ಅಂಕಣಗಳು

ಸಾವಿರಾರು ಹೆರಿಗೆ ಮಾಡಿಸಿದ ಫ್ಲಾರೆನ್ಸ್ ನೈಟಿಂಗೇಲ್ ಗೀತಾ ‘ಮಾ’

ಪಂಜುಗಂಗೊಳ್ಳಿ ಅವರ ವಾರದ ಅಂಕಣ 

ಕಡು ಬಡತನದ ಕುಟುಂಬದಿಂದ ಬಂದ ಶುಶ್ರೂಷಕಿ

ಪ. ಬಂಗಾಳದ ಗೀತಾ ಕಾರ್ಮಕಾರ್ ನರ್ಸಿಂಗ್ ತರಬೇತಿ ಮುಗಿಸಿದ ನಂತರ, ೧೯೮೩ರಲ್ಲಿ ಜಲ್ಪೈಗುರಿಯ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿ, ಬೇಲಾಕೋಬಾ ಸರ್ಕಾರಿ ಆಸ್ಪತ್ರೆಯಲ್ಲಿ ತನ್ನ ವೃತ್ತಿ ಬದುಕನ್ನು ಪ್ರಾರಂಭಿಸಿದರು. ಆದರೆ, ಕೆಲವೇ ದಿನಗಳಲ್ಲಿ ಅವರಿಗೆ ದಾಂಗುವಾಜರ್ ಚಹ ತೋಟಕ್ಕೆ ವರ್ಗಾವಣೆಯಾಯಿತು.

ದಾಂಗುವಾಜರ್ ಒಂದು ಬುಡಕಟ್ಟು ಪ್ರದೇಶ ವೈದ್ಯಕೀಯ ಸೌಲಭ್ಯಗಳು ಏನೆಂದು ಕೇಳಿ ನೋಡದ ಒಂದು ಅತ್ಯಂತ ಹಿಂದುಳಿದ ಕುಗ್ರಾಮ. ಗೀತಾ ಹೋದಾಗ ಅಲ್ಲಿ ವೈದ್ಯಕೀಯ ಆರೈಕೆಗಳನ್ನು ಮಾಡಲು ಯಾವುದೇ ಕಟ್ಟಡ ಇರದ ಕಾರಣ ಅವರು ಅಲ್ಲಿನ ಮಾರುಕಟ್ಟೆ ಪ್ರದೇಶದ ಒಂದು ಕಟ್ಟಡದ ವರಾಂಡದಲ್ಲಿ ಒಂದು ಮೇಜು ಮತ್ತು ಕುರ್ಚಿಯನ್ನು ಹಾಕಿಕೊಂಡು ಕೆಲಸ ಶುರು ಮಾಡಿದರು. ಪ್ರಯಾಣಕ್ಕೆ ಬೇರಾವುದೇ ಅನುಕೂಲಗಳಿಲ್ಲದೆ ಅವರು ಪ್ರತೀದಿನ ೧೨-೧೪ ಕಿ.ಮೀ. ಸೈಕಲ್ ತುಳಿದು, ಮನೆ ಮನೆಗಳಿಗೆ ಹೋಗಿ, ಜನರ ಆರೋಗ್ಯ ತಪಾಸಣೆ, ವೈದ್ಯಕೀಯ ಆರೈಕೆ, ಹೆರಿಗೆ ಮಾಡಿಸುವುದು ಮಾಡಬೇಕಾಯಿತು.

ದಾಂಗುವಾಜರ್ ಚಹ ತೋಟದ ಜನಸಂಖ್ಯೆ ಅಧಿಕೃತವಾಗಿ ೩,೦೦೦. ಆದರೆ, ಗೀತಾ ಪ್ರತಿಯೊಂದು ಮನೆಗೂ ಹೋಗಿ ಸರ್ವೇ ನಡೆಸಿದಾಗ ವಾಸ್ತವದಲ್ಲಿ ಅಲ್ಲಿ ವಾಸಿಸುವವರ ಸಂಖ್ಯೆ ೫,೫೦೦ಕ್ಕೂ ಹೆಚ್ಚು ಎಂಬುದು ತಿಳಿಯಿತು. ಅರಿವಿನ ಕೊರತೆ, ಮೌಢ್ಯ ಮತ್ತು ಅದಕ್ಕೂ ಮಿಗಿಲಾಗಿ, ಸೂಕ್ತ ವೈದ್ಯಕೀಯ ಸೌಲಭ್ಯಗಳಿಲ್ಲದ ಕಾರಣ, ಅಲ್ಲಿ ಹೆಚ್ಚಿನ ಹೆರಿಗೆಗಳು ಮನೆಗಳಲ್ಲೇ ನಡೆಯುತ್ತಿತ್ತು. ಹೆರಿಗೆಗಳು ನಡೆಯುತ್ತಿದ್ದುದು ಕೊಳಕಾದ ಕತ್ತಲೆ ಕೋಣೆಗಳಲ್ಲಿ. ಹೆರಿಗೆಯಾಗುವಾಗ ಬಳಸುತ್ತಿದ್ದ ಬಟ್ಟೆಗಳು ಶುಚಿಯಾಗಿರುತ್ತಿರಲಿಲ್ಲ. ಹೊಕ್ಕುಳ ಬಳ್ಳಿ ಕತ್ತರಿಸಲು ತುಕ್ಕು ಹಿಡಿದ ಕಬ್ಬಿಣದ ಕತ್ತಿ, ಬಿದಿರಿನ ಚಕ್ಕೆ ಮೊದಲಾಗಿ ಕೈಗೆ ಸಿಕ್ಕಿದ ಯಾವುದಾದರೂ ಹರಿತ ವಸ್ತುಗಳನ್ನು ಉಪಯೋಗಿಸುತ್ತಿದ್ದರು. ಇದರಿಂದಾಗಿ ಸೋಂಕು ತಗಲಿ ಬಾಣಂತಿ ಅಥವಾ ನವಜತ ಶಿಶುಗಳು ಅಕಾಲಿಕ ಮರಣಕ್ಕೆ ತುತ್ತಾಗುವುದು ಸಾಮಾನ್ಯವಾಗಿತ್ತು. ಬದುಕುಳಿದ ಮಕ್ಕಳಿಗೆ ಯಾವುದೇ ರೀತಿಯ ರೋಗ ನಿರೋಧಕ ವಿಧಾನಗಳ ಬಳಕೆ ಇಲ್ಲವೇ ಇಲ್ಲ ಎಂಬಷ್ಟು ವಿರಳ. ಮಕ್ಕಳಲ್ಲಿ ಪೋಷಕಾಂಶದ ಕೊರತೆ ವ್ಯಾಪಕವಾಗಿತ್ತು. ಕುಟುಂಬಗಳು ಜ್ವರ, ಕ್ಷಯ ಮೊದಲಾದ ಆರೋಗ್ಯ ಸಮಸ್ಯೆಗಳಿಗೆ ಸ್ಥಳೀಯ ಸಾಂಪ್ರದಾಯಿಕ ಗಿಡಮೂಲಿಕೆ ‘ವೈದ್ಯ’ರುಗಳನ್ನು ಅವಲಂಬಿಸಿದ್ದವು.

ಗೀತಾರ ಮೊತ್ತ ಮೊದಲ ಸವಾಲು ಅಲ್ಲಿನ ಮಹಿಳೆಯರನ್ನು ಮನೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಬದಲು ತನ್ನ ವೈದ್ಯಕೀಯ ಕೇಂದ್ರಕ್ಕೆ ಬಂದು ವೈಜನಿಕವಾಗಿ ಮತ್ತು ಸುಕ್ಷಿತವಾಗಿ ಹೆರಿಗೆ ಮಾಡಿಸಿಕೊಳ್ಳಲು ಒಪ್ಪಿಸುವುದು. ಅವರು ಹಲವು ತಿಂಗಳ ಪರಿಶ್ರಮ, ತಾಳ್ಮೆ ಮತ್ತು ಕಾಳಜಿಯಿಂದ ಗರ್ಭಿಣಿಯರು ಮತ್ತು ಅವರ ಮನೆಯ ಹಿರಿಯರೊಂದಿಗೆ ಮಾತಾಡಿ, ಅವರಿಗೆ ತಿಳಿ ಹೇಳಿ ಆ ಬದಲಾವಣೆಯನ್ನು ತರುವುದರಲ್ಲಿ ಯಶಸ್ವಿಯಾದರು. ಎಷ್ಟೆಂದರೆ, ೨೦೧೪ರ ಹೊತ್ತಿಗೆ ಅಲ್ಲಿ ಮನೆ ಹೆರಿಗೆ ಎಂಬುದೇ ಅಪರೂಪವಾಯಿತು.

ಆ ಬಡ ಬುಡಕಟ್ಟು ಜನಗಳ ಸೇವೆ ಮಾಡುತ್ತಿದ್ದ ಗೀತಾ ವಾಸ್ತವದಲ್ಲಿ ಸ್ವತಃ ಅಂತಹದೇ ಒಂದು ಕಡು ಬಡತನದ ಕುಟುಂಬದಿಂದ ಬಂದವರು. ಅವರ ತಂದೆ ಜಯಚಂದ್ರ ರಾಜ್ಬಂಗ್ಶಿ ಕುಟುಂಬದ ಹೊಟ್ಟೆ ಪಾಡಿಗೆ ಮೀನು ಮಾರುವ ಕೆಲಸ ಮಾಡುತ್ತಿದ್ದರು. ಆದರೆ ಅವರು ಆಗಾಗ್ಗೆ ಕಾಯಿಲೆ ಬೀಳುತ್ತಿದ್ದರಿಂದ ಮನೆಯಲ್ಲಿ ಯಾವತ್ತೂ ಹಣದ ಕೊರತೆಯಿತ್ತು. ಗೀತಾ ಮತ್ತು ಅವಳ ತಾಯಿ ಇಬ್ಬರೂ ಒಂದೇ ಜೊತೆ ಚಪ್ಪಲಿಯನ್ನು ಹಂಚಿಕೊಳ್ಳುತ್ತಿದ್ದರು. ಗೀತಾ ಏಳನೇ ತರಗತಿಯಲ್ಲಿರುವಾಗ ತಂದೆ ತೀರಿಕೊಂಡರು. ಮಗಳ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗದ ತಾಯಿ ಮಗಳನ್ನು ರೀನಾ ದತ್ತಾ ಎನ್ನುವ ಒಬ್ಬ ಕುಟುಂಬ ಸ್ನೇಹಿತೆಯ ಸುಪರ್ದಿಗೆ ಒಪ್ಪಿಸಿದರು.

ಗೀತಾ ರೀನಾ ದತ್ತಾರನ್ನು ಅಜ್ಜಿ ಎಂದು ಕರೆಯುತ್ತಿದ್ದಳು. ಅವರು ಗೀತಾಳಿಗೆ ಹೊಟ್ಟೆಗೆ, ಬಟ್ಟೆಗೆ ಕೊಟ್ಟುದುದಲ್ಲದೆ ಅವಳ ಶಾಲಾ ಕಲಿಕೆ ನಿಲ್ಲದಂತೆ ನೋಡಿಕೊಂಡರು. ಗೀತಾ ಅದಕ್ಕೆ ಪ್ರತಿಯಾಗಿ ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು, ಅಡುಗೆ ಮಾಡುವುದು ಮೊದಲಾದ ಮನೆಗೆಲಸಗಳಲ್ಲಿ ಅವರಿಗೆ ನೆರವಾಗುತ್ತಿದ್ದಳು. ಹಾಗೆಯೇ, ಮನೆ ಮನೆಗೆ ಹಾಲು ಹಾಕಿ, ಬೆರಣಿ ತಟ್ಟಿ, ಆಗಾಗ್ಗೆ ಅವರಿವರ ಮನೆಗಳಲ್ಲಿ ಪಾತ್ರೆ ತೊಳೆದು ಅದರಿಂದ ಬರುತ್ತಿದ್ದ ಪುಡಿಗಾಸನ್ನು ಮನೆ ನಡೆಸಲು ತನ್ನ ತಾಯಿಗೆ ಕೊಡುತ್ತಿದ್ದಳು. ಗೀತಾ ಕಾಲೇಜಿಗೆ ಹೋಗುವಾಗಲೂ ಅವಳ ಕಾಲಲ್ಲಿದ್ದುದು ಒಂದು ಜೊತೆ ಹರಿದ ಚಪ್ಪಲಿ. ಹರಿದ ಭಾಗವನ್ನು ಹಗ್ಗದಿಂದ ಜೋಡಿಸಿದ್ದಳು. ನಡೆಯುವಾಗ ಅದು ಜೀಂಕ್ ಜೀಂಕ್ ಎಂದು ಸದ್ದು ಮಾಡುತ್ತಿತ್ತು. ಅದನ್ನು ಕೇಳಿ ಅವಳ ತರಗತಿಯ ಕೆಲವು ಮಕ್ಕಳು ನಗಾಡುತ್ತಿದ್ದರು. ಆದರೆ, ಗೀತಾ ಅದಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳುತ್ತಿರಲಿಲ್ಲ. ೧೯೮೫ರಲ್ಲಿ ಗೀತಾ ಆರೋಗ್ಯ ಇಲಾಖೆಯ ತಮ್ಮ ಸಹೋದ್ಯೋಗಿಯೊಬ್ಬರನ್ನು ಮದುವೆಯಾದರು. ಗೀತಾರ ಬದುಕು ತುಸು ಅನುಕೂಲಕರವಾಗಿ ನಡೆಯುತ್ತಿದೆ ಅನ್ನುವಾಗ ೨೦೦೮ ರಲ್ಲಿ ಒಂದು ಅವಗಢ ನಡೆಯಿತು. ಕೆಲಸ ಮುಗಿಸಿ ಗಂಡ- ಹೆಂಡತಿ ಸ್ಕೂಟರಲ್ಲಿ ಹೋಗುವಾಗ ನಡೆದ ಅಪಘಾತದಲ್ಲಿ ಇಬ್ಬರೂ ರಸ್ತೆಗೆ ಬಿದ್ದು, ಗೀತಾರ ಮೊಣಕಾಲಿನ ಮೂಳೆ ಹಲವು ಕಡೆ ಮುರಿದು, ಹಲವು ಶಸಚಿಕಿತ್ಷೆಗಳಿಗೆ ಒಳಗಾಗಿ, ಸೋಂಕು ತಗಲಿ, ದೀರ್ಘ ಕಾಲ ವೈದ್ಯಕೀಯ ಆರೈಕೆ ಮಾಡಬೇಕಾಗಿ ಬಂದಿತು. ೨೦೦೮ ರಿಂದ ೨೦೧೫ರ ನಡುವೆ ಅವರಿಗೆ ಒಂಬತ್ತು ಶಸಚಿಕಿತ್ಸೆಗಳನ್ನು ಮಾಡಬೇಕಾಯಿತು. ಆದರೂ, ಅವರ ದೇಹ ಶೇ.೪೦ರಷ್ಟು ಊನಕ್ಕೆ ಒಳಗಾಗುವುದನ್ನು ತಪ್ಪಿಸಲಾಗಲಿಲ್ಲ.

ಗೀತಾ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾಗಲೂ ತಾನು ಸೇವೆ ಮಾಡುತ್ತಿದ್ದ ಆ ಬುಡಕಟ್ಟು ಸಮುದಾಯಗಳ ಸಂಪರ್ಕದಲ್ಲಿದ್ದರು. ಅವರು ಆಸ್ಪತ್ರೆಯಿಂದ ಬಿಡುಗಡೆಗೊಂಡ ಮೇಲೆ, ದೇಹದ ನ್ಯೂನತೆಯಿಂದಾಗಿ, ಮೊದಲಿನಂತೆ ಸೈಕಲ್ ತುಳಿದು ಆ ಜನರ ಮನೆಗಳಿಗೆ ಭೇಟಿ ಕೊಡುವುದು ಸಾಧ್ಯವಿರಲಿಲ್ಲ. ಆಗ ಅವರು ಆ ಬಡಪಾಯಿ ಜನರ ಸೇವೆಗೆ ತನ್ನ ದೈಹಿಕ ನ್ಯೂನತೆ ಅಡ್ಡಿಯಾಗಲು ಆಸ್ಪದ ಕೊಡಬಾರದೆಂದು ದಿನಕ್ಕೆ ೨೦೦ ರೂಪಾಯಿಗೆ ಬಾಡಿಗೆಗೆ ಒಂದು ಸೈಕಲ್ ರಿಕ್ಷಾವನ್ನು ಗೊತ್ತು ಮಾಡಿದರು.

ಬೇಲಾಕೋಬಾ ಗ್ರಾಮೀಣ ಆಸ್ಪತ್ರೆಯಲ್ಲಿ ತನ್ನ ವೃತ್ತಿಯನ್ನು ಪ್ರಾರಂಭಿಸಿದ ಗೀತಾ ೨೦೨೧ರಲ್ಲಿ ಅದೇ ಆಸ್ಪತ್ರೆಯ ಸೂಪರ್‌ವೈಸರ್ ಆಗಿ ಬಡ್ತಿ ಪಡೆದು, ೨೦೨೬ರ ಜನವರಿಯಲ್ಲಿ ನಿವೃತ್ತರಾದರು. ತಾನು ಸೇವೆ ಮಾಡಿದ ಜನರಿಂದ ‘ಮಾ (ತಾಯಿ)’, ‘ಪೋಲಿಯೋ ದೀದಿಮೊನಿ(ಪೋಲಿಯೋ ಅಕ್ಕ)’ ಎಂದು ಕರೆಸಿಕೊಳ್ಳುತ್ತಿದ್ದ ಗೀತಾ ತಮ್ಮ ೪೨ ವರ್ಷ ಕಾಲದ ಸೇವೆಯಲ್ಲಿ ತನ್ನ ಸುಪರ್ದಿಯಲ್ಲಿ ಹೆರಿಗೆ ಮಾಡಿಸಿರುವ ಮಕ್ಕಳ ಲೆಕ್ಕವನ್ನು ಇಟ್ಟಿಲ್ಲ. ೨೦೨೬ರಲ್ಲಿ ಭಾರತ ಸರ್ಕಾರ ಗೀತಾರ ಸೇವೆಯನ್ನು ಗುರುತಿಸಿ ೨೦೨೬ರಲ್ಲಿ ನರ್ಸ್‌ಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾದ ‘-ರೆನ್ಸ್ ನೈಟಿಂಗೇಲ್ ಪ್ರಶಸ್ತಿ’ಯನ್ನು ನೀಡಿ ಗೌರವಿಸಿತು. ಆದರೆ, ಗೀತಾ ಅದರ ಸಂತೋಷವನ್ನು ಅನುಭವಿಸುವ ಸ್ಥಿತಿಯಲ್ಲಿರಲಿಲ್ಲ. ಅವರಿಗೆ ಆ ಪ್ರಶಸ್ತಿ ಘೋಷಣೆಯಾದ ಮರುದಿನ ಅವರ ತಾಯಿ ತೀರಿಕೊಂಡರು. ಅದೇ ನೋವಿನಲ್ಲಿ ಅವರು ೨೦೨೬ರ ಮೇ ೧೨ರಂದು ರಾಷ್ಟ್ರಪತಿಯಿಂದ ಪ್ರಶಸ್ತಿ ಸ್ವೀಕರಿಸಿದರು.

” ಗೀತಾರ ಮೊತ್ತ ಮೊದಲ ಸವಾಲು ಅಲ್ಲಿನ ಮಹಿಳೆಯರನ್ನು ಮನೆಗಳಲ್ಲಿ ಹೆರಿಗೆ ಮಾಡಿಸಿಕೊಳ್ಳುವ ಬದಲು ತನ್ನ ವೈದ್ಯಕೀಯ ಕೇಂದ್ರಕ್ಕೆ ಬಂದು ವೈಜನಿಕವಾಗಿ ಮತ್ತು ಸುಕ್ಷಿತವಾಗಿ ಹೆರಿಗೆ ಮಾಡಿಸಿಕೊಳ್ಳಲು ಒಪ್ಪಿಸುವುದು. ಅವರು ಹಲವು ತಿಂಗಳ ಪರಿಶ್ರಮ, ತಾಳ್ಮೆ ಮತ್ತು ಕಾಳಜಿಯಿಂದ ಗರ್ಭಿಣಿಯರು ಮತ್ತು ಅವರ ಮನೆಯ ಹಿರಿಯರೊಂದಿಗೆ ಮಾತಾಡಿ, ಅವರಿಗೆ ತಿಳಿ ಹೇಳಿ ಆ ಬದಲಾವಣೆಯನ್ನು ತರುವುದರಲ್ಲಿ ಯಶಸ್ವಿಯಾದರು.”

 

 

ಆಂದೋಲನ ಡೆಸ್ಕ್

Recent Posts

ಮಾನವ ಕಲಿಯಬೇಕಾದ ಬದುಕಿನ ಪಾಠಗಳು

ಶ್ರೇಯಸ್ ದೇವನೂರು ಇಂದು ವಿಶ್ವ ಆನೆ ದಿನಾಚರಣೆ  ಭೂಮಿಯ ಮೇಲಿರುವ ಜೀವಿಗಳಲ್ಲಿ ಆನೆ, ಅತಿ ದೊಡ್ಡ ಪ್ರಾಣಿ ಮಾತ್ರವಲ್ಲ ,…

22 mins ago

ಸಿದ್ದರಾಮಯ್ಯ ಸಿದ್ಧಾಂತದ ಹೋರಾಟಕ್ಕೆ ಅಂತ್ಯವೆಂಬುದೇ ಇಲ್ಲ

ಆರ್.ಟಿ.ವಿಠ್ಠಲಮೂರ್ತಿ ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೊಸ ಮೈಲಿಗಲ್ಲಾಗಿ ದಾಖಲಾಗಿರುವ ಸಿದ್ದರಾಮಯ್ಯ ಅವರೀಗ ಮತ್ತೊಂದು ಪಯಣಕ್ಕೆ ಸಜ್ಜಾಗಬೇಕಿದೆ. ಇನ್ನು ಚುನಾವಣೆಗಳಲ್ಲಿ ಸ್ಪರ್ಧಿಸುವು…

31 mins ago

ಕಣ್ಮನ ಸೆಳೆಯುತ್ತಿದೆ ಮಲ್ಲಳ್ಳಿ ಜಲಪಾತ!

ಲಕ್ಷ್ಮೀಕಾಂತ್ ಕೊಮಾರಪ್ಪ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋಗುತ್ತಿರುವ ಪ್ರವಾಸಿಗರು ಸೋಮವಾರಪೇಟೆ: ಎತ್ತ ನೋಡಿದರೂ ಅಚ್ಚಹಸಿರಿನ ಕಾಡು ಸುಂದರ ಪ್ರಕೃತಿಯ ಸೊಬಗು... ನಿಮಿಷಕ್ಕೊಮ್ಮೆ…

36 mins ago

ಓದುಗರ ಪತ್ರ: ಸ್ಥಾನ…ಮಾನ !

ಸ್ಥಾನ...ಮಾನ ! ಅಳೆದೂ ಸುರಿದು ಅಲ್ಲಿಂದಿಲ್ಲಿಗೆ ಓಡಾಡಿ ಕೊಟ್ಟೂ ಕೊಡಲಾಗದೆ ಬಿಟ್ಟೂ ಇರಲಾಗದೆ ಉಳಿಸಿಕೊಂಡಿರುವುದು ಒಂದೇ ಒಂದು ಮಂತ್ರಿ ಸ್ಥಾನ…

41 mins ago

ಓದುಗರ ಪತ್ರ: ಸಚಿವ ಸ್ಥಾನ: ಹಿರಿಯರ ನಿರ್ಲಕ್ಷ್ಯ ಸರಿಯಲ್ಲ

ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದ ಮಂತ್ರಿಮಂಡಲ ವಿಸ್ತರಣೆಯಾಗಿ ೨೦ ಸ್ಥಾನಗಳ ಪೈಕಿ ೧೯ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕಾರ…

43 mins ago

ಓದುಗರ ಪತ್ರ: ತಂತ್ರಜ್ಞಾನಾಧಾರಿತ ನ್ಯೂಟ್ರಿ ಸ್ಕೋರ್ ಜಾರಿಗೆ ತನ್ನಿ

ದೇಶದಲ್ಲಿ ೪೦ ಕೋಟಿಗೂ ಹೆಚ್ಚು ಮಂದಿ ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದರೂ ಜಂಕ್ ಫುಡ್ ಕಂಪೆನಿಗಳು ಪೌಷ್ಟಿಕಾಂಶದ ವಿವರಗಳನ್ನು…

45 mins ago