ಕೇರಳಂ ಎಂಬ ಈ ಸ್ತ್ರೀ ರಾಜ್ಯದ ಮಹಿಳೆಯರು ಉಚಿತ ಪ್ರಯಾಣದ ಸಂಪೂರ್ಣ ಸುಖವನ್ನು ಪಡೆಯುತ್ತಿದ್ದಾರೆ. ಈ ಸುಖ ಕ್ಷಣಿಕವೋ, ಶಾಶ್ವತವೋ ಎಂಬುದು ಮಾತ್ರ ರಾಜ್ಯದ ಬೊಕ್ಕಸವನ್ನು ಅವಲಂಬಿಸಿದೆ.
ಅಕ್ಷತಾ
ಎಂದಿನಂತೆ ಆ ದಿನವೂ ಬಸ್ ಹತ್ತಿ ಸೀಟು ಹಿಡಿದು ಕುಳಿತೆ. ಬಸ್ಸಿನಲ್ಲಿ ಅಷ್ಟೇನೂ ಪ್ರಯಾಣಿಕರಿಲ್ಲದ ಕಾರಣ ನಿರ್ವಾಹಕರು ಟಿಕೆಟ್ ಕೊಡಲೆಂದು ಕುಳಿತ ಕಡೆ ಬಂದರು. ಪ್ರತಿದಿನ ಹೇಳುವಂತೆ ‘ಚೇಟಾ ನಮಸ್ಕಾರಂ’ ಅಂದೆ. ದುರುಗುಟ್ಟಿ ನೋಡಿದ ಕಂಡಕ್ಟರ್ ಅಣ್ಣನ ಮುಖದಲ್ಲಿ ನಗುವಿನ ಸುಳಿವೇ ಇಲ್ಲ! ಯಾವಾಗ್ಲೂ ಗುಡ್ ಮಾರ್ನಿಂಗ್ ಹೇಳ್ತಿದ್ದವ್ತ್ಯ್ರು ಇವತ್ಯಾಕಪ್ಪಾ ಹೀಗೆ! ಅಂದುಕೊಳ್ಳುತ್ತಿರುವಾಗ ಪಕ್ಕದಲ್ಲಿ ಕುಳಿತ ಮಲಯಾಳಿ ಚೇಚಿ ‘ಪ್ರಿಯದರ್ಶಿನಿ ಎಫೆಕ್ಟ್’ ಎಂದು ನಸುನಕ್ಕರು. ಯಾವಾಗ್ಲೂ ಬಸ್ ಹತ್ತಿದ ಕೂಡಲೇ ತಮಗೆ ಬರುವ ಮಲಯಾಳಿ ಮಿಶ್ರಿತ ಕನ್ನಡದಲ್ಲಿ ಬಾಯ್ತುಂಬ ಮಾತಾಡ್ತಿದ್ದ ಕಂಡಕ್ಟರ್ ಅಣ್ಣನಿಗೆ ಒಂದು ಫ್ರೀ ಟಿಕೆಟ್ ಇಷ್ಟು ಜಾಣ ಅಪರಿಚಿತ ನಡೆಗೆ ಕಾರಣವಾಯ್ತೇ ಎಂದು ಯೋಚಿಸಿದರೆ, ಹಿಂದೆ ಕುಳಿತ ಗಂಡಸೊಬ್ಬರಲ್ಲಿ ‘ಚಿಲ್ಲರೆ ಇಲ್ಲ’ ಹೇಳಿದ್ದು ಕೇಳಿ ನನಗೆ ಕೊಡಲು ಬಾಕಿಯಿದ್ದ ಚಿಲ್ಲರೆ ಹಣ ಲೆಕ್ಕ ನೆನಪಾಗಿ ಕಂಡಕ್ಟರ್ ವರ್ತನೆಗೆ ಕಾರಣವಾದ ಸೂಕ್ಷ್ಮ ಎಳೆ ಸಿಕ್ಕಿತು.
ಕರ್ನಾಟಕ ಸುಮಾರು ಮೂರು ವರ್ಷಗಳ ಹಿಂದೆ ೨೦೨೩ ಜೂನ್‌ನಲ್ಲಿ ಗ್ಯಾರಂಟಿಗಳಲ್ಲಿ ಒಂದಾದ ‘ಶಕ್ತಿ ಯೋಜನೆ’ ಆರಂಭಿಸಿದಾಗ ದೊಡ್ಡ ಹವಾ ಸೃಷ್ಟಿಸಿತ್ತು. ‘ಹೆಣ್ಮಕ್ಳಿಗೆ ಫ್ರೀ ಯಾಕೆ? ಗಂಡಸ್ರು ಮತ ಹಾಕಿಲ್ವ?’ ಎಂಬುದು ಕೆಲವರ ಅಭಿಪ್ರಾಯವಾದರೆ, ‘ಇನ್ನು ಬಸ್ಸಿನಲ್ಲಿ ರಶ್ಶೋ ರಶ್ಶು, ಕಾಲಿಡೋ ಹಾಗಿಲ್ಲ’ ಎಂದು ಕೆಲವರ ಅಂಬೋಣ. ಎಲ್ಲಕ್ಕಿಂತ ಮಜಾ ಇದ್ದುದು ಸೋಶಿಯಲ್ ಮೀಡಿಯಾಗಳಲ್ಲಿ ಬರುತ್ತಿದ್ದ ದಿನಕ್ಕೊಂದು ರೀಲು, ಟ್ರೋಲು. ಫ್ರೀ ಬಸ್ ಆರಂಭದ ದಿನಗಳಲ್ಲಿ ಪರಿಸ್ಥಿತಿಯೂ ಹಾಗೆಯೇ ಇತ್ತೆನ್ನಿ! ಸುಮ್ ಸುಮ್ನೇ ಓಡಾಡೋರು, ಹೇಗೂ ಫ್ರೀಯಲ್ವಾ ಅಂದ್ಕೊಂಡು ಪುಣ್ಯ ಕ್ಷೇತ್ರ ಸಂದರ್ಶಿಸೋರು, ಹೀಗೆ… ಹೀಗೆ. ಪ್ರತಿದಿನ ಬಸ್ಸಿನಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು, ಉದ್ಯೋಗಸ್ಥರು ಜೊತೆಗೆ ಗಂಡ್ಮಕ್ಳ ಸ್ಥಿತಿಯಂತೂ ಆ ಟೈಮಲ್ಲಿ ಹೇಳೋ ಹಾಗಿಲ್ಲ. ‘ಯಾವಾಗ ಈ ಫ್ರೀ ಬಸ್ ನಿಂತುಬಿಡುತ್ತೋ? ಅದಕ್ಕೂ ಮೊದಲು ಲಾಭ ಪಡೆಯೋಣ’ ಎನ್ನುವ ಕ್ರೇಜ್ ‘ಫ್ರೀ ಬಸ್ ನಿಲ್ಲಲ್ಲ’ ಎಂದು ಸ್ಪಷ್ಟವಾದ ನಂತರ ಇಳಿಯತೊಡಗುವ ಹೊತ್ತಲ್ಲೇ ನೆರೆಯ ರಾಜ್ಯವಾದ ಕೇರಳಂ ಚುನಾವಣಾ ಹೊತ್ತಿನಲ್ಲಿ ತಾನೂ ಐದು ಗ್ಯಾರಂಟಿಗಳನ್ನು ಘೋಷಿಸಿ ಅದರಲ್ಲಿ ‘ಪ್ರಿಯದರ್ಶಿನಿ‘ಯನ್ನೂ ಒಳಗೊಳ್ಳಿಸಿತು.
ಕರ್ನಾಟಕದಲ್ಲಿ ಅದಾಗಲೇ ‘ಶಕ್ತಿ ಯೋಜನೆ’ ಆರಂಭವಾಗಿ ವರ್ಷಗಳು ಕಳೆದಿದ್ದರಿಂದ ಪ್ರಯಾಣಿಕರಿಗೆ ಅಭ್ಯಾಸವಾಗಿ ಹೋಗಿದೆ. ಆದರೆ ‘ಕೇರಳಂ’ ಜನತೆ ಈ ಫ್ರೀ ಬಸ್ ನಿಜ್ವಾಗ್ಲೂ ಜಾರಿಯಾಗುತ್ತಾ ಎಂದು ಆರಂಭದಲ್ಲಿ ಲೇವಡಿ ಮಾಡಿದರು. ಜೊತೆಗೆ ತರಹೇವಾರಿ ಟ್ರೋಲುಗಳು ‘ಕೇರಳಂ’ನಲ್ಲಿ ಪ್ರಿಯದರ್ಶಿನಿ ಆರಂಭವಾದರೆ ಹೇಗಿರಬಹುದು ಎಂಬ ಕುತೂಹಲಕ್ಕೆ ಕಾರಣವಾಯಿತು.
ಜೂನ್ ೧೫ರಂದು ‘ಪ್ರಿಯದರ್ಶಿನಿ ಉಚಿತ ಪ್ರಯಾಣ’ ಅಧಿಕೃತವಾಗಿ ಪ್ರಾರಂಭಗೊಂಡಾಗ ಎಲ್ಲಾ ಕಾತರ, ನಿರೀಕ್ಷೆ, ಹಾಸ್ಯ-ಅಪಹಾಸ್ಯಗಳಿಗೆ ತೆರೆ ಬಿತ್ತು. ಸೋಮವಾರ ಬೆಳಿಗ್ಗೆ ‘ಪ್ರಿಯದರ್ಶಿನಿ ಉಚಿತ ಪ್ರಯಾಣ’ ಸ್ಟಿಕ್ಕರ್ ಅಂಟಿಸಿಕೊಂಡು ಮೇಕಪ್ ಆಗಿದ್ದ ಬಸ್ ಥೇಟ್ ಹೀರೋ. ‘ಓಣಂ’ಗೆ ಮಾತ್ರ ಸಿಂಗರಿಸಿಕೊಳ್ಳುತ್ತಿದ್ದ ಬಸ್ ಮೊದಲ ಸಲ ಪ್ರಿಯ… ದರ್ಶಿನಿಯರಿಗಾಗಿ ದಿಬ್ಬಣಕ್ಕೆ ಹೊರಟ ಮದುಮಗನಂತೆ ಕಾಣುತ್ತಿತ್ತು. ದಾರಿಯುದ್ದಕ್ಕೂ ದಿಬ್ಬಣ ಎದುರುಗೊಳ್ಳಲು ಸಜ್ಜಾಗಿ ನಿಂತ ಗುಂಪು ಕೂಡ ಇದ್ದುದರಿಂದ ಬಸ್ ‘ಏಕ್ ದಿನ್ ಕಾ ಸುಲ್ತಾನ್!’
ಬಸ್ ಕತೆ ಹೀಗಾದ್ರೆ ಈಗಾಗ್ಲೇ ಸಾಕಷ್ಟು ಕುಹಕ, ಗೇಲಿಗೆ ಒಳಗಾಗಿದ್ದ ಕೇರಳಂ ಮಹಿಳಾ ಪ್ರಯಾಣಿಕರು ಯಾವ ರೀತಿ ‘ಫ್ರೀ ಬಸ್’ ಒಪ್ಪಿಕೊಂಡರೆನ್ನುವುದನ್ನೂ ಗಮನಿಸಲೇಬೇಕು. ಉಚಿತ ಪ್ರಯಾಣ ಆರಂಭವಾಗಿ ಎರಡು ದಿನಗಳು ಕಳೆದರೂ ಫ್ರೀ ಟ್ರಿಪ್ ಎಂಬುದು ನಿಜವೇ? ಎನ್ನುವಂತಿತ್ತು ನಡೆ. ಕರ್ನಾಟಕದಲ್ಲಿ ‘ಶಕ್ತಿ ಯೋಜನೆ’ ಉಚಿತ ಪ್ರಯಾಣ ಘೋಷಣೆಯಾದ ನಂತರದ ನಾಲ್ಕ್ತ್ಯೈದು ತಿಂಗಳು ಪುರುಷ ಪ್ರಯಾಣಿಕರಿಗೆ ದುಃಸ್ವಪ್ನವಾಗಿತ್ತು. ಆದರೆ ಕೇರಳಂ ಮಹಿಳೆ ತಮ್ಮ ಪಾಡಿಗೆ ತಾವು ಎಂದಿನಂತೆಯೇ ನಿತ್ಯ ಪ್ರಯಾಣ ಮಾಡಿದಾಗ ಟ್ರೋಲುಗಳು ಸುಳ್ಳಾಯ್ತು ಅಂದುಕೊಂಡ್ರೆ, ನಿಧಾನವಾಗಿ ಉಚಿತ ಪ್ರಯಾಣ ಇಲ್ಲಿಯೂ ರಂಗೇರುತ್ತಿದೆ. ಕೇರಳಂ ಜನತೆ ಯಾವುದನ್ನೂ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುವವರಲ್ಲ. ಏಕೆಂದರೆ ಆಯಾ ಸರ್ಕಾರ ಪತನವಾದೊಡನೆ ಮೂಲೆಗುಂಪಾದ ಇಂತಹ ಎಷ್ಟೋ ಯೋಜನೆಗಳಿಗೆ ನೆಲ ಸಾಕ್ಷಿಯಾಗಿದೆ.
ಇಂದಿರಾಗಾಂಽಯವರ ಇನ್ನೊಂದು ಹೆಸರಾದ ‘ಪ್ರಿಯದರ್ಶಿನಿ’ ಎನ್ನುವ ಹೆಸರಿನಲ್ಲಿ ಮೊದಲ್ಗೊಂಡ ಫ್ರೀ ಬಸ್ ಯೋಜನೆಯ ಫಲಾನುಭವಿಗಳು ಮಹಿಳೆಯರಷ್ಟೇ ಅಲ್ಲ. ತೃತೀಯ ಲಿಂಗಿಗಳನ್ನೂ ಒಳಪಟ್ಟಂತೆ ಪ್ರಿಯದರ್ಶಿನಿ ಯೋಜನೆ ಜಾರಿಯಾಗಿರುವುದು ವಿಶೇಷ. ಯಾವುದೇ ಗುರುತಿನ ಚೀಟಿಯಿಲ್ಲದೆ ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಗೆ ಸರ್ಕಾರಿ ಸಾಮಾನ್ಯ ಬಸ್ ಹಾಗೂ ‘ಟೌನ್ ಟು ಟೌನ್’ ಬಸ್‌ಗಳಲ್ಲಿ ಫ್ರೀ ಟಿಕೆಟ್ ಇರುವುದರಿಂದ ಕೇರಳಂ ಮಹಿಳೆಯರಷ್ಟೇ ಅಲ್ಲ, ಎಲ್ಲಾ ಸ್ತ್ರೀಯರಿಗೂ ತೃತೀಯ ಲಿಂಗಿಗಳಿಗೂ ‘ಉಚಿತ ಭಾಗ್ಯ’ ಕೊಟ್ಟು ಕರ್ನಾಟಕಕ್ಕಿಂತ ಭಿನ್ನ ಎಂಬಂತೆ ನಡೆದುಕೊಂಡಿದೆ.
ಆದಾಗ್ಯೂ ಇಲ್ಲಿ ಗಮನಿಸಬೇಕಾದ ಅಂಶ ಮತ್ತೊಂದಿದೆ. ಕೇರಳಂ ರಾಜ್ಯದಲ್ಲಿ ಬಸ್ ಪ್ರಯಾಣಕ್ಕಿಂತಲೂ ರೈಲು ಪ್ರಯಾಣವನ್ನು ನೆಚ್ಚಿಕೊಂಡವರು ಬಹಳಷ್ಟು ಮಂದಿ. ಅಲ್ಪವೆಚ್ಚದಲ್ಲಿ ಪ್ರಯಾಣಿಸಬಹುದು ಎನ್ನುವುದಕ್ಕಿಂತೂ ರೈಲು ಸೇವೆಯಲ್ಲಿ ಕೇರಳಂ ಉತ್ತಮವಾಗಿದೆ. ಜೊತೆಗೆ ಕೇರಳಂ ರಾಜ್ಯದ ನಕ್ಷೆಯನ್ನು ನೋಡುವುದಾದರೆ ರೈಲುಮಾರ್ಗಕ್ಕೆ ತಕ್ಕಂತಹ ಭೌಗೋಳಿಕ ಅಂಶಗಳೂ ಇವೆ. ಈ ಕಾರಣಕ್ಕೆ ಹೆಚ್ಚಿನ ಎಕ್ಸ್‌ಪ್ರೆಸ್ ರೈಲುಗಳು ಕೇರಳಂ ಹಾದುಹೋಗುತ್ತವೆ ಮತ್ತು ಪ್ಯಾಸೆಂಜರ್ ಟ್ರ್ತ್ಯೈನುಗಳೂ ಬೇಕಾದಷ್ಟಿವೆ. ಹಾಗಾಗಿ ಉಚಿತ ಪ್ರಯಾಣ ಆರಂಭವಾದ ಒಂದ್ವಾರ ‘ಫ್ರೀ ಬಸ್ ಯಾವಾಗ ಬೇಕಾದರೂ ರದ್ದಾಗಬಹುದು’ ಎಂಬ ಸಂಶಯದಲ್ಲಿ ರೈಲ್ವೇ ಸ್ಟೇಷನ್ ದಾರಿ ಮರೆತಿರಲಿಲ್ಲ. ಬಸ್ ಬದಲಾಗಿ ರೈಲಿನಲ್ಲೇನಾದ್ರೂ ಉಚಿತ ಟಿಕೆಟ್ ಆರಂಭಿಸಿದ್ದರೆ ಶಕ್ತಿ ಯೋಜನೆಯ ಬಸ್ ಪ್ರಯಾಣದ ಸ್ಥಿತಿ ಇಲ್ಲಿಯೂ ಆಗುತ್ತಿತ್ತೇನೋ?
ಪ್ರಿಯದರ್ಶಿನಿ ಉಚಿತ ಬಸ್ ಪ್ರಾರಂಭವಾಗಿ ವಾರದ ನಂತರ ಕಳೆಕಟ್ಟಿಕೊಳ್ಳುತ್ತಿದೆ. ಹೀರೋನಂತಿದ್ದ ಬಸ್ ‘ಹತ್ತಿ, ಇಳಿಯುವ ಆಟ’ದಲ್ಲಿ ಪೆಟ್ಟು ತಿಂದ ವಿಲನ್ ರೀತಿ ಆಗುತ್ತಿದೆ. ಇನ್ನು ನಿರ್ವಾಹಕರಿಗಂತೂ ಇದು ಬಿಸಿ ತುಪ್ಪ. ಪೆಂಡಿಂಗ್ ಇರುವ ಸಂಬಳದ ನಿರೀಕ್ಷೆಯಲ್ಲಿ ಎಟಿಎಮ್ (ಆಟೋಮೇಟೆಡ್ ಟೆಲ್ಲರ್ ಮೆಶಿನ್)ನಲ್ಲಿ ಫ್ರೀ ಟಿಕೆಟ್ ಹರಿಯುವಾಗ ಮುಖದಲ್ಲಿ ಅಸಹಾಯಕತೆಯ ದಟ್ಟಗೆರೆ ದಾಟಿದ ಬೆವರು! ಬೆಲ್ ಹೊಡೆಯುವಾಗ ಯಾಂತ್ರೀಕೃತ ಬಾಗಿಲು ಮುಚ್ಚಲು ಚಾಲಕ – ನಿರ್ವಾಹಕರು ಪಡುವ ಸಾಹಸ ರಾಜ್ಯದ ಆರ್ಥಿಕ ಸ್ಥಿತಿಯ ವಿಡಂಬನೆ.
ರಾಜ್ಯಗಳ ಆರ್ಥಿಕ ಹಿನ್ನೆಲೆಯಲ್ಲಿ, ಸಾರಿಗೆ ಸಂಸ್ಥೆಯ ಉದ್ಯೋಗಿಗಳ ದೃಷ್ಟಿಯಲ್ಲಿ ಇಂತಹ ಉಚಿತ ಯೋಜನೆ ಪತನದ ಮುನ್ಸೂಚನೆ. ಸಮರ್ಪಕ ನಿರ್ವಹಣೆ ಕೊರತೆ, ಬಾಕಿ ಸಂಬಳ, ಬೋನಸ್ ಸಮಸ್ಯೆ… ಹೀಗೆ ಈಗಾಗಲೇ ಬಹಳಷ್ಟು ತೊಂದರೆಗಳಿಗೆ ಸಿಲುಕಿರುವ ಸಾರಿಗೆ ಸಂಸ್ಥೆಗಳ ಸ್ಥಿತಿ ಮುಂದೇನಾಗುವುದೋ ಗೊತ್ತಿಲ್ಲ! ಪ್ರತಿದಿನ ರಾತ್ರಿ ಅರ್ಧ ಲಕ್ಷದಷ್ಟು ಕಲೆಕ್ಷನ್ ತುಂಬಿಸಿಕೊಂಡ ಬ್ಯಾಗಿನೊಡನೆ ಬಸ್ ಇಳಿಯುತ್ತಿದ್ದ ಕಂಡಕ್ಟರ್ ಅಣ್ಣನ ಈಗಿನ ಸಾವಿರದ ಜೋಳಿಗೆ ಆರ್ಥಿಕ ಬಡತನದ ಸೂಚನೆಯಾದರೂ ಮಹಿಳೆಯರು ಮಾತ್ರ ಇವೆಲ್ಲದರ ಗೊಡವೆಯಿಂದಾಚೆ ‘ನಿನ್ನೆ ನಿನ್ನೆಗೆ, ನಾಳೆ ನಾಳೆಗೆ’ ಎನ್ನುತ್ತಾ ಬಸ್ಸನ್ನೇರಿ ಉಚಿತ ಪ್ರಯಾಣದ ಸಂಪೂರ್ಣ ಸುಖವನ್ನು ಪಡೆಯುತ್ತಿದ್ದಾರೆ. ಈ ಸುಖ ಕ್ಷಣಿಕವೋ, ಶಾಶ್ವತವೋ ಎಂಬುದು ಮಾತ್ರ ರಾಜ್ಯದ ಬೊಕ್ಕಸವನ್ನು ಅವಲಂಬಿಸಿದೆ.
ಕೃಪಾ ದೇವರಾಜ್, ಮಡಿಕೇರಿ ಧೋ... ಎಂದು ಸುರಿಯುವ ಮಳೆ, ಅಜ್ಜ ಕಟ್ಟಿದ ಹಳೇ ನಾಡ ಹೆಂಚಿನ ಮನೆ, ನಿರಂತರವಾಗಿ ಸುರಿಯುವ…
ಜುಲೈ ನಾಲ್ಕು ಮತ್ತು ಐದರ ಶನಿವಾರ ಮತ್ತು ಭಾನುವಾರ ಮೈಸೂರಿನ ಸದರ್ನ್ ಸ್ಟಾರ್‌ನಲ್ಲಿ ವಾರ್ಷಿಕ ಸಾಹಿತ್ಯ ರಸದೂಟ ಪೃಥ್ವಿ ಸುಧೀಂದ್ರ…
ಮೈಸೂರು : ನಗರದ ದಟ್ಟಗಳ್ಳಿಯಲ್ಲಿರುವ ಮಾರಾ ಬಾರ್ ಅಂಡ್ ರೆಸ್ಟೋರೆಂಟ್ (ಫಾಕ್ಸ್ಡೆನ್‌ಬಾರ್) ನಲ್ಲಿ ಸಂಭವಿಸಿದ ಅಗ್ನಿದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ…
ನನ್ನ ಆದರ್ಶ ವ್ಯಕ್ತಿ ಗಾಂಧಿ ಮಹಾತ್ಮ ಗಾಂಧೀಜಿ ತಮ್ಮ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದರು. ಭಾರತದ ಸ್ವಾತಂತ್ರ್ಯ ಕ್ಕಾಗಿ…
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಾಣತ್ಯಾಗ ಮಾಡಿದ ಮಹನೀಯರಲ್ಲಿ ಎದ್ದು ಕಾಣುವ ಹೆಸರು ಕರ್ನಾಟಕದ ಹೆಮ್ಮೆಯ ಪುತ್ರ ಮೈಲಾರ…
೧೮೮೭ನೇ ಇಸವಿಯಲ್ಲಿ ನಾನು ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾದೆನು. ಮೆಟ್ರಿಕ್ ಪರೀಕ್ಷೆಗೆ ಬೊಂಬಾಯಿ ಮತ್ತು ಅಹಮದಾಬಾದ್ ಎರಡೂ ಕೇಂದ್ರಗಳಾಗಿದ್ದವು. ನಾನು ಹತ್ತಿರದ…