ ಹೆಚ್ಚಿದ್ದು, ಭಾರಿ ಸಂಖ್ಯೆಯಲ್ಲಿ ಕಾರ್ಮಿಕರು, ಉದ್ಯೋಗಿಗಳು ಹಾಗೂ ಜನರು ಮೈಸೂರಿಗೆ ತೆರಳುತ್ತಾರೆ. ಒಂದೊಂದು ಭೋಗಿಯಲ್ಲಿ ಕನಿಷ್ಠ ಎಂದರೂ 200 ಜನರಷ್ಟು ಇರುತ್ತಾರೆ. ರೈಲಿನಲ್ಲಿ 10 ಬೋಗಿಗಳಿದ್ದು, ಎಲ್ಲವೂ ಭರ್ತಿಯಾಗುತ್ತದೆ. ‌

ಮಧ್ಯಾಹ್ನ 3.30ರ ತಿರುಪತಿ ರೈಲಿನಲ್ಲೂ ಪ್ರಯಾಣಿಕರಿರುತ್ತಾರೆ. ಸಂಜೆ 5.50ರ ರೈಲಿಗೂ ಜನರಿಂದ ಬೇಡಿಕೆ ಇದೆ. ಆದರೆ, ಆ ಬಳಿಕ ಸಂಚರಿಸುವ ರೈಲುಗಳಿಗೆ ಹತ್ತುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ.  ‘ಬೆಳಿಗ್ಗೆ 7.15ರ ನಂತರ ಮಧ್ಯಾಹ್ನ 3.30ರವರೆಗೂ ಒಂದೂ ರೈಲಿಲ್ಲ. ಬೆಳಿಗ್ಗೆ 8 ಗಂಟೆಯ ನಂತರ ನಗರದಿಂದ ಮೈಸೂರಿಗೆ ಹೋಗುವವರು ನೂರಾರು ಸಂಖ್ಯೆಯಲ್ಲಿದ್ದಾರೆ. 10ರ ಬಳಿಕ ಹೋಗುವವರೂ ಇದ್ದಾರೆ. ಅಂತಹವರಿಗೆ ರೈಲೇ ಇಲ್ಲ. ರೈಲಿಗೆ ಹೋಗುತ್ತೇವೆ ಎಂದರೆ ತಿರುಪತಿ ಎಕ್ಸ್‌ಪ್ರೆಸ್‌ವರೆಗೂ ಕಾಯಬೇಕು. ಇಲ್ಲದಿದ್ದರೆ ₹71 ಖರ್ಚು ಮಾಡಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಹೋಗಬೇಕಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸಿ.ಎಂ.ಕೃಷ್ಣಮೂರ್ತಿ ಅವರು ಹೇಳಿದ್ದಾರೆ.

‘ಬೆಳಗಿನ ಅವಧಿಯಲ್ಲಿ ನಗರದಿಂದ ಮೈಸೂರಿಗೆ ರೈಲಿದ್ದರೆ ಜನಸಾಮಾನ್ಯರಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಪ್ಯಾಸೆಂಜರ್‌ ರೈಲಿಗೆ ₹20 ಕೊಟ್ಟರೆ ಸಾಕು. ಎಕ್ಸ್‌ಪ್ರೆಸ್‌ ಆದರೆ ₹40 ಕೊಡಬೇಕು. ಹಾಗಿದ್ದರೂ, ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌ಗಿಂದ ₹30 ಉಳಿತಾಯವಾಗುತ್ತದೆ’ ಎಂಬುದು ಜನರ ಅನಿಸಿಕೆಯಾಗಿದೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!