ಜಿ.ಪಿ.ಬಸವರಾಜು
ಯಾಂತ್ರಿಕ ಬದುಕಿನ ಹಲವು ಪ್ರಶ್ನೆಗಳಿಗೆ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’ ಮಾಯಾ ನಗರಿಯಂತೆ ಕಾಣುವ ಮುಂಬೈ ನಗರ ಮೊದಲ ನೋಟದಲ್ಲೇ ಭಯಹುಟ್ಟಿಸುತ್ತದೆ. ವೇಗದ ಬದುಕು, ಯಾಂತ್ರಿಕ ನಡವಳಿಕೆ, ಓಡು, ನುಗ್ಗು, ಬಾಚಿಕೊ ಎನ್ನುವ ನಗರದಲ್ಲಿ ಉಸಿರಾಡುವುದೂ ಸಾಧ್ಯವಿಲ್ಲವೇನೋ ಎಂದೂ ಅನಿಸುತ್ತದೆ.
ಆದರೂ ಈ ನಗರದಲ್ಲಿ ಲೋಕಲ್ ಟ್ರೈನಿಗೆ ಹತ್ತಿಸುವ, ದಬ್ಬುವ ಕೈಗಳಿವೆ. ಮೈಚಾಚಲು ಜಾಗವೇ ಇಲ್ಲದ ಇಕ್ಕಟ್ಟಿನಲ್ಲಿಯೂ ಇನ್ನೊಂದು ಜೀವಕ್ಕೆ ನೆಲೆ ಕಲ್ಪಿಸುವ ಮನಸ್ಸುಗಳೂ ಇವೆ. ಇನ್ನೊಂದು ಜೀವದ ನೋವಿಗೆ ಮಿಡಿಯುವ ಹೃದಯಗಳೂ ಇವೆ.
ಇದೊಂದು ಸೋಜಿಗ. ಇದರ ಹಿಂದಿರುವ ಜೀವಸೆಲೆ ಎಲ್ಲಿಂದ ಉಕ್ಕುತ್ತದೆ? ಈ ಜೀವಸೆಲೆಗಳನ್ನು ಪೊರೆದಿರುವ ಶಕ್ತಿ ಯಾವುದು? ನಿತ್ಯದ ಯಾಂತ್ರಿಕ ಬದುಕಿನಲ್ಲಿ ಒಂದಿಷ್ಟು ಪ್ರೀತಿ, ಒಂದಿಷ್ಟು ಕರುಣೆ, ಒಂದಿಷ್ಟು ಮಾನವೀಯ ನಡವಳಿಕೆಗಳು ಎಲ್ಲಿ, ಹೇಗೆ ಉಳಿದು, ಬೆಳೆದವು? ಇಂಥ ಪ್ರಶ್ನೆಗಳನ್ನು ಕೇಳದೆಯೇ ಉತ್ತರಗಳನ್ನು ತೋರಿಸುವ ನಾಟಕ ‘ಅಮೃತಬಳ್ಳಿ ಕಷಾಯ’. ಇದೇ ಹೆಸರಿನ ಕತೆಯನ್ನು ಮೂವತ್ತು ವರ್ಷಗಳ ಹಿಂದೆ ಬರೆದವರು ಜಯಂತ್ ಕಾಯ್ಕಿಣಿ. ಕತೆಯನ್ನು ರಂಗದ ಮೇಲೆ ಮೂಡಿಸಿದವರು ಪ್ರಶಾಂತ ಹಿರೇ ಮಠ. ಕತೆ ಬಹಳ ಸೂಕ್ಷ್ಮವಾದದ್ದು; ರಂಗಭೂಮಿ ಭಾಷೆಯ ಈ ಸೂಕ್ಷ್ಮವನ್ನು ಹಿಡಿಯಲು ಬಹಳ ಶ್ರಮಿಸಬೇಕಾಗುತ್ತದೆ. ಸಾಹಿತ್ಯ ಭಾಷೆಗಿಂತ ರಂಗ ಭಾಷೆ ಭಿನ್ನವೂ, ಸಂಕೀರ್ಣವೂ ಆಗಿರುತ್ತದೆ. ಮಾತು, ನಟನೆ, ಬಟ್ಟೆ, ರಂಗ ವಿನ್ಯಾಸ, ಬೆಳಕಿನ ಸಂಯೋಜನೆ, ಸಂಗೀತ, ಕೊರಿಯೊಗ್ರಫಿ ಹೀಗೆ ಎಷ್ಟು ಸಂಗತಿಗಳು ರಂಗಭೂಮಿಯನ್ನು ನಿಯಂತ್ರಿಸುತ್ತಲೇ ಇರುತ್ತವೆ. ಒಂದು ಹೆಜ್ಜೆ ತಪ್ಪಿದರೆ ಉಣ್ಣುವ ಅನ್ನದಲ್ಲಿ ಕಲ್ಲು ಬಂದಂತೆ; ಬಿಸಿತುಪ್ಪವನ್ನು ಬಾಯಿಗೆ ಹಾಕಿಕೊಂಡಂತೆ.
ಪ್ರಶಾಂತ ಹಿರೇಮಠರ ರಂಗಾನುಭವ ನಾಲ್ಕು ದಶಕಗಳಿಗೆ ಕೈಚಾಚಿದ್ದು. ದೇಶ ಮತ್ತು ವಿದೇಶಗಳ ಪ್ರತಿಭಾವಂತ ನಿರ್ದೇಶಕರ ಅನುಭವವನ್ನು, ಪ್ರಯೋಗಗಳನ್ನು ಕಂಡದ್ದು. ಕೇವಲ ರಂಗ ಕಲಾವಿದರಾಗಿ ಉಳಿಯದೆ, ರಂಗಭೂಮಿಯ ಎಲ್ಲ ಪ್ರಧಾನ ಅಂಶಗಳಿಗೂ ತಮ್ಮ ಮೈ ಮನಸ್ಸುಗಳನ್ನು ತೆರೆದು ಪಕ್ವಗೊಂಡ ಪ್ರಶಾಂತ್, ಈ ಕಥೆಯನ್ನು ರಂಗದ ಮೇಲೆ ಕಟ್ಟಿದ ರೀತಿ ನೋಡುಗರ ಮನಸ್ಸನ್ನು ಸೂರೆಗೊಂಡಿತು.
ಫೋಟೋಗಳಿಗೆ ಕಟ್ಟುಹಾಕುವ ಒಂದು ಸಣ್ಣ ಅಂಗಡಿಯೇ ಇಲ್ಲಿ ಜೀವಸೆಲೆಯ ಪ್ರಧಾನ ಕೇಂದ್ರ. ಈ ಅಂಗಡಿಯ ಗಂಗಾಧರ, ಅವನ ತಾಯಿ ಮಾಯಿ, ಗಂಗಾಧರನ ಸಹಾಯಕ ಮತ್ತು ಈ ಕೇಂದ್ರದ ಸುತ್ತ ತಿರುಗುವ ಅನೇಕ ಅನಾಮಧೇಯ ಹೊಟ್ಟೆಪಾಡಿನ ಮಂದಿ ಮುಂಬೈ ನಗರದ ಜೀವಸೆಲೆಯನ್ನು ಉಕ್ಕಿಸುವವರು; ಅದು ಬತ್ತದಂತೆ ನೋಡಿಕೊಂಡವರು. ಮಾಯಿಯ ಅಮೃತಬಳ್ಳಿಯ ಕಷಾಯ ದಿವ್ಯೌಷಧಿಯಾಗಿ ಇಂಥಮ ಜೀವಗಳನ್ನು, ಜೀವಸೆಲೆಗಳನ್ನು ನಿರಂತರವಾಗಿ ಪೊರೆದಿದೆ. ನಾಟಕದ ಈ ಮೂಲ ಆಶಯಕ್ಕೆ, ನಡೆಗೆ ತೊಡಕಾಗದಂತೆ ರಂಗರೂಪವನ್ನು ಕಟ್ಟಿದವರು ಮಹೇಶ್ ಕುಮಾರ್ ಎನ್.
ಫೋಟೋಗಳಿಗೆ ಹಾಕುವ ಫ್ರೇಂ ಒಂದು ಚೌಕಟ್ಟು. ಸೂಕ್ಷ್ಮ ನೆಲೆಯಿಂದ ನೋಡಿದರೆ, ಈ ಚೌಕಟ್ಟು ಎಂಬುದು ಎಲ್ಲರ ಬದುಕಿಗೆ ಇರುವ ಚೌಕಟ್ಟು. ಈ ಚೌಕಟ್ಟುಗಳಿಂದಲೇ ಎಲ್ಲ ವ್ಯಕ್ತಿಗಳೂ ಅವತರಿಸುತ್ತಾರೆ. ಈ ಸಂಕೇತವನ್ನು ಸಮರ್ಥವಾಗಿ ಹಿಡಿಯಲು ಪ್ರಶಾಂತ್ ಚೌಕಟ್ಟುಗಳಿಂದಲೇ ಪಾತ್ರಗಳು ಹೊರಬರುವಂತೆ ತೋರಿಸಿದರು. ಈ ಚೌಕಟ್ಟಿನಲ್ಲಿಯೇ ಉಳಿದಿದ್ದ ಗಂಗಾಧರನ ದಿವಂಗತ ಅಪ್ಪ ಚೌಕಟ್ಟಿನಿಂದಲೇ ಹೊರಬರುವ ದೃಶ್ಯವನ್ನು ಬಹಳ ಜಾಣ್ಮೆಯಿಂದ ರೂಪಿಸಲಾಗಿತ್ತು. ಆದರೆ ಉಳಿದ ಕಡೆಗಳಲ್ಲಿ ಈ ಚೌಕಟ್ಟುಗಳ ಬಳಕೆ ಒಂದಿಷ್ಟು ಅತಿಯಾದಂತೆಯೂ ಭಾಸವಾಯಿತು.
ತನ್ನ ಅಪ್ಪನನ್ನು ತೋರಿಸಲು ಒಂದು ಫೋಟೋ ಬೇಕೆಂದು ಯುವ ಪ್ರೇಮಿಯೊಬ್ಬ ಗಂಗಾಧರನ ಅಂಗಡಿಗೆ ಬಂದು ಕೇಳುವ ಫೋಟೋ, ಗಂಗಾಧರನ ಅಪ್ಪನದೇ. ಭಾವನಾತ್ಮಕವಾಗಿ ಈ ಫೋಟೋ ಗಂಗಾಧರನಿಗೆ ಎಷ್ಟು ಮುಖ್ಯವಾದದ್ದು. ಆದರೆ ಯುವ ಪ್ರೇಮಿಗೂ ಈ ಫೋಟೊ ಮುಖ್ಯವಾದದ್ದೇ. ಇದಿಲ್ಲದೆ ಈ ಪ್ರೇಮಿಯ ವಿವಾಹವೇ ರದ್ದಾಗುವ ಸಾಧ್ಯತೆ ಇದೆ. ಈ ಫೋಟೋವನ್ನು ಕೊಡುವುದೆಂದರೆ ಗಂಗಾಧರನಿಗೆ ತನ್ನ ತಂದೆಯನ್ನೇ ಕೊಟ್ಟಂತೆ. ಭಾರವಾದ ಹೃದಯದಿಂದ ಈ ಫೋಟೊ ಕೊಡುವ ದೃಶ್ಯ ಹೃದಯ ಮಿಡಿಯುವಂತಿತ್ತು.
ಗುಲಾಬಿ ಕೂಡ ಈ ನಾಟಕದಲ್ಲಿ ಬಹುಮುಖ್ಯ ವಸ್ತುವಾಗುತ್ತದೆ. ಪಾರ್ಕಿನಲ್ಲಿ ಮಲಗಿದ ವ್ಯಕ್ತಿಯೊಬ್ಬ ಯುವ ಪ್ರೇಮಿಗಳಿಗೆ ಕೊಡುವ ಗುಲಾಬಿ (ತುಸು ರೊಮ್ಯಾಂಟಿಕ್), ಅಲ್ಲಿಗೇ ನಿಲ್ಲುವುದಿಲ್ಲ. ಪಾರ್ಕಿನಲ್ಲಿ ಬೀಟ್‌ಗೆ ಬರುವ ಪೊಲೀಸನಿಗೂ ಈ ಗುಲಾಬಿ ಸಲ್ಲುತ್ತದೆ. ಬಹಳ ಸೂಕ್ಷ್ಮವಾದ ಈ ದೃಶ್ಯವನ್ನು ಇನ್ನಷ್ಟು ಅರ್ಥಪೂರ್ಣವಾಗಿ (ಇಡೀ ಗುಲಾಬಿ ಸ್ಕ್ರೀನನ್ನು ತುಂಬುವ ರೀತಿಯಲ್ಲಿ ಬಿಂಬಿಸಿ) ಮಾಡಬಹುದಾಗಿತ್ತು. (ಆಗ ರೊಮ್ಯಾಂಟಿಕ್ ಆಗದೆ ನಾಟಕ ಬೇರೊಂದು ನೆಲೆಗೆ ಜಿಗಿಯುತ್ತಿತ್ತು) ನಗರದಲ್ಲಿ ಎದ್ದ ದಂಗೆಯ ಕಾಳ್ಗಿಚ್ಚನ್ನು ಕೇವಲ ಬೆಳಕು ಮತ್ತು ಧ್ವನಿಗಳ ಮೂಲಕ ಕಟ್ಟಿಕೊಟ್ಟ ರೀತಿ ಪ್ರತಿಭಾಪೂರ್ಣವಾಗಿತ್ತು. ಈ ಕಾಳ್ಗಿಚ್ಚಿನ ಅಬ್ಬರವನ್ನು ಸ್ವಲ್ಪ ನಿಯಂತ್ರಿಸಲು ಸಾಧ್ಯವಾಗಿದ್ದರೆ ಪರಿಣಾಮ ಇನ್ನೂ ಗಾಢವಾಗುತ್ತಿತ್ತು. ಸೈರನ್‌ಗಳ ಧ್ವನಿ, ಲೋಕಲ್ ಟ್ರೇನಿನ ಸದ್ದು ಎಲ್ಲವೂ ನಾಟಕದ ಆಶಯಕ್ಕೆ ಪೂರಕವಾಗಿದ್ದವು.
ನಾಟಕವನ್ನು ಮುನ್ನಡೆಸುವಲ್ಲಿ ಬೆಂಬಲವಾಗಿ ನಿಂತದ್ದು ಸಂಗೀತ. ಮರಾಠಿ ಗೀತೆಗಳನ್ನು ಬಳಸಿಕೊಂಡ ವೈವಿಧ್ಯಮಯ ಸಂಗೀತ (ಪ್ರಶಾಂತ ಹಿರೇಮಠ) ಮೆಚ್ಚುವಂತಿತ್ತು. ಕಷಾಯ ಕುಡಿಸುವ ಮಾಯಿ ಒಂದಿಷ್ಟು ರೊಮ್ಯಾಂಟಿಕ್ ಆಗಿ, ಕತೆ ಮುಂಬೈ ನಗರದ ವೈಭವೀಕರಣಕ್ಕೆ ಕೈಚಾಚಿದಂತೆ ಕಂಡಿತು. ನಾಟಕವೂ ಇದೇ ಜಾಡಿನಲ್ಲಿ ನಡೆಯುವುದನ್ನು, ಮಾತು ಮತ್ತು ಅಭಿನಯಗಳಿಂದ ತಪ್ಪಿಸಬಹುದಿತ್ತು.
ರಂಗವಿನ್ಯಾಸ (ಎಚ್.ಕೆ.ದ್ವಾರಕಾನಾಥ್), ಬೆಳಕಿನ ವಿನ್ಯಾಸ (ಕೃಷ್ಣಕುಮಾರ್ ನಾರ್ಣಕಜೆ) ಮತ್ತು ವಸ್ತ್ರ ವಿನ್ಯಾಸ(ನಂದಿನಿ ಕೆ.ಆರ್.), ಪ್ರಸಾಧನ (ಸಂತೋಷಕುಮಾರ್ ಕುಸನೂರ್) ಎಲ್ಲವೂ ಪ್ರತಿಭಾಪೂರ್ಣವಾಗಿ, ರಂಗಾಯಣ ಅನುಭವದ ಘನ ರೂಪವಾಗಿ, ಕ್ರಿಯಾಶೀಲವಾಗಿ ನಾಟಕವನ್ನು ಸಮರ್ಥವಾಗಿ ಕಟ್ಟಲು ಕೊಡುಗೆ ನೀಡಿದವು.
ಪ್ರಯಾಗ್ ಜೆ.ಕೋರೆ (ವಿಕ್ಕಿ) ತನ್ನ ಚುರುಕುತನದಿಂದ ರಂಗಕ್ಕೆ ಜೀವತುಂಬಿದರೆ, ಸ್ವರೂಪ್ (ಗಂಗಾಧರ) ತಮ್ಮ ಭಾವಪೂರ್ಣ ಅಭಿನಯದಿಂದ ಹೃದಯ ಗೆದ್ದರು. ಕನಸಿನಲ್ಲಿ ಬಂದುಹೋಗುವಂತೆ (ನಾಟಕದಲ್ಲಿ ನಿಜಕ್ಕೂ ಕನಸಿನಲ್ಲಿ ಬರುವ ಪಾತ್ರವೇ) ಬಂದುಹೋದ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಬೆರಗುಗೊಳಿಸಿದರು. ಗೀತಾ (ಮಾಯಿ), ರಮ್ಯಾ ಶೇಖರ್ ಬಿ.(ದುರ್ಗಾಜಿ), ನಾಗೇಂದ್ರ ಶ್ರೀನಿವಾಸ (ಭಾಸ್ಕರ) ಅವರ ಅಭಿನಯ ನೆನಪಿನಲ್ಲಿ ಉಳಿದವು. ‘ಶಿವ’ ಹೊಸ ತಂಡವಾಗಿ ತಲೆ ಎತ್ತಿ ತನ್ನ ಘನತೆಯನ್ನು ಉಳಿಸಿಕೊಂಡಿದೆ.
‘ಪ್ರತಾಪ’ಕ್ಕೆ ಸವಾಲು ಈ ನೀಲಿ ಇದು ನಮ್ಮ ಸೂರು ಆಕಾಶದ ನೀಲಿ ಇದು ನನ್ನವ್ವ ಸುತ್ತಿಕೊಂಡ ಸೀರೆಯ ನೀಲಿ ನನಗೆ…
ಪ್ರಸ್ತುತ ಆಂಡ್ರಾಯ್ಡ ಮೊಬೈಲ್‌ನಿಂದಲೇ ದಿನನಿತ್ಯದ ಕೆಲಸಗಳು ಆರಂಭವಾಗಿ ಅವುಗಳಿಂದಲೇ ದಿನ ಮುಕ್ತಾಯ ಅನ್ನುವಷ್ಟರ ಮಟ್ಟಿಗೆ ಅನಿವಾರ್ಯತೆ ನಿರ್ಮಾಣವಾಗಿದೆ. ಮೊಬೈಲ್ ಇಲ್ಲದೆ…
ಹೆಚ್. ಡಿ. ಕೋಟೆ ತಾಲ್ಲೂಕು ಕೇಂದ್ರ ಸ್ಥಳದಲ್ಲಿ ಕೆಲವು ಸರ್ಕಾರಿ ಇಲಾಖೆಗಳು ಹಾಗೂ ಹಾಸ್ಟೆಲ್‌ಗಳು ಖಾಸಗಿ ಕಟ್ಟಡಗಳಲ್ಲಿ ಕಾರ್ಯನಿರ್ವಣೆ ಮಾಡುತ್ತಿವೆ.…
ಎಸ್.ಎಲ್.ಚನ್ನಬಸವಣ್ಣ , ಉಪನಿರ್ದೇಶಕರು ಕರ್ನಾಟಕ ಪೊಲೀಸ್ ಅಕಾಡೆಮಿ ಮೈಸೂರು ಸದಾ ಜಾಗೃತವಾಗಿರುವ ಸಮಯಪಾಲನೆಯ ವಿವೇಚನೆ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು…
ಕೆ.ಬಿ.ರಮೇಶನಾಯಕ ಉತ್ತನಹಳ್ಳಿ ಗ್ರಾಮದ ಬಳಿ ಯುವ ದಸರಾ, ಸಾತಗಳ್ಳಿ ವಿಟಿಯು ಸಮೀಪ ಕಂಬಳ ಕ್ರೀಡೆ ಆಯೋಜನೆ; ವೀಕ್ಷಕರ ಬೇಡಿಕೆಗೆ ತಕ್ಕಂತೆ…