ಸುಬ್ರಹ್ಮಣ್ಯ : ಜನರಿಗೆ ರಕ್ಷಣೆ ನೀಡುವ ಪೊಲೀಸರು ಕೆಲಸ ನಿರ್ವಹಿಸುವ ಕಟ್ಟಡ ಸೂಕ್ತ ರೀತಿಯಲ್ಲಿಲ್ಲದೆ, ಟಾರ್ಪಲ್ ಹೊದಿಕೆಯ ಹಳೆ ಕಟ್ಟಡದಲ್ಲಿಯೇ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಸುಬ್ರಹ್ಮಣ್ಯ ಪೊಲೀಸರದ್ದು. ಕುಕ್ಕೆ ಸುಬ್ರಹ್ಮಣ್ಯದ ಪೊಲೀಸ್ ಠಾಣೆಯ ಕಟ್ಟಡಕ್ಕೆ ಸುಮಾರು 50 ವರ್ಷಗಳಾಗುತ್ತ ಬಂದಿದ್ದು, ಇದು ಸುಮಾರು 15 ವರ್ಷಗಳವರೆಗೆ ಕಡಬ ಪೊಲೀಸ್ ಠಾಣೆಯ ಹೊರ ಠಾಣೆಯಾಗಿ ಕಾರ್ಯನಿರ್ವಹಿಸಿತ್ತು. ಇದೀಗ ಠಾಣೆ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲದಲ್ಲಿ ಮಳೆ ನೀರು ಸೋರಿಕೆಯಾಗುತ್ತದೆ. ಇದಕ್ಕಾಗಿ ಮೇಲ್ಛಾವಣಿಗೆ ಪ್ಲಾಸ್ಟಿಕ್ ಟಾರ್ಪಲು ಹಾಸಲಾಗಿದೆ.
ಪುಣ್ಯಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿರುವ 50 ವರ್ಷಗಳ ಇತಿಹಾಸದ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಮೂರು ತಿಂಗಳ ಹಿಂದೆ ಗೃಹ ಸಚಿವರು ಭೇಟಿ ನೀಡಿ ನೂತನ ಠಾಣೆಯ ಕಟ್ಟಡದ ಕೆಲಸ ಕೂಡಲೇ ಆರಂಭಿಸಿ ವರ್ಷದೊಳಗೆ ಠಾಣೆ ಕಾರ್ಯಾರಂಭ ಮಾಡುವ ಬಗ್ಗೆ ಭರವಸೆ ನೀಡಿ ಹೋಗಿದ್ದರು. ಆದರೆ ಇದುವರೆಗೂ ಠಾಣೆ ಕಾಮಗಾರಿ ಆರಂಭ ಆಗಲೇ ಇಲ್ಲ.